ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2023 |ಕನಕಪುರಕ್ಕೆ ಸಿಕ್ಕಿದ ವೈದ್ಯಕೀಯ ಕಾಲೇಜು

Published 8 ಜುಲೈ 2023, 4:11 IST
Last Updated 8 ಜುಲೈ 2023, 4:11 IST
ಅಕ್ಷರ ಗಾತ್ರ

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮೊದಲ ಬಜೆಟ್‌ನಲ್ಲಿ ನಿರೀಕ್ಷೆಯಂತೆ, ಜಿಲ್ಲೆಯ ಕನಕಪುರ ತಾಲ್ಲೂಕಿಗೆ ವೈದ್ಯಕೀಯ ಕಾಲೇಜು ಒಲಿದಿದೆ. ಉಳಿದಂತೆ, ರಾಜಧಾನಿಗೆ ಹೊಂದಿಕೊಂಡಂತಿರುವ ಜಿಲ್ಲೆಯ ಅಭಿವೃದ್ಧಿಗೆ ವೇಗ ಕೊಡುವಂತಹ ಯಾವುದೇ ಹೊಸ ಯೋಜನೆಗಳಿಲ್ಲ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯವರೇ ಆಗಿದ್ದರಿಂದ, ಬಜೆಟ್‌ನಲ್ಲಿ ಬಂಪರ್ ಯೋಜನೆಗಳು ಜಿಲ್ಲೆಗೆ ಸಿಗುವ ನಿರೀಕ್ಷೆ ಜನರಲ್ಲಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರಕ್ಕೆ ಹೆಚ್ಚಿನ ಬಲ ತುಂಬಿದ ರಾಮನಗರಕ್ಕೆ ಹೇಳಿಕೊಳ್ಳುವಂತಹ ಕೊಡುಗೆಗಳು ಸಿಕ್ಕಿಲ್ಲದಿರುವುದು ನಿರಾಶೆ ಮೂಡಿಸಿದೆ.

ಪ್ರಸ್ತಾಪಕ್ಕಷ್ಟೇ ಸೀಮಿತ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ, ಭೂ ಸ್ವಾಧೀನ ಪ್ರಕ್ರಿಯೆಗೆ ಕ್ರಮ ಕೈಗೊಳ್ಳುವ ಕುರಿತು ಮಾತ್ರ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಹೆಚ್ಚುವರಿ ಅನುದಾನ ಹಾಗೂ ಯೋಜನೆಗೆ ಚಾಲನೆ ನೀಡುವಂತಹ ಯಾವುದೇ ಘೋಷಣೆ ಮಾಡಿಲ್ಲ.

ಜಾನಪದ ಕಲೆಗಳನ್ನು ಪೋಷಿಸುತ್ತಾ ಬಂದಿರುವ ನಗರದ ಹೊರವಲಯದ ಜಾನಪದ ಲೋಕಕ್ಕೆ ₹2 ಕೋಟಿ ಘೋಷಿಸಿರುವುದು, ಆ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ಕೊಟ್ಟಂತಾಗಿದೆ.

ರೈತರು ನಿಟ್ಟುಸಿರು

ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಕಾಡಾನೆ ದಾಳಿ ತಡೆಗೆ ಆನೆ ಕಾರ್ಯಪಡೆ ರಚನೆಯ ಭರವಸೆ ಕಡೆಗೂ ಬಜೆಟ್‌ನಲ್ಲಿ ಈಡೇರಿದೆ. ಆನೆಗಳು ಕಾಡು ಬಿಟ್ಟು ನಾಡು ಸೇರದಂತೆ ಬ್ಯಾರಿಕೇಡ್ ನಿರ್ಮಿಸಲು ₹120 ಕೋಟಿ ತೆಗೆದಿರಿಸಲಾಗಿದೆ. ಇವೆರಡರಿಂದಾಗಿ ಈ ಭಾಗದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಶೂನ್ಯ ಬಡ್ಡಿದರದಲ್ಲಿ ₹5 ಲಕ್ಷದವರೆಗೆ ಸಾಲ ಸೌಲಭ್ಯ, ಇದೇ ಕೆಲಸವನ್ನು ನೆಚ್ಚಿಕೊಂಡಿದ್ದ ಕುಟುಂಬಗಳ ಮೊಗದಲ್ಲಿ ಕಿರುನಗೆ ತರಿಸಿದೆ. ಅಲ್ಪಸಂಖ್ಯಾತ ಯುವಜನರಿಗೆ  ಜಿಲ್ಲೆಯಲ್ಲಿ ಕೌಶಲ ತರಬೇತಿ ಕೇಂದ್ರ ಸ್ಥಾಪನೆ, ಆ ಸಮುದಾಯದವರ ಸ್ವಾವಲಂಬನೆಗೆ ನೆರವಾಗಲಿದೆ.

ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಿಸುವ ಹಿಂದಿನ ಸರ್ಕಾರದ ಯೋಜನೆಗೆ, ಕಾಂಗ್ರೆಸ್ ಸರ್ಕಾರ ಸೊಪ್ಪು ಹಾಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT