ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಕೆರೆ ಒತ್ತುವರಿ ತೆರವಿಗೆ ಮುಹೂರ್ತ ನಿಗದಿ

Published 25 ನವೆಂಬರ್ 2023, 4:11 IST
Last Updated 25 ನವೆಂಬರ್ 2023, 4:11 IST
ಅಕ್ಷರ ಗಾತ್ರ

ರಾಮನಗರ: ಕೆರೆಗಳು ಭೂಮಿಯ ಜಲದ ಸೆಲೆಗಳು. ಜಗತ್ತಿಗೆ ಅನ್ನ ನೀಡುವ ಕೃಷಿಕರ ಜೀವನಾಡಿಗಳು. ಮನುಷ್ಯನ ದುರಾಸೆಯ ಕಾರಣಕ್ಕಾಗಿ, ಇಂತಹ ಕೆರೆಗಳ ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಾ ಬಂದಿದೆ. ಅಂತಹ ಕೆರೆಗಳನ್ನು ಭೂಗಳ್ಳರಿಂದ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಇದೀಗ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ.

ಹೌದು, ಜಿಲ್ಲೆಯ ಸರ್ಕಾರಿ ಕೆರೆಗಳ ಒತ್ತುವರಿ ತೆರವಿಗೆ ಕ್ರಿಯಾಯೋಜನೆ ರೂಪಿಸಿರುವ ಜಿಲ್ಲಾಡಳಿ, ಒತ್ತುವರಿ ತೆರವಿಗೆ ನ. 30ರಿಂದ ಮುಹೂರ್ತ ಫಿಕ್ಸ್ ಮಾಡಿದೆ. ಹೇಳೋರಿಲ್ಲ– ಕೇಳೋರಿಲ್ಲ ಎಂದುಕೊಂಡು, ತಮ್ಮ ಜಮೀನಿಗೆ ಹೊಂದಿಕೊಂಡಿರುವ ಸರ್ಕಾರಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಬಿಸಿ ಮುಟ್ಟಿಸಲು ಸಿದ್ಧತೆ ನಡೆಸಿದೆ.

ತನ್ನ ಈ ಕಾರ್ಯಾಚರಣೆಗೆ ಪೂರಕವಾಗಿ ಜಿಲ್ಲಾಡಳಿತವು, ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳನ್ನು ಭೂ ಮಾಪನ ಇಲಾಖೆಯಿಂದ ಅಳತೆ ಮಾಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದೆ. ಶೇ 60ರಷ್ಟು ಕೆರೆಗಳ ಅಳತೆ ಕಾರ್ಯ ಮುಗಿದಿದೆ. ಇದರ ಬೆನ್ನಲ್ಲೇ, ತೆರವು ಕಾರ್ಯಚರಣೆ ಆರಂಭಿಸಲು ಮುಂದಾಗಿದೆ.

1,496 ಕೆರೆಗಳಿವೆ

‘ಜಿಲ್ಲೆಯ 4 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 1,496 ಸರ್ಕಾರಿ ಕೆರೆಗಳಿವೆ. ತಾಲ್ಲೂಕುವಾರು ಇರುವ ಕೆರೆಗಳ ಮೂಲ ನಕಾಶೆ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಅವುಗಳನ್ನು ಅಳತೆ ಮಾಡುವ ಕಾರ್ಯಕ್ಕೆ ಜುಲೈನಲ್ಲೇ ಚಾಲನೆ ನೀಡಲಾಗಿತ್ತು. ತಾಲ್ಲೂಕು ಮಟ್ಟದಲ್ಲಿರುವ ಭೂ ಮಾಪಕರು ವಾರದಲ್ಲಿ 3 ದಿನ ಕೆರೆಗಳನ್ನು ಅಳತೆ ಮಾಡುತ್ತಾ ಬರುತ್ತಿದ್ದಾರೆ’ ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಗಳ ಅಳತೆಗಾಗಿ ರಾಮನಗರ ತಾಲ್ಲೂಕಿನಲ್ಲಿ 31, ಚನ್ನಪಟ್ಟಣದಲ್ಲಿ 27, ಮಾಗಡಿಯಲ್ಲಿ 37 ಹಾಗೂ ಕನಕಪುರದಲ್ಲಿ(ಹಾರೋಹಳ್ಳಿ ಒಳಗೊಂಡಂತೆ) 35 ಭೂ ಮಾಪಕರನ್ನು ಒಳಗೊಂಡಂತೆ ಒಟ್ಟು 130 ಜನ ಅಳತೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೂರು ತಿಂಗಳೊಳಗೆ ಅಳತೆ ಕಾರ್ಯ ಮುಗಿಸುವ ಗುರಿ ಹೊಂದಲಾಗಿತ್ತು’ ಎಂದು ಹೇಳಿದರು.

‘ಅಳತೆ ಕಾರ್ಯಕ್ಕೆ ಚಾಲನೆ ಸಿಕ್ಕ ಬೆನ್ನಲ್ಲೇ, ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿಯಲ್ಲಿ 35 ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಮರು ಭೂ ಮಾಪನ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಆದ್ಯತೆ ಮೇರೆಯ ಈ ಕೆಲಸದಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿದ್ದರಿಂದ, ಕೆರೆಗಳ ಅಳತೆ ಕಾರ್ಯ ಸ್ವಲ್ಪ ವಿಳಂಬವಾಯಿತು. ಉಳಿದ ಕೆರೆಗಳ ಅಳತೆಯೂ ಶೀಘ್ರ ಪೂರ್ಣಗೊಳ್ಳಲಿದೆ’ ಎಂದರು.

ಎರಡು ಹಂತದಲ್ಲಿ ತೆರವು

‘ಒತ್ತುವರಿಯಾಗಿರುವ ಕೆರೆಗಳ ತೆರವು ಕಾರ್ಯಾಚರಣೆಯು ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 437 ಕೆರೆಗಳ ಒತ್ತುವರಿ ತೆರವು ನಡೆಯಲಿದೆ. ಉಳಿದ ಕೆರೆಗಳನ್ನು ಎರಡನೇ ಹಂತದಲ್ಲಿ ಮಾಡಲಾಗುವುದು. ಇದಕ್ಕಾಗಿ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ನಿಯೋಜಿಸಿ ಆದೇಶ ಸಹ ಹೊರಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಸರ್ಕಾರಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಎರಡು ಹಂತದಲ್ಲಿ ನಡೆಸಲಾಗುವುದು. ಮುಂದೆ ಒತ್ತುವರಿಗೆ ಅವಕಾಶವಿಲ್ಲದಂತೆ ಬಂದೋಬಸ್ತ್ ಮಾಡಲಾಗುವುದು.
ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾಧಿಕಾರಿ

ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು

‘ಕಂದಾಯ ಪಂಚಾಯತ್ ರಾಜ್ ನಗರಾಭಿವೃದ್ಧಿ ಇಲಾಖೆ ಭೂ ದಾಖಲೆಗಳ ಇಲಾಖೆ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ವರ್ಷಗಳ ಹಿಂದೆಯೇ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರು ಕಾರ್ಯಾಚರಣೆ ಸಂದರ್ಭದಲ್ಲಿ ಸಿಬ್ಬಂದಿಗೆ ಅಡ್ಡಿಪಡಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಸ್ಥಳೀಯ ಪೊಲೀಸರು ಬಂದೋಬಸ್ ಒದಗಿಸಲಿದ್ದಾರೆ. ಕಾರ್ಯಾಚರಣೆಗಾಗಿಯೇ ನುರಿತ ಸಿಬ್ಬಂದಿಯನ್ನು ನಿಯೋಜಿಸಿ ಜೆಸಿಬಿ ಹಾಗೂ ಇತರ ವಾಹನಗಳ ನೆರವಿನಿಂದ ಒತ್ತುವರಿ ತೆರವು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಭೂ ಮಾಪನ ಇಲಾಖೆಯ ಉಪ ನಿರ್ದೇಶಕರು ಮತ್ತು ಉಪ ವಿಭಾಗಾಧಿಕಾರಿಯನ್ನು ತೆರವು ಕಾರ್ಯಾಚರಣೆಯ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಆಯಾ ತಾಲ್ಲೂಕಿನ ತಹಶೀಲ್ದಾರರು ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡು ನಿತ್ಯ ವರದಿ ಸಲ್ಲಿಸಲಿದ್ದಾರೆ. ಕಾರ್ಯಾಚರಣೆಗೆ ನಿಯೋಜನೆಗೊಂಡಿರುವವರು ಕರ್ತವ್ಯಲೋಪ ಎಸಗಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತೆರವಿಗೆ ಮುನ್ನ ನೋಟಿಸ್

‘ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ತೆರವು ಕಾರ್ಯಾಚರಣೆಗೆ ಮುನ್ನ ನೋಟಿಸ್ ನೀಡಲಾಗುವುದು. ಕಾರ್ಯಾಚರಣೆ ತಂಡ ಸ್ಥಳಕ್ಕೆ ತೆರಳುವುದಕ್ಕೆ ಮುಂಚೆ ಒತ್ತುವರಿದಾರರು ಕೆರೆ ಜಾಗದಲ್ಲಿ ಏನಾದರೂ ಬೆಳೆ ಬೆಳೆದಿದ್ದರೆ ಅಥವಾ ಏನಾದರೂ ನಿರ್ಮಾಣ ಮಾಡಿದ್ದರೆ ಸ್ವತಃ ತೆರವುಗೊಳಿಸಿಕೊಳ್ಳಬೇಕು’ ಎಂದ ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಿಲ್ಲೆಯಲ್ಲಿರುವ ಕೆರೆಗಳ ಪೈಕಿ ಸಣ್ಣ ನೀರಾವರಿ ಇಲಾಖೆಯಡಿ 110 ಪಂಚಾಯತ್‌ರಾಜ್ ಇಲಾಖೆಯಡಿ 1322 ನಗರ ಸ್ಥಳೀಯ ಸಂಸ್ಥೆಗಳಡಿ 61 ಹಾಗೂ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 3 ಕೆರೆಗಳಿದ್ದು ಅವರೇ ನಿರ್ವಹಣೆ ಹೊಣೆ ಹೊತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಳತೆ ಕಾರ್ಯ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬಿಡದಿ ಬಳಿಯ ನಲ್ಲಿಗುಡ್ಡ ಕೆರೆ (ಸಾಂಧರ್ಭಿಕ ಚಿತ್ರ)
ಬಿಡದಿ ಬಳಿಯ ನಲ್ಲಿಗುಡ್ಡ ಕೆರೆ (ಸಾಂಧರ್ಭಿಕ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT