ಗುರುವಾರ , ಡಿಸೆಂಬರ್ 12, 2019
17 °C
ಜಿಲ್ಲಾ ವಕೀಲರ ಸಂಘದ ವತಿಯಿಂದ ಕಾರ್ಯಕ್ರಮ

‘ವಕೀಲರು ಸಾಮಾಜಿಕ ಎಂಜಿನಿಯರ್‌ಗಳಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆಯುತ್ತಿದ್ದರೂ ದೇಶದ ಪರಿಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಮಂಗಳವಾರ ಸಂಜೆ ಜಿಲ್ಲಾ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕ್ಷೀಣಿಸುತ್ತಿದೆ. ಕೆಲವು ಸೂಕ್ಷ್ಮ ವಿಚಾರಗಳನ್ನು ನಾನಿಲ್ಲಿ ಪ್ರಸ್ತಾಪ ಮಾಡುವುದಿಲ್ಲ. ನೀವೇ ಆ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ವಕೀಲರು ನಾಗರಿಕ ಸಮಾಜದ ಜತೆ ಶ್ರಮಿಸಬೇಕಿದೆ. ಈಚೆಗೆ ಬರುತ್ತಿರುವ ತೀರ್ಪುಗಳು ಏರುಪೇರಾಗುತ್ತಿವೆ. ಭಾವನಾತ್ಮಕ ವಿಷಯಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲಾಗುತ್ತಿದೆ. ಇದರಿಂದ ಸಮಾಜ ದಿಕ್ಕು ತಪ್ಪುತ್ತಿದೆ. ಇಂತಹ ಸಂದರ್ಭದಲ್ಲಿ ವಕೀಲರು ಸಾಮಾಜಿಕ ಎಂಜಿನಿಯರ್ ಗಳಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಂವಿಧಾನವನ್ನು ವಿರೂಪಗೊಳಿಸುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಈಗಲೂ ಸಮಾಜದಲ್ಲಿ ಶೇ 50 ರಷ್ಟು ಅನಕ್ಷರಸ್ಥರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕ ಎದುರಾಗಿದ್ದು, ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವ ಗುರುತರ ಜವಾಬ್ದಾರಿ ವಕೀಲರ ಮೇಲಿದೆ. ಸಂವಿಧಾನ ಬದ್ಧವಾಗಿ ವಕೀಲರು ಪ್ರತಿಭಟನೆಯನ್ನು ಮಾಡಿದರೆ ತಪ್ಪಿಲ್ಲ. ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಧಕ್ಕೆ ಉಂಟಾದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, ‘ಜನರು ಶಾಸಕಾಂಗ, ಕಾರ್ಯಾಂಗದ ಬಗ್ಗೆ ಮೊದಲೇ ನಂಬಿಕೆ ಕಳೆದುಕೊಂಡಿದ್ದಾರೆ. ನ್ಯಾಯಾಂಗದ ಬಗ್ಗೆ ಸ್ವಲ್ಪ ನಂಬಿಕೆ ಉಳಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ವಕೀಲರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ’ ಎಂದು ತಿಳಿಸಿದರು.

‘ಈಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ವಕೀಲರು ಮಾಡಬೇಕು. ಭ್ರಷ್ಟಾಚಾರವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ’ ಎಂದರು.

‘ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಗುತ್ತಿಗೆದಾರರು ಸೇರಿಕೊಂಡರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಬೆಂಗಳೂರು ಉದಾಹರಣೆಯಾಗಿದೆ. ಉದ್ಯಾನ ನಗರಿಯಾಗಬೇಕಿದ್ದ ಬೆಂಗಳೂರು ಇಂದು ಈ ಮೂವರ ಭ್ರಷ್ಟಾಚಾರದಿಂದ ಕೊಳಗೇರಿಯಾಗಿ ಮಾರ್ಪಾಡಾಗುತ್ತಿದೆ’ ಎಂದು ಅವರು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಂ.ಜಿ. ಉಮಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ವಿ. ದೇವರಾಜ್, ಉಪಾಧ್ಯಕ್ಷ ದೊಡ್ಡಯ್ಯ, ಕಾರ್ಯದರ್ಶಿ ಎನ್.ಎಂ. ನಾಗರಾಜು, ಖಜಾಂಚಿ ಸಿ. ಸುನೀಲ್ ಕುಮಾರ್, ಲೋಕೇಶ್ ಇದ್ದರು.

ಪ್ರತಿಕ್ರಿಯಿಸಿ (+)