ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಟು ತಿಂಗಳಿಂದ ಬಾಕಿ ಉಳಿದ ಹಾಲು ಪ್ರೋತ್ಸಾಹಧನ

ಕೂಡಲೇ ಬಿಡುಗಡೆಗೆ ರೈತ ಸಂಘದ ಪ್ರತಿನಿಧಿಗಳ ಒತ್ತಾಯ
Published 14 ಜೂನ್ 2024, 6:13 IST
Last Updated 14 ಜೂನ್ 2024, 6:13 IST
ಅಕ್ಷರ ಗಾತ್ರ

ಕನಕಪುರ: ಹೈನುಗಾರಿಕೆ ಉತ್ತೇಚಿಸಲು ಸರ್ಕಾರದಿಂದ ನೀಡುವ ಹಾಲಿನ ಪ್ರೋತ್ಸಾಹ ಧನ ಕಳೆದ ಎಂಟು ತಿಂಗಳಿನಿಂದ ಬಾಕಿ ಉಳಿದಿದೆ. ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಒತ್ತಾಯಿಸಿದರು.

ಇಲ್ಲಿನ ರಾಜರಾವ್‌ ರಸ್ತೆಯಲ್ಲಿರುವ ರೈತ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ರೈತರ ಕುಂದು ಕೊರತೆ ಮಾಸಿಕ ಸಭೆಯಲ್ಲಿ ಮಾತನಾಡಿದರು.

ನೆರೆ ರಾಜ್ಯಗಳಲ್ಲಿ ರೈತರಿಂದ ಖರೀದಿ ಮಾಡುವ ಹಾಲಿನ ದರ ಹೆಚ್ಚಿದೆ. ರಾಜ್ಯದಲ್ಲಿ ಹಾಲಿನ ಖರೀದಿ ದರ ಕಡಿಮೆ ಇದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರೈತರ ಪರವಾಗಿ ನಿಲ್ಲಬೇಕಿದ್ದ ಹಾಲಿನ ಒಕ್ಕೂಟಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪಶು ಆಹಾರ ಬೆಲೆ ದುಬಾರಿಯಾಗುತ್ತಿದೆ. ರೈತರು ಬೆಳೆಯುವ ಹಾಲಿನ ಬೆಲೆ ಮಾತ್ರ ಏರಿಕೆ ಆಗುತ್ತಿಲ್ಲ. ಒಂದು ಲೀಟರ್‌ ನೀರಿನ ಬೆಲೆ ₹20 ಇದೆ. ಹಾಲಿನ ಬೆಲೆ 1 ಲೀಟರ್‌ಗೆ ₹25 ಇದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಹೈನುಗಾರಿಕೆ ನಂಬಿ ಜೀವನ ರೂಪಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ಮಳೆ ಪ್ರಾರಂಭವಾಗಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕೃಷಿ ಇಲಾಖೆಯು ತಾಲ್ಲೂಕಿನಲ್ಲಿ ರಸಗೊಬ್ಬರದ ಕೊರತೆ ಬಾರದಂತೆ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರನ್ನು ವಂಚಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರ ದೇಶಾದ್ಯಂತ ಅಮೂಲ್ ಒಂದೇ ಬ್ರಾಂಡ್ ಮಾಡಲು ಹೊರಟಿದೆ. ಇದರಿಂದ ಕರ್ನಾಟಕ ಹಾಲು ಮಹಾ ಮಂಡಳಿ(ನಂದಿನಿ ಬ್ರಾಂಡ್‌) ಮುಚ್ಚಿ ಹೋಗುತ್ತದೆ. ಈ ಹಿಂದೆಯೂ ಇಂತಹ ಪ್ರಸ್ತಾಪ ಬಂದಾಗ ವಿರೋಧ ವ್ಯಕ್ತವಾಗಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಈಗ ಮತ್ತೆ ಅದಕ್ಕೆ ಚಾಲನೆ ಸಿಕ್ಕಿದೆ. ರೈತರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ರೈತ ಸಂಘದ ಕನಕಪುರ ತಾಲ್ಲೂಕು ಅಧ್ಯಕ್ಷ ಕುಮಾರ್, ಹಾರೋಹಳ್ಳಿ ತಾಲ್ಲೂಕು ಅಧ್ಯಕ್ಷ ಬಸವರಾಜು, ಮುಖಂಡರಾದ ಮರಿಯಪ್ಪ, ಕುಮಾರ್, ಶಿವಕುಮಾರ್, ಮಲ್ಲೇಶ್, ಪಂಚಮುಖಿ, ಕೆಂಪಣ್ಣ, ಮುನಿಸಿದ್ದೇಗೌಡ, ಮರಿಯಪ್ಪ, ಲಕ್ಷ್ಮಯ್ಯ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT