ರಾಮನಗರ: ‘ರಾಜ್ಯವನ್ನು ಹಸಿವು ಮುಕ್ತಗೊಳಿಸುವ ರಾಜ್ಯ ಸರ್ಕಾರದ ಸಂಕಲ್ಪವನ್ನು ಸಾಕಾರಗೊಳಿಸಲು ಅಧಿಕಾರಿಗಳು ಕೈ ಜೋಡಿಸಬೇಕು. ಅನ್ನಭಾಗ್ಯ ಯೋಜನೆಯನ್ನು ಪ್ರತಿ ಫಲಾನುಭವಿಗೂ ತಲುಪಿಸಬೇಕು’ ಎಂದು ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ 559 ಪಡಿತರ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಅನ್ನಭಾಗ್ಯ ಯೋಜನೆಯಡಿ ಈ ತಿಂಗಳ ಪ್ರಾರಂಭದಲ್ಲಿ ಜಿಲ್ಲೆಯಲ್ಲಿ 18,969 ಅಂತ್ಯೋದಯ, 2,77,805 ಬಿಪಿಎಲ್ ಹಾಗೂ 17,738 ಎಪಿಎಲ್ ಪಡಿತರ ಚೀಟಿಗಳು ಸೇರಿದಂತೆ ಒಟ್ಟು 3,14,512 ಚೀಟಿಗಳು ಚಾಲ್ತಿಯಲ್ಲಿವೆ’ ಎಂದರು.
‘ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ವಿತರಣೆ ಬದಲಿಗೆ ಪ್ರತಿ ಕೆ.ಜಿ.ಗೆ ₹34ರಂತೆ ಫಲಾನುಭವಿ ಖಾತೆಗೆ ₹170 ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುತ್ತಿದೆ. ಜುಲೈನಲ್ಲಿ ಜಿಲ್ಲೆಯ 2,36,903 ಪಡಿತರ ಚೀಟಿದಾರರ ಸದಸ್ಯರಗಳ ಪೈಕಿ, ಫಲಾನುಭವಿಗಳಿಗೆ ₹13 ಕೋಟಿಯನ್ನು ಪಾವತಿಸಲಾಗಿದೆ’ ಎಂದು ತಿಳಿಸಿದರು.
‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಶೇ 81.72ರಷ್ಟು ಸಾಧನೆಯಾಗಿದೆ. ರಾಜ್ಯದಲ್ಲಿ ಜಿಲ್ಲೆಯು 7ನೇ ಸ್ಥಾನದಲ್ಲಿದೆ’ ಎಂದರು.
ಬೀಜ ವಿತರಣೆ ಗುರಿ: ‘2023ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳ 3,570 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಗೆ ಗುರಿ ನಿಗದಿಯಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣ ತೋಟಗಾರಿಕೆ ಕ್ಷೇತ್ರದಲ್ಲಿ ಆರ್.ಕೆ.ವಿ.ವೈ ಯೋಜನೆಯಡಿ ₹10 ಕೋಟಿ ವೆಚ್ಚದಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.
‘ರಾಮನಗರಕ್ಕೆ ಕನಕಪುರ ಅರಣ್ಯ ಪ್ರದೇಶ, ಕಾವೇರಿ ವನ್ಯಜೀವಿಧಾಮ, ಬನ್ನೇರುಘಟ್ಟ ವನ್ಯಜೀವಿ ಅರಣ್ಯ ಪ್ರದೇಶಗಳಿಂದ ಕಾಡಾನೆಗಳು ದಾಳಿ ನಡೆಸುತ್ತಿದೆ. ಇವು ಕಬ್ಬಾಳು, ಸಾತನೂರು, ನರೀಕಲ್ಲು ಗುಡ್ಡ, ಅಚ್ಚಲು, ತೈಲೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆ ಹಾನಿ ಹಾಗೂ ಪ್ರಾಣಹಾನಿ ಮಾಡುತ್ತಿವೆ’ ಎಂದರು.
‘ಕಾಡಾನೆ ದಾಳಿ ತಡೆಯಲು ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಅರಣ್ಯ ಬಿಟ್ಟು ಹೊರ ಬಾರದಂತೆ ತಡೆಯಲು 49 ಕಿ.ಮೀ ಬ್ಯಾರಿಕೇಡ್ ನಿರ್ಮಿಸಲು ಕ್ರಮ ವಹಿಸಲಾಗಿದೆ. ಈಗಾಗಲೇ 38 ಕಿ.ಮೀ. ನಿರ್ಮಿಸಲಾಗಿದೆ’ ಎಂದು ತಿಳಿಸಿದರು.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ‘ನಗರದಲ್ಲಿ 8 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಫಲಾನುಭವಿಗಳ ಬ್ಯಾಂಕ್‌ಗೆ ₹13 ಕೋಟಿ ಪಾವತಿ ಗೃಹಲಕ್ಷ್ಮಿ ನೋಂದಣಿಯಲ್ಲಿ ಜಿಲ್ಲೆಗೆ 7ನೇ ಸ್ಥಾನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮನವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.