ಭಾನುವಾರ, ಜೂನ್ 26, 2022
29 °C
ಕನಕಪುರ ತಾಲ್ಲೂಕು ಸಾತನೂರು ಹೋಬಳಿಯ ಕಾರ್ಯಪಡೆ ಸಮಿತಿ ಸಭೆ

ನಗರದಿಂದ ಹಳ್ಳಿಗೆ ಬಂದವರ ಮೇಲೆ ನಿಗಾ: ತಹಶೀಲ್ದಾರ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಬರುತ್ತಿರುವವರ ಸಂಖ್ಯೆಯು ಹೆಚ್ಚಾಗಿದೆ. ಇದರಿಂದ ಸೋಂಕು ಹೆಚ್ಚಾಗಿ ಇತರರಿಗೆ ಹರಡುವ ಸಾಧ್ಯತೆಯಿದೆ. ಹಳ್ಳಿಗೆ ಬರುವವರ ಮಾಹಿತಿಯನ್ನು ಕಲೆಹಾಕಿ ಅವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಿ ಹೋಂ ಕ್ವಾರಂಟೈನ್‌ ಮಾಡಬೇಕು. ಸೋಂಕು ಇತರರಿಗೆ ಹರಡದಂತೆ ಎಚ್ಚರವಹಿಸಬೇಕು ಎಂದು ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌
ತಿಳಿಸಿದರು.

ತಾಲ್ಲೂಕಿನ ಸಾತನೂರು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಹೋಬಳಿ ಕೊರೊನಾ ಟಾಕ್ಸ್‌ಪೋರ್ಸ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ನಿಯಂತ್ರಿಸಲು ಇರುವ ವ್ಯಕ್ತಿಗಳೂ ಇದ್ದಲ್ಲೇ ಇರಬೇಕು. ಮನೆಯಿಂದ ಯಾರು ಹೊರಗಡೆ ಬರಬಾರದೆಂಬ ಕಾರಣಕ್ಕೆ ಸರ್ಕಾರ ಲಾಕ್‌ಡೌನ್‌ ಮಾಡಿದೆ. ಆದರೆ, ಜನರ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ನಗರ ಪ್ರದೇಶಗಳಿಂದ ತಪ್ಪಿಸಿಕೊಂಡು ಬಂದು ಹಳ್ಳಿಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಕೊರೊನಾ ಮುಕ್ತವಾಗಿರುವ ಹಳ್ಳಿಗಳಿಗೂ ಸೋಂಕು ತಗುಲಿದೆ ಎಂದು
ತಿಳಿಸಿದರು.

ಇಂತಹ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ ಅವರಲ್ಲಿ ಕೋವಿಡ್‌ ಪಾಸಿಟಿವ್‌ ಇದ್ದರೆ ಹೋಂ ಐಸೋಲೇಶನ್‌ ಮಾಡಬೇಕು. ಅವರ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್‌ ಮಾಡಬೇಕು. ಇದನ್ನು ಗ್ರಾಮ ಪಂಚಾಯಿತಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು. ಅವರಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದು
ಹೇಳಿದರು.

ಕೆಲವರು ಕೋವಿಡ್‌ ಸೋಂಕು ಇದ್ದರೂ ಸರ್ಕಾರಿ ಆಸ್ಪತ್ರೆಗೆ ಬಾರದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸುಮ್ಮನಾಗಿ ಕಾಯಿಲೆ ಹೆಚ್ಚು ಉಲ್ಬಣವಾದಾಗ ಬರುತ್ತಾರೆ. ಅವರಿಗೆ ಆ ಸಮಯದಲ್ಲಿ ಚಿಕಿತ್ಸೆ ಕೊಟ್ಟರೂ ಪ್ರಯೋಜನವಾಗುವುದಿಲ್ಲ. ಅದಕ್ಕೆ ನಿಮ್ಮ ಹೋಬಳಿ ವ್ಯಾಪ್ತಿಯಲ್ಲಿ ಇರುವಂತಹ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ರೋಗಿಗಳ ಮಾಹಿತಿ ಪಡೆದು ಪರಿಶೀಲಿಸಿ ಸೋಂಕಿತರನ್ನು ಪತ್ತೆಹಚ್ಚಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಹೋಂ ಐಸೋಲೇಶನ್‌ ಆಗಿರುವವರ ಮಾಹಿತಿ ಪಡೆದು ಅವರಿಗೆ ಯಾವ ರೀತಿ ಚಿಕಿತ್ಸೆ ದೊರೆಯುತ್ತಿದೆ. ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದಾರೆಯೆಯೇ, ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಸಾತನೂರು ಭಾಗದಲ್ಲಿ ಕೊರೊನಾ ಸೋಂಕಿತರಿಗಾಗಿ ಕೋವಿಡ್‌ ಕೇಂದ್ರ ಮಾಡಲು ಸ್ಥಳ ಪರಿಶೀಲನೆ ಮಾಡುವಂತೆ ಹೋಬಳಿ ಮಟ್ಟದ ಹಾಗೂ ಟಾಸ್ಕ್‌ಪೋರ್ಸ್‌ ತಂಡಕ್ಕೆ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ. ನಂದಿನಿ, ಪ್ರಭಾರ ಬಿಇಒ ಶ್ರೀನಿವಾಸ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವಮೂರ್ತಿ, ಶಿರಸ್ತೇದಾರ್‌ ರಘು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ
ಉಪಸ್ಥಿತರಿದ್ದರು.

ಕಾರ್ಮಿಕ ದಿನಾಚರಣೆ: ಮೇ 1 ಕಾರ್ಮಿಕರ ದಿನಾಚರಣೆ ಅಂಗವಾಗಿ ಕೊರೊನಾ ವಾರಿಯರ್ಸ್‌ಗೆ ತಹಶೀಲ್ದಾರ್‌ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಕೋವಿಡ್‌ ಕೆಲಸ ಮಾಡುವಂತೆ ತಿಳಿಸಿದರು. ಎಲ್ಲರಿಗೂ ಉಚಿತ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಮ ಹ್ಯಾಂಡ್‌ಗ್ಲೌಸ್‌ ವಿತರಣೆ ಮಾಡಿ ಶುಭಾಶಯ ಕೋರಿದರು.

ಇಲ್ಲಿನ ವಾಣಿ ಟಾಕೀಸ್‌ ಹಿಂಭಾಗದಲ್ಲಿರುವ ಓಂ ಗಾರ್ಮೆಂಟ್ಸ್‌ನವರು ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿರುವವರಿಗೆ ಹಂಚಿಕೆ ಮಾಡಲು ತಾವೇ ತಯಾರು ಮಾಡಿರುವ ಒಂದು ಸಾವಿರ ಮಾಸ್ಕ್‌ಗಳನ್ನು ತಹಶೀಲ್ದಾರ್‌ ಅವರಿಗೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು