ಬುಧವಾರ, ಸೆಪ್ಟೆಂಬರ್ 29, 2021
19 °C

ಮೈತ್ರಿ ಕಸರತ್ತು: ಎಚ್‌.ಡಿ. ಕುಮಾರಸ್ವಾಮಿ ಭೇಟಿಯಾದ ಸಚಿವ ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ಮುಂದುವರಿದಿದ್ದು, ಕಂದಾಯ ಸಚಿವ ಆರ್. ಅಶೋಕ್‌ ಶನಿವಾರ ಬಿಡದಿಯ ತೋಟದ ಮನೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದರು.

ಕಲಬುರ್ಗಿ ಮಹಾನಗರ ಪಾಲಿಕೆ ಹಾಗೂ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಸಂಬಂಧ ಅಶೋಕ್, ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದರು. ದೊಡ್ಡಬಳ್ಳಾಪುರದಲ್ಲಿ ಮೈತ್ರಿಗೆ ಹಸಿರು ನಿಶಾನೆ ತೋರಿರುವ ಎಚ್‌ಡಿಕೆ, ಕಲಬುರ್ಗಿ ವಿಚಾರದಲ್ಲಿ ದೇವೇಗೌಡರನ್ನು ಸಂಪರ್ಕಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು ಎನ್ನಲಾಗಿದೆ.

ಭೇಟಿ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅಶೋಕ್ ‘ಹೊಂದಾಣಿಕೆ ಬಗ್ಗೆ ಬಿಜೆಪಿಯಿಂದ ಪ್ರಸ್ತಾವ ಮಾಡಿದ್ದೇನೆ. ಸೋಮವಾರದಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಆ ಸಂದರ್ಭ ಮಾತುಕತೆ ನಡೆಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ’ ಎಂದು ತಿಳಿಸಿದರು.

‘ಚುನಾವಣೆ ಮಾತುಕತೆಗೆ ಬರುವಂತೆ ಶಾಸಕ ಸಾ.ರಾ. ಮಹೇಶ್‌ ದೂರವಾಣಿ ಮೂಲಕ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ದೊಡ್ಡಬಳ್ಳಾಪುರಕ್ಕೆ ಸಂಬಂಧಿಸಿದಂತೆ ‍ಪಾಸಿಟಿವ್‌ ಅಭಿಪ್ರಾಯ ಸಿಕ್ಕಿದೆ. ಸೋಮವಾರ ಮಧ್ಯಾಹ್ನ 4ಕ್ಕೆ ಜೆಡಿಎಸ್ ಸಭೆ ನಡೆಯಲಿದ್ದು, ಆ ಬಳಿಕ ಅವರು ಅಭಿಪ್ರಾಯ ತಿಳಿಸಲಿದ್ದಾರೆ’ ಎಂದರು. ಕಲಬುರ್ಗಿ ಪಾಲಿಕೆಯಲ್ಲಿ ಮೇಯರ್‌ ಸ್ಥಾನಕ್ಕೆ ಜೆಡಿಎಸ್‌ ಬೇಡಿಕೆ ಇಟ್ಟಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

‘ಕಲಬುರ್ಗಿಯಲ್ಲಿ ಈಗಾಗಲೇ ಜೆಡಿಎಸ್ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದೆ ಎನ್ನುವುದು ಸುಳ್ಳು ಸುದ್ದಿ. ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಗೊಂದಲ ಇದೆ. ಜೆಡಿಎಸ್ ಜೊತೆ ಇನ್ನೂ ಸಿದ್ದರಾಮಯ್ಯ ಅವರೇ ಒಪ್ಪಿಲ್ಲ’ ಎಂದರು.

ಇದನ್ನೂ ಓದಿ... ಕಾಂಗ್ರೆಸ್‌ನಿಂದ ಬರುವುದಕ್ಕೆ ಬಿಜೆಪಿಯವರು ಹಣದ ಆಫರ್ ಕೊಟ್ಟಿದ್ದು ನಿಜ: ಪಾಟೀಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು