ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ವಿಮೆ: ನೋಂದಣಿ ಹೆಚ್ಚಳ

ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹80 ಸಾವಿರದವರೆಗೆ ಅವಕಾಶ
Last Updated 18 ಜನವರಿ 2023, 5:42 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ರೈತರಲ್ಲಿ ಬೆಳೆ ವಿಮೆ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಾವು ಬೆಳೆಗೆ ವಿಮೆ ಮಾಡಿಸುವವರ ಸಂಖ್ಯೆ ಹೆಚ್ಚುತ್ತಿದೆ.

2022ರಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜಿಲ್ಲೆಯ ಮಾವು ಬೆಳೆಗಾರರು ವಿಮೆ ಸೌಲಭ್ಯ ಮಾಡಿಸಿಕೊಂಡಿದ್ದಾರೆ. ಈ ವರ್ಷ ಬರೋಬ್ಬರಿ 4,789 ರೈತರು ನೋಂದಣಿ ಮಾಡಿಕೊಂಡಿದ್ದು, ಒಟ್ಟು ₹1.41 ಕೋಟಿ ಮೊತ್ತದ ಹಣವನ್ನು ವಿಮಾ ಕಂಪನಿಗೆ ವಂತಿಗೆಯಾಗಿ ಪಾವತಿ ಮಾಡಿದ್ದಾರೆ.

ರಾಮನಗರ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಇಲ್ಲಿನ 33 ಸಾವಿರ ಹೆಕ್ಟೇರ್‌ನಲ್ಲಿ ಮಾವು ಕೃಷಿ ನಡೆದಿದೆ. 28 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಕೃಷಿಯನ್ನು ಅವಲಂಬಿಸಿವೆ. ಹವಾಮಾನ ವೈಪರೀತ್ಯದಿಂದಾಗಿ ಈಚಿನ ದಿನಗಳಲ್ಲಿ ಮಾವು ಬೆಳೆ ಸಹ ಅನಿಶ್ಚಿತತೆ ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ವಿಮೆಯು ರೈತರ ಕೈ ಹಿಡಿಯಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

ಎಷ್ಟು ಸಿಗಲಿದೆ ವಿಮೆ: ಜಿಲ್ಲೆಯಲ್ಲಿ ಎಸ್‌ಬಿಐ ಜನರಲ್‌ ಇನ್ಶೂರೆನ್ಸ್ ಕಂಪನಿಯು ಮಾವು ವಿಮೆಯ ಜವಾಬ್ದಾರಿ ಹೊತ್ತಿದೆ. ಬೆಳೆ ನಷ್ಟದ ಸಂದರ್ಭಗಳಲ್ಲಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹80 ಸಾವಿರದವರೆಗೂ ಪರಿಹಾರ ಪಡೆಯುವ ಅವಕಾಶ ಇದೆ. ವಿಮೆ ಮೊತ್ತದ ಶೇ 39.56 ರಷ್ಟು ಹಣವು ವಂತಿಗೆಯ ರೂಪದಲ್ಲಿ ವಿಮೆ ಕಂಪನಿಗೆ ಪಾವತಿ ಆಗುತ್ತಿದೆ. ಪ್ರತಿ ಹೆಕ್ಟೇರ್‌ ವಿಮೆಗೆ ಒಟ್ಟು ₹31,648 ಹಣ ಪಾವತಿಸಲಾಗುತ್ತಿದೆ. ಇದರಲ್ಲಿ ಶೇ 12.5 ರಂತೆ ₹10 ಸಾವಿರ ಹಣವನ್ನು ಕೇಂದ್ರ ಸರ್ಕಾರ, ಶೇ 22.06 ರಂತೆ ₹17,648 ವಂತಿಗೆಯನ್ನು ರಾಜ್ಯ ಸರ್ಕಾರ ಭರಿಸುತ್ತದೆ. ರೈತರು ತಮ್ಮ ಪಾಲಿನ ಶೇ 5ರಷ್ಟು ವಂತಿಗೆಯಾಗಿ ಪ್ರತಿ ಹೆಕ್ಟೇರ್‌ಗೆ ₹4 ಸಾವಿರ ಕಟ್ಟಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಮುಂಗಾರಿನ ಆರಂಭದೊಂದಿಗೆ ಬೆಳೆ ವಿಮೆಗೆ ನೋಂದಣಿಯೂ ಆರಂಭಗೊಳ್ಳುತ್ತದೆ. ರೈತರು ಬೆಳೆ ಸಾಲದ ಅರ್ಜಿಗಳೊಂದಿಗೆ ಪಹಣಿ, ಆಧಾರ್ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಸ್ವಯಂಘೋಷಿತ ಬ್ಯಾಂಕ್‌ ವಿವರಗಳನ್ನು ನೀಡಿ ತಮ್ಮ ಹತ್ತಿರದ ಬ್ಯಾಂಕ್, ಸಾಮಾನ್ಯ ಕೇಂದ್ರ, ಗ್ರಾಮ ಒನ್‌, ನೋಂದಾಯಿತ ಎಫ್‌ಪಿಒಗಳ ಮೂಲಕ ವಿಮೆಗೆ ನೋಂದಾಯಿಸಬಹುದಾಗಿದೆ.

ಪರಿಹಾರದ ಲೆಕ್ಕಾಚಾರ: ಹವಾಮಾನ ವೈಪರೀತ್ಯದಿಂದ ಆಗುವ ನಷ್ಟದ ಅಂದಾಜಿನ ಲೆಕ್ಕಾಚಾರದ ಮೇಲೆ ಪರಿಹಾರದ ಮೊತ್ತವು ನಿಗದಿ ಆಗುತ್ತದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮಾಪಕಗಳನ್ನು ಅಳವಡಿಸಿದ್ದು, ಅದರ ವರದಿಯನ್ನು ಪರಿಗಣಿಸಲಾಗುತ್ತದೆ. ಜೊತೆಗೆ ತಾಪಮಾನ, ಗಾಳಿಯ ವೇಗ, ಆದ್ರತೆ ಇತ್ಯಾದಿ ಅಂಶಗಳೂ ನಿರ್ಣಾಯಕ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT