ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಅಭಿವೃದ್ಧಿ ಮಾತನಾಡದೆ ಅಪಪ್ರಚಾರ

ಯೋಗೇಶ್ವರ್‌ಗೆ ತಲೆ ಕೆಟ್ಟಿದೆ: ಸಂಸದ ಸುರೇಶ್ ಗರಂ
Published 27 ಮಾರ್ಚ್ 2024, 7:15 IST
Last Updated 27 ಮಾರ್ಚ್ 2024, 7:15 IST
ಅಕ್ಷರ ಗಾತ್ರ

ಮಾಗಡಿ: ‘ಡಿ.ಕೆ. ಸಹೋದರರು ರಕ್ತ ಚರಿತ್ರೆ ಉಳ್ಳವರು ಎಂದಿರುವ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಅವರಿಗೆ ತಲೆ ಕೆಟ್ಟಿದೆ. ಕನಕಪುರ ಓಡಾಡಿಕೊಂಡು ಬಂದಿರುವ ಅವರಿಗೆ ಎಲ್ಲಾದರೂ ಅಂತಹ ಅನುಭವವಾಗಿದೆಯೇ? ಅಪಪ್ರಚಾರ ಮಾಡಲು ಮಿತಿ ಇರಬೇಕು’ ಎಂದು ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗರಂ ಆದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ವಿಚಾರ ಮಾತನಾಡಿ ಮತ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ಮೈತ್ರಿ ನಾಯಕರು ಈ ರೀತಿ ಅಪಪ್ರಚಾರ ಮಾಡಿ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಕ್ಷೇತ್ರಕ್ಕೆ ಅರೆ ಸೇನಾಪಡೆ ನಿಯೋಜಿಸಬೇಕು ಎಂದು ಬೊಬ್ಬೆ ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

‘ಕ್ಷೇತ್ರದ ಮತದಾರರು ಬುದ್ದಿವಂತರಿದ್ದು, ಅಭಿವೃದ್ಧಿ ಪರವಾಗಿ ಮತ ಚಲಾಯಿಸುತ್ತಾರೆ. ಯಾರು ಅಭಿವೃದ್ಧಿ ಮಾಡುತ್ತಾರೆ ಮತ್ತು ಯಾರು ಕೇವಲ ಭರವಸೆ ನೀಡುತ್ತಾರೆ ಎಂಬುದು ಮತದಾರರಿಗೆ ಗೊತ್ತಿದೆ. ಎಲ್ಲದಕ್ಕೂ ಜನರೇ ತಕ್ಕ ಉತ್ತರ ಕೊಡುತ್ತಾರೆ. ಕಾಂಗ್ರೆಸ್‌ನ ತತ್ವ–ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನಮಗೆ ಬೆಂಬಲ ನೀಡುತ್ತಿದ್ದಾರೆ’ ಎಂದರು.

ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ಸುರೇಶ್ ಅವರನ್ನು ರಾವಣನಿಗೆ ಹೋಲಿಸಿ ಅಪಪ್ರಚಾರ ಮಾತನಾಡುವವರು ಅಭಿವೃದ್ಧಿ ಕುರಿತು ಅವರ ಅಭ್ಯರ್ಥಿಯೊಂದಿಗೆ ಚರ್ಚೆಗೆ ಬರಲಿ. ನಾವು ನಮ್ಮ ಅಭ್ಯರ್ಥಿ ಕರೆ ತರುತ್ತೇವೆ. ಸಿನಿಮಾ ತೆಗೆಯುವರು ಸ್ಟೋರಿ ಬರೆಯುವುದನ್ನು ಬಿಟ್ಟು, ಈಗಲಾದರೂ ಅಭಿವೃದ್ಧಿ ವಿಚಾರ ಮಾತನಾಡಲಿ’ ಎಂದು ಶಾಸಕ ಮುನಿರತ್ನ ಅವರಿಗೆ ತಿರುಗೇಟು ನೀಡಿದರು.

‘ಮುನಿರತ್ನ ಅವರು ಯಾರ‍್ಯಾರ ವಸ್ತ್ರಾಪಹರಣ ಮಾಡಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುವೆ. ಯಾರ ಸೀರೆಗೆ ಕೈ ಹಾಕಿ ಎಳೆದ್ರು, ಎಲ್ಲವನ್ನೂ ತೋರಿಸೋಣ. ಗೋವಿಂದ ಅರೆ ಗೋವಿಂದ ಮುನಿರತ್ನ ನಾಯ್ಡು ಗೋವಿಂದ ಅಂತ ಬರುವ ಹಾಡನ್ನು ಸಹ ಹಾಕುತ್ತೇವೆ. ಆ ಹಾಡಲ್ಲೇ ಎಲ್ಲವೂ ಇದೆ’ ಎಂದು ಕಿಡಿಕಾರಿದರು.

ಜೆಡಿಎಸ್ ಮುಖಂಡರಾದ ಶೈಲಜಾ, ಅಯ್ಯಂಡಹಳ್ಳಿ ರಂಗಸ್ವಾಮಯ್ಯ, ಮಂಜುನಾಥ್, ಜಯಮ್ಮ ಸೇರಿದಂತೆ ಬಿಜೆಪಿ–ಜೆಡಿಎಸ್‌ನ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್ ಮುಖಂಡರಾದ ನರಸಿಂಹಮೂರ್ತಿ, ಜೆ.ಪಿ. ಚಂದ್ರೇಗೌಡ, ವಿಜಯ್ ಕುಮಾರ್, ಕೆ. ಕೃಷ್ಣಮೂರ್ತಿ, ಚಿಗಳೂರು ಗಂಗಾಧರ್, ಎಂ.ಕೆ. ಧನಂಜಯ, ಗಾಣಕಲ್ಲು ನಟರಾಜು ಹಾಗೂ ಇತರರು ಇದ್ದರು.

ಸಂಸದ ಡಿ.ಕೆ. ಸುರೇಶ್ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರನ್ನು ಮಾಗಡಿಯಲ್ಲಿ ಭೇಟಿ ಮಾಡಿ ಚರ್ಚಿಸಿದರು
ಸಂಸದ ಡಿ.ಕೆ. ಸುರೇಶ್ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರನ್ನು ಮಾಗಡಿಯಲ್ಲಿ ಭೇಟಿ ಮಾಡಿ ಚರ್ಚಿಸಿದರು

‘ಚನ್ನಪಟ್ಟಣದಲ್ಲಿ ನಿಖಿಲ್ ಪ್ರತಿಷ್ಠಾಪನೆ’ ‘ಮಂಡ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಸ್ಪರ್ಧೆ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಪ್ರತಿಷ್ಠಾಪನೆ ಮಾಡುವ ತಂತ್ರವಿದೆ. ಈ ಬಗ್ಗೆ ಅವರ ಪತ್ನಿಯ ಆದೇಶವಾಗಿದೆ. ಅವರ ಮನೆಯಲ್ಲಿ ಏನು ನಡೆಯುತ್ತದಂದು ಗೊತ್ತು. ಇವರನ್ನು (ಯೋಗೇಶ್ವರ್) ಒದ್ದು ಓಡಿಸೋಣ ಅಂತ ಅವರು ಅವರನ್ನು (ಕುಮಾರಸ್ವಾಮಿ) ಓಡಿಸೋಣ ಅಂತ ಇವರು ನಿಂತಿದ್ದಾಋಎ. ಕೊನೆಗೆ ಕಾರ್ಯಕರ್ತರ ಕಥೆ ಏನಾಗುತ್ತದೊ ದೇವರೇ ಬಲ್ಲ’ ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು.‘ಚನ್ನಪಟ್ಟಣದಲ್ಲೇನಾದರೂ ಉಪ ಚುನಾವಣೆ ನಡೆದರೆ ಯೋಗೇಶ್ವರ್‌ಗೆ ಖಂಡಿತವಾಗಿಯೂ ಟಿಕೆಟ್ ಸಿಗುವುದಿಲ್ಲ. ಇವರು ಎಲ್ಲಿ ಬೇಕಾದರೂ ಹೋಗಿ ಹೊಂದಿಕೊಳ್ಳುತ್ತಾರೆ. ಇವರ ರಾಜಕೀಯದಾಟಕ್ಕೆ ಕಾರ್ಯಕರ್ತರು ಬಲಿಪಶು ಆಗುತ್ತಾರೆ. ಹಾಗಾಗಿ ಅಲ್ಲಿನ ಕಾರ್ಯಕರ್ತರು ಮತ್ತು ನಾಯಕರು ಕಾಂಗ್ರೆಸ್‌ಗೆ ಬಂದರೆ ಒಳ್ಳೆಯದು. ನಮ್ಮ ಪಕ್ಷದಲ್ಲಿ ಮುಂದೆ ಏನಾದರೂ ಆಗಬಹುದು’ ಎಂದು ಆಹ್ವಾನ ನೀಡಿದರು.

ರೇವಣ್ಣ ಭೇಟಿ ಮಾಡಿದ ಸುರೇಶ್ ಮಾಗಡಿ: ಪಟ್ಟಣದ ಗದ್ದೆ ಬಯಲಿನ ಬಳಿ ಇರುವ ಎಚ್‌.ಎಂ. ರೇವಣ್ಣ ಅವವರ ತೋಟದ ಮನೆಗೆ ಸಂಸದ ಡಿ.ಕೆ. ಸುರೇಶ್ ಸೋಮವಾರ ಭೇಟಿ ನೀಡಿ ಮಾತನಾಡಿದರು. ಮಾರ್ಚ್ 28ರಂದು ನಾಮಪತ್ರ ಸಲ್ಲಿಸುವಾಗ ಜೊತೆಗಿರುವಂತೆ ಮನವಿ ಮಾಡಿದರು. ರೇವಣ್ಣ ಅವರ ಪತ್ನಿ ವತ್ಸಲ ರೇವಣ್ಣ ಹಾಗೂ ಕುಟುಂಬದವರು ಜೊತೆಯಲ್ಲಿದ್ದರು. ಸುರೇಶ್ ಮಾತನಾಡಿ ‘ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಮತ್ತೊಮ್ಮೆ ನನ್ನನ್ನು ಕೈ ಹಿಡಿಯುವ ಆತ್ಮವಿಶ್ವಾಸವಿದೆ. ನುಡಿದಂತೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ಚುನಾವಣೆಯಲ್ಲಿ ಮತ ಹಾಕುವ ಮೂಲಕ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಬೆಂಬಲ ಕೊಡುತ್ತಾರೆಂಬ ವಿಶ್ವಾಸವಿದೆ’ ಎಂದರು. ರೇವಣ್ಣ ಮಾತನಾಡಿ ‘ಸುರೇಶ್ ಅವರು ಕ್ರಿಯಾಶೀಲ ಸಂಸದರಾಗಿದ್ದು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಇಳಿದು ಕೆಲಸ ಮಾಡಿದ್ದಾರೆ. ಪಕ್ಷ ಗ್ಯಾರಂಟಿ ಯೋಜನೆಗಳ ಜೊತೆಗೆ ಸುರೇಶ್ ಅವರ ಅಭಿವೃದ್ಧಿ ಕಾರ್ಯಗಳು ಅವರನ್ನು ಗೆಲ್ಲಿಸುವುದರಲ್ಲಿ ಎರಡು ಮಾತಿಲ್ಲ’ ಎಂದು ಹೇಳಿದರು. ಪುರಸಭೆ ಸದಸ್ಯ ಶಿವಕುಮಾರ್ ಕಾಂಗ್ರೆಸ್ ಮುಖಂಡ ಬಸವರಾಜು ತೋಟದಮನೆ ಗಿರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT