ಶುಕ್ರವಾರ, ಮೇ 7, 2021
19 °C
38 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ: ತಹಶೀಲ್ದಾರ್‌ ತಂಡ ಭೇಟಿ

ಕನಕಪುರ: ಜೈನ್‌ ಸ್ಕೂಲ್‌ ಸೀಲ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಕೋವಿಡ್‌ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜೈನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಅನ್ನು ನಿಷೇಧಿತ ವಲಯವಾಗಿ ಘೋಷಿಸಿ ಸೀಲ್‌ಡೌನ್‌ ಮಾಡಲಾಗಿದೆ ಎಂದು ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ತಿಳಿಸಿದರು.

ತಾಲ್ಲೂಕಿನ ಜಕ್ಕಸಂದ್ರ ಬಳಿಯಿರುವ ಜೈನ್‌ ಯೂನಿವರ್ಸಿಟಿಯ ಅಂತರರಾಷ್ಟ್ರೀಯ ಮಟ್ಟದ ಶಾಲೆಯಲ್ಲಿ 280 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 38 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿರುವ ಕಾರಣ ಸೋಮವಾರ ಶಾಲೆಯನ್ನು ಸೀಲ್‌ಡೌನ್‌
ಮಾಡಿದರು.

ಹದಿನಾಲ್ಕು ದಿನಗಳ ಕಾಲ ಈ ಪ್ರದೇಶದ ಒಳಗೆ ಮತ್ತು ಹೊರಗೆ ಯಾರು ಹೋಗುವಂತಿಲ್ಲ. ನಿಷೇಧಿತ ಈ ವಲಯದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಿಡಿಸಿದ್ದು ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ತಪಾಸಣೆಯನ್ನು ನಡೆಸಿ ಸೋಂಕು ತಗುಲಿರುವವರನ್ನು ಪ್ರತ್ಯೇಕಿಸಿ ಇಲ್ಲಿಯೇ ಐಸೋಲೇಶನ್‌ ಮಾಡಲಾಗಿದೆ ಎಂದು ತಿಳಿಸಿದರು.

ಉಳಿದಂತೆ ಅವರ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳು, ಶಿಕ್ಷಕರನ್ನು ಕ್ವಾರಂಟೈನ್‌ ಮಾಡಲಾಗಿದೆ. ಮತ್ತೆ 6 ದಿನಗಳ ನಂತರ ಪರೀಕ್ಷಿಸಿ ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಸೋಮವಾರ ಹಾರೋಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ್ದು, ಕೆಲವು ಭಾಗದಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಎಲ್ಲಿ ಸೋಂಕು ಹೆಚ್ಚಾಗಿ ಕಾಣಿಸುತ್ತಿದೆಯೋ ಅಲ್ಲಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ಸೋಂಕಿನ ಸರಪಳಿ ತುಂಡರಿಸಲು ಪ್ರಯತ್ನಿಸಲಾಗುತ್ತಿದೆ. ಹಳ್ಳಿಗಳಲ್ಲೂ ಸೋಂಕು ಇರುವ ಕಡೆ ದ್ರಾವಣ ಸಿಂಪಡಣೆ ಮಾಡಲಾಗುವುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ಲಕ್ಷಣ ಇರುವವರು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಬಾರದೆ ಖಾಸಗಿ ವೈದ್ಯರ ಬಳಿ ತಾತ್ಕಾಲಿಕ ಚಿಕಿತ್ಸೆ ಪಡೆದು ಸುಮ್ಮನಾಗುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಸೋಂಕು ನಿವಾರಣೆ ಆಗುವುದಿಲ್ಲ. ಬದಲಾಗಿ ಸಮಸ್ಯೆ ಹೆಚ್ಚಾಗಲಿದೆ. ಅವರ ಜತೆಗೆ ಇಡೀ ಕುಟುಂಬಕ್ಕೆ ಸೋಂಕು ವ್ಯಾಪಿಸಲಿದೆ. ಇದಕ್ಕೆ ಅವಕಾಶ ಕೊಡದೆ ಕೋವಿಡ್‌ ವಾರ್‌ ರೂಂಗೆ ಮಾಹಿತಿ ನೀಡಿ ಸೋಂಕು ತಡೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಡಿವೈಎಸ್‌ಪಿ ರಮೇಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ರಾಮಪ್ಪ ಗುತ್ತೇರ್‌, ಟಿ.ಟಿ. ಕೃಷ್ಣ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ನವೀನ್‌, ಮುರಳಿ, ಆರ್‌ಐ ಚನ್ನೇಗೌಡ, ಹಾರೋಹಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಕಿರಣ್‌, ಹಾರೋಹಳ್ಳಿ ಪಿಡಿಒ ಸಮದ್‌ ಓಲೇಕರ್‌
ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು