ಶುಕ್ರವಾರ, ಏಪ್ರಿಲ್ 23, 2021
23 °C
ಜಿಲ್ಲೆಯ ವಿವಿಧ ನ್ಯಾಯಾಲಯಗಳ 18 ಪೀಠಗಳಲ್ಲಿ ರಾಜೀ ಸಂಧಾನ

ಲೋಕ್‌ ಅದಾಲತ್‌: 1836 ಪ್ರಕರಣಗಳ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ಲೋಕ್ ಅದಾಲತ್‌ ಕಾರ್ಯಕ್ರಮವು ನಡೆಯಿತು. ಒಟ್ಟು 1,836 ವ್ಯಾಜ್ಯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ರಾಮನಗರ ಜಿಲ್ಲಾ ನ್ಯಾಯಾಲಯ, ನಾಲ್ಕೂ ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲಿನ 18 ಪೀಠಗಳಲ್ಲಿ ರಾಜೀಸಂಧಾನ ನಡೆಸಲಾಯಿತು. ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇದ್ದ ಒಟ್ಟು 4,133 ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 1,607 ಪ್ರಕರಣಗಳು ಒಂದೇ ದಿನ ಇತ್ಯರ್ಥಗೊಂಡವು. ಅಲ್ಲದೇ ವ್ಯಾಜ್ಯ ಪೂರ್ವ 2,191 ಪ್ರಕರಣಗಳ ಪೈಕಿ 229 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

‘538 ರಾಜೀ ಆಗಬಲ್ಲ ಅಪರಾಧ ಪ್ರಕರಣಗಳು, ಪ್ರಕರಣ, 90 ಮೋಟಾರ್ ವಾಹನ ಕಾಯ್ದೆ ಪ್ರಕರಣ, ಒಂದು ಕಾರ್ಮಿಕ ವಿವಾದ ಪ್ರಕರಣ, 6 ವೈವಾಹಿಕ/ಕೌಟುಂಬಿಕ ದೌರ್ಜನ್ಯ ಪ್ರಕರಣ, 131 ಚೆಕ್ ಬೌನ್ಸ್ ಪ್ರಕರಣ, ಇತರೆ 160 ಸಿವಿಲ್, 688 ವಿವಿಧ ರೀತಿಯ ಅಪರಾಧಿಕ ವ್ಯಾಜ್ಯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ರಾಜೀಯಾಗಿವೆ’ ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ವೆಂಕಟಪ್ಪ ತಿಳಿಸಿದರು.

ಹಣಕಾಸು ಸಂಬಂಧ ವ್ಯಾಜ್ಯ ಪ್ರಕರಣಗಳಲ್ಲಿ ₹96.50 ಲಕ್ಷ ಮೊತ್ತದ ವಿವಾದಗಳನ್ನು ಇತ್ಯರ್ಥಪಡಿಸಲಾಯಿತು. ಮೋಟಾರು ವಾಹನ ಕಾಯ್ದೆಯಡಿಯ 90 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, ಸಂತ್ರಸ್ಥರಿಗೆ ₹2.63 ಕೋಟಿ ಮೊತ್ತದ ಪರಿಹಾರಕ್ಕೆ ಆದೇಶಿಸಲಾಯಿತು. ₹36.72 ಲಕ್ಷ ಮೌಲ್ಯದ 131 ಚೆಕ್ ಬೌನ್ಸ್ ಪ್ರಕರಣಗಳೂ ಇದೇ ಸಂದರ್ಭ ಇತ್ಯರ್ಥಗೊಂಡವು. ಒಟ್ಟಾರೆ ₹4,39 ಕೋಟಿ ಮೌಲ್ಯದ ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

ಮುಂದಿನ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ವೆಂಕಟಪ್ಪ ತಿಳಿಸಿದರು.

18 ಜನ ನ್ಯಾಯಾಧೀಶರು, ಸಂಧಾನ ವಕೀಲರು, ಕಕ್ಷಿದಾರರು ಹಾಗೂ ಅವರ ಪರ ವಕೀಲರು ಪಾಲ್ಗೊಂಡಿದ್ದರು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 3ರವರೆಗೆ ಲೋಕ್ ಅದಾಲತ್ ನಡೆಯಿತು. ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಎಂ.ಜಿ ಉಮಾ, ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಚ್.ಎಸ್ ಮರುಳಸಿದ್ದಾರಾಧ್ಯ, ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗಪ್ರಭು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್. ಕುಲಕರ್ಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ವೆಂಕಟಪ್ಪ, ದಿನೇಶ್ ಹಾಗೂ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.