ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿ ಕ್ಷೇತ್ರ, ತಲೆಮಾರಿಗೂ ಬೇಕು ‘ಪುನರಾವಲೋಕನ’: ಜಾನಪದ ಲೋಕೋತ್ಸವ

ವಿಚಾರ ಸಂಕಿರಣದಲ್ಲಿ ವೈವಿಧ್ಯಮಯ ವಿಚಾರಗಳ ಮಂಥನ
Published 12 ಫೆಬ್ರುವರಿ 2024, 6:06 IST
Last Updated 12 ಫೆಬ್ರುವರಿ 2024, 6:06 IST
ಅಕ್ಷರ ಗಾತ್ರ

ರಾಮನಗರ: ಮೌಖಿಕ ಪರಂಪರೆಯ ಕನ್ನಡ ಜಾನಪದದ ‘ಪುನರಾವಲೋಕನ’ ಅಗತ್ಯವೇ? ಹಾಗಿದ್ದರೆ, ಹೇಗಾಗಬೇಕು. ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡು ಅರಿವಿಗೆ ಬಂದಂತೆ ಹರಿದಿರುವ ಜಾನಪದ ಕಲೆಗಳು ಎತ್ತ ಸಾಗುತ್ತಿವೆ? ಮೂಲ ಮಾದರಿ ಮತ್ತು ಬದಲಾದ ಮಾದರಿಗೂ ಜರಡಿ ಹಿಡಿಯುವುದು ಹೇಗೆ?

– ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಎರಡು ದಿನಗಳ ‘ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ’ದ ಕಡೆಯ ದಿನವಾದ ಭಾನುವಾರ ನಡೆದ, ‘ಕನ್ನಡ ಜಾನಪದ: ಪುನರಾವಲೋಕನ’ ವಿಚಾರ ಸಂಕಿರಣವು ಇಂಹದ್ದೊಂದು ವಿಚಾರ ಮಂಥನಕ್ಕೆ ಸಾಕ್ಷಿಯಾಯಿತು.

‘ಗ್ರಾಮ ಸಮಾಜ ಜಾನಪದ ಅಧ್ಯಯನದ ನೆಲೆಯಾಗಿತ್ತು. ಕಾಲ ಬದಲಾದಂತೆ ಆ ನೆಲೆ ಬದಲಾಗಿ ನಗರಕ್ಕೂ ವಿಸ್ತರಿಸಿದೆ. ಉತ್ಪಾದಕ ಮತ್ತು ದುಡಿಯುವ ಗ್ರಾಮ ಸಮಾಜವೀಗ, ಬಳಕೆದಾರರ ಸಮಾಜವಾಗಿದೆ. ಜಾನಪದ ಚಲನಶೀಲವಾದುದು. ಅದಕ್ಕೆ ಪಠ್ಯ ಅಥವಾ ಸಿದ್ಧ ಸಾಹಿತ್ಯವಿಲ್ಲ. ಊರು, ಪ್ರದೇಶ, ವ್ಯಕ್ತಿಗೆ ಜಾನಪದ ಬದಲಾಗುತ್ತಾ ಹೋಗುತ್ತದೆ. ಬದಲಾದ ಕಾಲದಲ್ಲೂ ಬೇರೆ ಆಯಾಮ ಪಡೆದುಕೊಂಡಿದೆ. ಅದರಲ್ಲಿ ಜಾನಪದದ ಮೌಲ್ಯ ಇದೆಯೇ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ, ಜಾನಪದದ ಸಂಗ್ರಹ ಮತ್ತು ಸೃಷ್ಟಿಗೆ ಆದ್ಯತೆ ನೀಡಬೇಕಿದೆ’ ಎಂದು ತಮ್ಮ ಪ್ರಾಸ್ತಾವಿಕ ಮಾತುಗಳ ಮೂಲಕ ಪರಿಷತ್ತಿನ ಅಧ್ಯಕ್ಷ ಡಾ.ಹಿ.ಶಿ. ರಾಮಚಂದ್ರೇಗೌಡ ಅವರು ಪುನರಾವಲೋಕನದ ಚರ್ಚೆಗೆ ಇಂಬು ಒದಗಿಸಿದರು.

ಅದಕ್ಕೆ ಪೂರಕವಾಗಿ ಆಶಯ ನುಡಿಗಳನ್ನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ‘ಪುನರಾವಲೋಕನ ಪರಿಕಲ್ಪನೆಯು ಪ್ರತಿ ಕ್ಷೇತ್ರ ಮತ್ತು ತಲೆಮಾರಿಗೂ ಅಗತ್ಯ. ಅದರಿಂದ ಆಯಾ ಕಾಲಘಟ್ಟದ ತಪ್ಪು–ಒಪ್ಪು ಅರಿವಿಗೆ ಬರುತ್ತಾ ಹೋಗುತ್ತದೆ. 60-70ನೇ ದಶಕವು ಜಾನಪದದ ಸಂಗ್ರಹದ ಕಾಲವಾಗಿತ್ತು. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಇದು ನಡೆಯಿತು. ಕಲೆಗಳನ್ನು ಸಂಗ್ರಹ ಮಾಡುವಾಗ ಗ್ರಹಿಕೆಯಲ್ಲಿ ದೊಡ್ಡ ತಪ್ಪಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಮೌಖಿಕ‌ ಕಲೆಗಳ ಸಂಗ್ರಹ ಕರ್ನಾಟಕದಲ್ಲಿ ಯಥೇಚ್ಛವಾಗಿ ನಡೆದಿದೆ. ಆದರೆ, ಕೇವಲ ಸಾಹಿತ್ಯಕ ಪರಿಕಲ್ಪನೆಯಲ್ಲಿ ಮಾತ್ರ ಜಾನಪದವನ್ನು ನೋಡಲಾಯಿತು. ಶೈಕ್ಷಣಿಕ, ಸಮಾಜಶಾಸ್ತ್ರೀಯ ಹಾಗೂ ಮಾನವಶಾಸ್ತ್ರೀಯ ನೆಲೆಯಲ್ಲಿ ಅರ್ಥೈಸುವಿಕೆ ನಿಧಾನವಾಯಿತು. ನಮ್ಮಲ್ಲಿ ಸಮುದಾಯಕ್ಕೆ ಸೀಮಿತವಾದ ಮತ್ತು ಸಮುದಾಯದಾಚೆಗಿನ ಜಾತ್ಯತೀತ ಜಾನಪದ ನೋಡಲು ಸಾಧ್ಯವಾಗಿದೆ. ಅದರ ಅನ್ವೇಷಣೆಗೆ ಜಾನಪದ ಲೋಕದ ನಿರ್ಮಾತೃ ಎಚ್‌.ಎಲ್. ನಾಗೇಗೌಡರ ಕೊಡುಗೆ ಮಹತ್ವದ್ದು. ಅದೇ ಕಾರಣಕ್ಕೆ ನಾವಿಂದು ಸೇರಲು ಸಾಧ್ಯವಾಗಿದೆ’ ಎಂದರು.

‘ನಾವು ನಗರ ಕೇಂದ್ರೀತ ಜಾನಪದ ಪ್ರೇಮಿಗಳು ಮತ್ತು ಕಲಾಸಕ್ತರಾಗಿರುವುದೇ ಜಾನಪದವೀಗ ಸಂಕಷ್ಟದಲ್ಲಿರಲು ಕಾರಣ. ಹಾಗಾಗಿ, ನಗರದಾಚೆಗೆ ನೋಡುವ ಅಗತ್ಯವಿದೆ‌. ಜಾನಪದ ಎಂದರೆ ಹಳೆಯದು ಮತ್ತು ಅದನ್ನು ಸಂರಕ್ಷಿಸಬೇಕೆಂಬ ಮನೋಭಾವವೇ, ಅದರ ಮೌಲ್ಯವನ್ನು ಅರಿಯುವ ನಿರ್ಲಕ್ಷ್ಯಕ್ಕೆ ಕಾರಣವಾಯಿತು. ಈಗ ಅದನ್ನು ಸಂಗ್ರಹ ಮತ್ತು ಸೃಷ್ಟಿ ಜೊತೆಜೊತೆಗೆ ಮಾಡಬೇಕಿದೆ’ ಎಂದು ಪ್ರತಿಪಾದಿಸಿದರು.

‘ಜನಪದ ಸಾಹಿತ್ಯ: ಪುನರಾವಲೋಕನ’ ವಿಷಯ ಕುರಿತು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಡಾ. ಎಂ.ಎನ್. ವೆಂಕಟೇಶ್ ಮತ್ತು ‘ಜನಪದ ಪ್ರದರ್ಶಕ ಕಲೆ: ಪುನರಾವಲೋಕನ’ ವಿಷಯ ಕುರಿತು ಜಾನಪದ ದಾಖಲೀಕರಣ ತಜ್ಞ ಡಾ. ಸಿರಿಗಂಧ ಶ್ರೀನಿವಾಸಮೂರ್ತಿ ವಿಷಯ ಮಂಡಿಸಿದರು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು.

ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಸ್ವಾಗತಿಸಿದರು. ಜಾನಪದ ಲೋಕದ ಕ್ಯುರೇಟರ್ ಡಾ.ಯು.ಎಂ. ರವಿ ನಿರ್ವಹಣೆ ಮಾಡಿದರು.

Quote - ಸಮಾಜದಲ್ಲೀಗ ಮನುಷ್ಯ–ಮನುಷ್ಯ ಹಾಗೂ ಧರ್ಮ–ಧರ್ಮಗಳ ನಡುವಣ ವಿಶ್ವಾಸ ಕಳೆದು ಹೋಗುತ್ತಿದೆ. ಅದರ ಸುತ್ತ ಗೋಡೆ ನಿರ್ಮಿಸಲಾಗುತ್ತಿದೆ. ಈ ಸಂದಿಗ್ಧಕ್ಕೆ ಜಾನಪದದಲ್ಲಿ ಮದ್ದಿದೆ. ಅದನ್ನು ಕಂಡುಕೊಳ್ಳಬೇಕಿದೆ – ಅಗ್ರಹಾರ ಕೃಷ್ಣಮೂರ್ತಿ ನಿವೃತ್ತ ಕಾರ್ಯದರ್ಶಿ ಕೇಂದ್ರ ಸಾಹಿತ್ಯ ಅಕಾಡೆಮಿ

‘ಕಲೆಗಳಿಗೆ ಜನತಾ ಮೌಲ್ಯ ಮುಖ್ಯ’

‘ಈಗಿನ ಮಾರುಕಟ್ಟೆ ಸಂಸ್ಕೃತಿಯ ಪ್ರಭಾವ ಜಾನಪದ ಕಲೆಗಳಿಗೂ ತಟ್ಟಿದೆ. ಯಾವ ಕಲೆಗೆ ಮಾರುಕಟ್ಟೆ ಮೌಲ್ಯ ಇದೆಯೋ ಅದು ಬೆಳೆಯುತ್ತದೆ. ಜನಪದ ಕಲೆಗಳಿಗೆ ಈಗ ಮೌಲ್ಯ ಹೆಚ್ಚಾಗಿದೆ. ಆದರೆ ಈ ಕಲೆಗಳಿಗೆ ಜನತಾ ಮೌಲ್ಯ ಇದೆಯೇ ಎಂಬುದು ಮುಖ್ಯ. ಅದಕ್ಕೆ ಪೂರಕವಾಗಿ ಜಾನಪದ ಸಂಗ್ರಹದ ಜೊತೆಗೆ ಪೂರಕವಾದ ಕಂಟೆಂಟ್‌ಗಳೊಂದಿಗೆ ಸೃಷ್ಟಿ ಕೆಲಸ ಆಗಬೇಕಿದೆ. ಹೆಚ್ಚುತ್ತಿರುವ ಅತ್ಯಾಚಾರ ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಈ ಸೃಷ್ಟಿಗೆ ಸರಕು ಒದಗಿಸಬಲ್ಲವು. ನಗರ ಮತ್ತು ಆಧುನಿಕ ಸಂಸ್ಕೃತಿಯಲ್ಲಿ ನೆಲೆ ನಿಲ್ಲುವಿಕೆ ಇಲ್ಲ. ಜಾನಪದ ಹಳೆಯದು ನಶಿಸುತ್ತಿದೆ ಅಂದುಕೊಳ್ಳುತ್ತಿದ್ದರೆ ಅದು ಭ್ರಮೆ. ಬದಲಿಗೆ ನಾವೇ ಕಳೆದುಕೊಳ್ಳುತ್ತಿದ್ದೇವೆ. ಜಾನಪದ ಎಂಬುದು ಸಾಮಾಜಿಕ ಜ್ಞಾನವಿದ್ದಂತೆ. ಒಂದು ಕಾಲಘಟ್ಟದಲ್ಲಿ ಇದ್ದದ್ದು ಮಾತ್ರ ಜಾನಪದವಲ್ಲ. ಅದು ಚಲನಶೀಲ. ಶಾಸ್ತ್ರೀಯ ಕಲೆಗಳಂತಲ್ಲದ ಅದನ್ನು ಯಾರು ಬೇಕಾದರೂ ಅಪ್ಪಿಕೊಳ್ಳಬಹುದು. ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಅದನ್ನು ನೋಡುವ ಕಣ್ಣು ಬೇಕಷ್ಟೆ’ ಎಂದು ಪ್ರೊ.ಹಿ.ಶಿ. ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.

‘ಸಾಮಾಜಿಕ ನ್ಯಾಯದಡಿ ಅಧ್ಯಯನ ಅಗತ್ಯ’ ‘ಅಯೋಧ್ಯೆಯಲ್ಲಿ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ ಮೂಲಕ ಬಹುತ್ವದ ಭಾರತವನ್ನು ಹಿಂದುತ್ವದ ಕಡೆಗೆ ಕೊಂಡೊಯ್ಯಲಾಗುತ್ತಿದೆ. ರಾಮ ಸಂಸ್ಕೃತಿ ಇರುವಂತೆ ರಾವಣ ಸಂಸ್ಕೃತಿಯೂ ಇದೆ. ಅದು ಈ ನೆಲದ ವೈವಿಧ್ಯ. ಜಾನಪದ ಬಹುತ್ವದ ಈ ಅಭಿವ್ಯಕ್ತಿ ಪರಂಪರೆಯನ್ನು ಇಂದು ಪರ್ಯಾಯವಾಗಿ ಹೇಗೆ ಕಟ್ಟಿಕೊಳ್ಳಬೇಕೆಂಬುದು ನಮ್ಮ ಕಾಲದ ಬಿಕ್ಕಟ್ಟಾಗಿದೆ. ಮೌಖಿಕ ಪರಂಪರೆಯನ್ನು ಕಟ್ಟಿದ ರೈತ ಸಮುದಾಯಗಳೇ ದುಃಸ್ಥಿಯಲ್ಲಿರುವಾಗ ರೈತರ ಜಾನಪದ ಉಳಿಯಬೇಕು ಎಂದರೆ ಹೇಗೆ? ಹಾಗಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಜಾನಪದ ಅಧ್ಯಯನ ನಡೆಸಬೇಕಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT