ಸೋಮವಾರ, ಜನವರಿ 27, 2020
22 °C

ಹಿಂದೂ ಜಾಗರಣ ವೇದಿಕೆಯಿಂದ ಇಂದು 'ಕನಕಪುರ ಚಲೋ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಹಾರೋಬೆಲೆ ಬಳಿಯ ಮುನೇಶ್ವರ (ಕಪಾಲಿ) ಬೆಟ್ಟವನ್ನು ಉಳಿಸುವಂತೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ್ಯವು ಜ. 13 ರಂದು 'ಕನಕಪುರ ಚಲೋ' ಪ್ರತಿಭಟನೆ ನಡೆಸಲಿದೆ ಎಂದು ವೇದಿಕೆ ಜಿಲ್ಲಾ ಸಂಚಾಲಕ ವೆಂಕಟೇಶ್‌ ತಿಳಿಸಿದ್ದಾರೆ. 

ಈ ಪ್ರತಿಭಟನೆಗೆ ಬಿಜೆಪಿ ಹಿಂದುಳಿದ ವಿಭಾಗ ಸಹ ಬೆಂಬಲ ಸೂಚಿಸಿದೆ. ‘ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಾಲ್ಗೊಳ್ಳಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಹಿಂದುಳಿದ ವಿಭಾಗದ ಅಧ್ಯಕ್ಷ ಜಿ.ನಾಗರಾಜು ಹೇಳಿದ್ದಾರೆ.

‘ಪ್ರತಿಭಟನೆ ವೇಳೆ ಎಂಥದ್ದೇ ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಶಾಂತಿ ಕದಡಬೇಡಿ. ಜಿಲ್ಲೆಯ ಹೆಸರು ಉಳಿಸಿ’ ಎಂದು ಕಾಂಗ್ರೆಸ್ ನಾಯಕ ಶಿವಕುಮಾರ್ ತಮ್ಮ ಬೆಂಬಲಿಗರು ಮತ್ತು ಜಿಲ್ಲೆಯ ನಾಗರಿಕರಿಗೆ ಮನವಿ ಮಾಡಿದ್ದಾರೆ.

‘114 ಅಡಿ ಎತ್ತರದ ಪ್ರತಿಮೆ ನಿರ್ಮಾಣದಿಂದ ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತದೆ, ಕ್ರೈಸ್ತ ಮಿಷನರಿಗಳಿಂದ ಹಣದ ಹೊಳೆಯೇ ಇಲ್ಲಿ ಹರಿಯಲಿದೆ. ಜನರಿಗೆ ಆಸೆ ಆಮಿಷಗಳನ್ನು ಒಡ್ಡಿ ದೊಡ್ಡ ಮಟ್ಟದ ಮತಾಂತರ ಕಾರ್ಯ ನಡೆದು ರಾಮನಗರ ಜಿಲ್ಲೆಯನ್ನೇ ಕ್ರೈಸ್ತಮಯ ಮಾಡಲಾಗುತ್ತದೆ’ ಎಂದು ಪ್ರತಿಭಟನಕಾರರು ದೂರಿದ್ದಾರೆ.

ಪ್ರತಿಭಟನೆಯು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುವುದು. ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟು ಚನ್ನಬಸಪ್ಪ ವೃತ್ತದ ಅಶೋಕಸ್ತಂಭದ ಮುಂಭಾಗದಲ್ಲಿ ಸೇರಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಕಡ್ಕ ಪ್ರಭಾಕರ್‌ ಭಟ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಸುಮಾರು 10 ಸಾವಿರದಷ್ಟು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಆಯೋಜಕರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಶಾಂತಿ ಕಾಪಾಡಲು ಡಿಕೆಶಿ ಮನವಿ

ಪ್ರತಿಭಟನೆ ವೇಳೆ ಎಂಥದ್ದೇ ಪ್ರಚೋದನಾಕಾರಿ ಹೇಳಿಕೆಗಳನ್ನು ಪ್ರತಿಭಟನಾಕಾರರು ನೀಡಿದರೂ, ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡುವಂತೆ ಶಾಸಕ ಡಿ.ಕೆ.ಶಿವಕುಮರ್‌ ಅವರು ತಾಲ್ಲೂಕಿನ ಜನತೆಗೆ ಫೇಸ್‌ಬುಕ್‌ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು