ಶನಿವಾರ, ನವೆಂಬರ್ 26, 2022
22 °C

ಆಹ್ವಾನ ಪತ್ರಿಕೆ ಹಚ್ಚಿದ ಕಿಚ್ಚು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೆಆರ್‌ಐಡಿಎಲ್‌ನಿಂದ ಚನ್ನಪಟ್ಟಣದ ಗ್ರಾಮೀಣ ರಸ್ತೆ ಮತ್ತು ಸಿ.ಸಿ. ಚರಂಡಿ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳ ₹50 ಕೋಟಿ ವಿಶೇಷ ಅನುದಾನ ಬಿಡುಗಡೆ ಆಗಿದೆ. ಈ ಅನುದಾನದಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಶನಿವಾರ ನಿಗದಿಯಾಗಿತ್ತು.  ಭೂಮಿಪೂಜೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ಯೋಗೇಶ್ವರ್‌ ಹೆಸರನ್ನು ವಿಶೇಷವಾಗಿ ಉಲ್ಲೇಖಿಸಿದ್ದೇ ಜೆಡಿಎಸ್ ಕಾರ್ಯಕರ್ತರ ಸಿಟ್ಟಿಗೆ ಕಾರಣ ಎಂದು ಹೇಳಲಾಗಿದೆ.

‘ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಕೋರಿಕೆ ಮೇರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹50 ಕೋಟಿ’ ಎಂದು ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ಮುದ್ರಿಸಲಾಗಿದೆ. ಹೀಗೆ ರಾತ್ರೋರಾತ್ರಿ ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಿದ್ದು, ಶಾಸಕರ ಗಮನಕ್ಕೆ ತಂದಿಲ್ಲ. ಈ ಅನುದಾನ ಬರಲು ಕುಮಾರಸ್ವಾಮಿ ಕಾರಣ ಎನ್ನುವುದು
ಜೆಡಿಎಸ್ ವಾದ. 

‘ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಜಿಲ್ಲಾಧಿಕಾರಿ ಕಾರ್ಯಕ್ರಮ ರದ್ದು ಮಾಡಿದ್ದರೂ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಶೇ 40 ಕಮಿಷನ್ ಆಸೆಗೆ ಈ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚನ್ನ‍ಪಟ್ಟಣ ತಾಲ್ಲೂಕಿನ ರಾಂಪುರದಲ್ಲಿ ಸಿ.ಪಿ. ಯೋಗೇಶ್ವರ್‌ ಬೆಳಗ್ಗೆ ಕಾಮಗಾರಿಗೆ ಚಾಲನೆ ನೀಡುವ ಮುನ್ನವೇ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಆರಂಭಿಸಿದರು. ಬಳಿಕ ಬೈರಾಪಟ್ಟಣ, ಪಟ್ಲು, ಅಕ್ಕೂರು–ಹೊಸಹಳ್ಳಿ, ಕೋಡಂಬಳ್ಳಿ ಸೇರಿದಂತೆ ಕಾರ್ಯಕ್ರಮ ನಿಗದಿಯಾಗಿದ್ದ ಐದು ಗ್ರಾಮಗಳಲ್ಲಿಯೂ ಪ್ರತಿಭಟನೆ ನಡೆಯಿತು. ಯೋಗೇಶ್ವರ್ ಪೊಲೀಸ್ ಭದ್ರತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

'ಜೆಡಿಎಸ್ ನ ನರಸಿಂಹಮೂರ್ತಿ ಸೇರಿದಂತೆ ಹಲವರನ್ನು ಹೊರಗಿನಿಂದ ಕರೆತಂದು ಗಲಾಟೆ ಮಾಡಿಸಲಾಗಿದೆ. ಕುಮಾರಸ್ವಾಮಿ ಅವರ ನಡೆಗೆ ಬೇಸತ್ತು ಚನ್ನಪಟ್ಟಣದಲ್ಲಿ ಬಹುತೇಕ ಮುಖಂಡರು ಮತ್ತು ಕಾರ್ಯಕರ್ತರು  ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದನ್ನು ಸಹಿಸಲು ಕುಮಾರಸ್ವಾಮಿ ಅವರಿಗೆ ಆಗುತ್ತಿಲ್ಲ' ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.