ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಅಂಬೇಡ್ಕರ್ ಪ್ರತಿಮೆಗೆ ಅವಮಾನ: ಪ್ರತಿಭಟನೆ

Published 20 ಜನವರಿ 2024, 5:47 IST
Last Updated 20 ಜನವರಿ 2024, 5:47 IST
ಅಕ್ಷರ ಗಾತ್ರ

ರಾಮನಗರ: ಕೊಪ್ಪಳ ಜಿಲ್ಲೆಯ ಗಂಗಾವತಿಯ ನ್ಯಾಯಾಲಯ ಸಂಕೀರ್ಣ ಎದುರಿನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮತ್ತು ಅದರ ಮುಂಭಾಗದ ಫೋಸ್ಟರ್‌ಗೆ ಕಿಡಿಗೇಡಿಗಳು ಕೊಳಚೆ ಎರಚಿ ಅವಮಾನ ಮಾಡಿರುವುದು ಖಂಡಿಸಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಕಚೇರಿ ಎದುರು ಜಮಾಯಿಸಿದ ಸದಸ್ಯರು ಕಿಡಿಗೇಡಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ತಪ್ಪಿತಸ್ಥರನ್ನು ಪೊಲೀಸರು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಘಟನೆ ನಡೆದು ಎರಡು ವಾರವಾಗುತ್ತಾ ಬಂದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಡಿ. ನಾರಾಯಣ್ ಮಾತನಾಡಿ, ‘ಶೋಷಿತರ ಪಾಲಿನ ದೈವವಾದ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಪ್ರತಿಮೆ ಹಾನಿಗೊಳಿಸುವುದು, ಪೋಸ್ಟರ್ ಅಥವಾ ಚಿತ್ರಗಳಿಗೆ ಮಸಿ ಬಳಿಯುವ ಕೃತ್ಯಗಳು ನಡೆಯುತ್ತಲೇ ಇವೆ’ ಎಂದು ಹೇಳಿದರು.

‘ಅವಮಾನಕಾರಿ ಕೃತ್ಯಗಳು ಸಂಭವಿಸಿದಾಗ ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಸರ್ಕಾರ ಸಹ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಗಂಗಾವತಿ ಘಟನೆಗೆ ಸಂಬಂಧಿಸಿದಂತೆ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ದಲಿತ ಸಂಘರ್ಷ ಸಮಿತಿ ವತಿಯಿಂದ ಜೈಲ್ ಬರೋ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ನಂತರ, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕರಾದ ಕೆ. ಶಿವಶಂಕರ್, ವಿಜಯಮ್ಮ, ಅಪ್ಪಾಜಿ, ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬೈರಲಿಂಗಯ್ಯ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT