ಶುಕ್ರವಾರ, ಆಗಸ್ಟ್ 19, 2022
27 °C
ಕನ್ನಮಂಗಲ ಬಳಿಯ ಹಾಲಿನ ಪುಡಿ ತಯಾರಿಕಾ ಘಟಕಕ್ಕೆ ಸಚಿವ ಎಸ್‌.ಟಿ. ಸೋಮಶೇಖರ್‍ ಭೇಟಿ

'ಸಹಕಾರ ಕ್ಷೇತ್ರ ಬಲವರ್ಧನೆಗೆ ಕ್ರಮ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೆಎಂಎಫ್, ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ ಹಾಗೂ ಒಕ್ಕೂಟಗಳ ಬಲವರ್ಧನೆ ಮಾಡಲಾಗುವುದು. ಕೋವಿಡ್ ಬಳಿಕ ಆರ್ಥಿಕ ಚೇತರಿಕೆಗೆ ಸರ್ಕಾರ ಬದ್ಧವಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಚನ್ನಪಟ್ಟಣದ ಕನ್ನಮಂಗಲ ಗ್ರಾಮದ ಬಳಿ ಇರುವ ಹಾಲಿನ ಸಂಸ್ಕರಣೆ ಮತ್ತು ಪುಡಿ ತಯಾರಿಕಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಸಹಕಾರ ಕ್ಷೇತ್ರಗಳ ಅಭಿವೃದ್ಧಿಗೆ ನಾಲ್ಕು ವಿಭಾಗಗಳ ಮೂಲಕ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದೇ 16ರಂದು ಮೈಸೂರಿನಲ್ಲಿ ಮುಖ್ಯಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಆತ್ಮನಿರ್ಭರ್‌ ಮೂಲಕ ಸಹಕಾರ ಕ್ಷೇತ್ರಕ್ಕೆ ರಾಜ್ಯ ಸರ್ಕಾರ  16 ಸಾವಿರ ಕೋಟಿ ರೂಪಾಯಿ ಹಾಗೂ ಕೇಂದ್ರ ಸರ್ಕಾರ 4325 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು.

ಹೈನುಗಾರಿಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನಕ್ಕೆ ಏರಿದೆ. ಕೋವಿಡ್ ಹಿನ್ನಲೆಯಲ್ಲಿ ಹೊರ ರಾಜ್ಯಗಳಿಗೆ ಹಾಲು ಮಾರಾಟ ಸಾಧ್ಯವಾಗಿಲ್ಲ. ಇದರಿಂದ ಹೆಚ್ಚುವರಿಯಾಗಿ ಉಳಿಕೆಯಾದ ಹಾಲನ್ನು ಪೌಡರ್‌ ಮಾಡಿ ಇಡಲಾಗಿದೆ. ಹೀಗೆ 126 ಸಾವಿರ ಮೆಟ್ರಿಕ್ ಟನ್‌ ನಷ್ಟು ಪೌಡರ್‌ ಹಾಗೆಯೇ ಉಳಿದಿದೆ. ಇದನ್ನು ವಿದ್ಯಾಗಮ ಯೋಜನೆಯ ಮಕ್ಕಳಿಗೆ ನೀಡುವುದಕ್ಕೆ ಚಿಂತನೆ ನಡೆದಿದೆ ಎಂದರು.

ಚನ್ನಪಟ್ಟಣದಲ್ಲಿನ ಈ ಹಾಲಿನ ಪುಡಿ ಉತ್ಪಾದನಾ ಘಟಕವು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಸದ್ಯಕ್ಕೆ ಇಡೀ ದೇಶದಲ್ಲೇ ಅತ್ಯುತ್ತಮ ಘಟಕ ಎನಿಸಿದೆ. ಈ ಘಟಕದಲ್ಲಿ ಉತ್ಪಾದನೆಯಾಗುವ ಹಾಲಿನ ಪುಡಿಗೆ ಪ್ರೀಮಿಯಂ ಬೆಲೆ ಇದೆ. ಶ್ಲಾಘಿಸಿದರು. ಇತರ ಹಾಲು ಒಕ್ಕೂಟಗಳಲ್ಲಿ ಸಂಗ್ರಹವಾಗುವ ಅಧಿಕ ಹಾಲನ್ನು ಇಲ್ಲಿಗೆ ಕಳುಹಿಸಿಕೊಟ್ಟಲ್ಲಿ ಈ ಘಟಕದಲ್ಲಿ ಹಾಲಿನ ಪುಡಿಯನ್ನಾಗಿ ಪರಿವರ್ತಿಸಿಕೊಡಲಾಗುವುದು. ನಿಗದಿತ ದರದಂತೆ ಪುಡಿಯನ್ನಾಗಿ ಪರಿವರ್ತಿಸಿ ಕೊಡಲಾಗುತ್ತದೆ ಎಂದರು.

ಕಣ್ವ ರಸ್ತೆಯಲ್ಲಿರುವ ಈ ಘಟಕಕ್ಕೆ ಈವರೆಗೆ ₨325 ಕೋಟಿ ಅನುದಾನ ನೀಡಲಾಗಿದೆ. ಇನ್ನು 10 ಎಕರೆ ಪ್ರದೇಶ ವಿವಾದಲ್ಲಿದೆ. ಕನಕಪುರ ಡೇರಿ ಸೇರಿ ರಾಮನಗರ ಜಿಲ್ಲೆಗೆ ಒಟ್ಟು ₨800 ಕೋಟಿ ನೀಡಲಾಗಿದೆ. ಇನ್ನೊಂದು ವರ್ಷದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಬೈಪಾಸ್‌ ಕಾಮಗಾರಿ ಮುಗಿಯಲಿದ್ದು, ಬಳಿಕ ಡೇರಿಗೆ ಉತ್ತಮ ರಸ್ತೆ ಸಂಪರ್ಕ ಸಿಗಲಿದೆ. ಇಲ್ಲಿ ಇಲ್ಲಿ ಶೇ 90ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಹಾಲು ಖರೀದಿ: ಕೋವಿಡ್ ಸಂದರ್ಭದಲ್ಲಿ ರಾಜ್ಯದ 8.5 ಲಕ್ಷ ಹೈನುಗಾರರಿಂದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಸುಮಾರು 79 ಕೋಟಿ ರೂಪಾಯಿ ವೆಚ್ಚದ ಹಾಲನ್ನು ಖರೀದಿಸಿತ್ತು. ಹೀಗೆ ಖರೀದಿಸಿರುವ ಹಾಲನ್ನು ರಾಜ್ಯದಲ್ಲಿ ನಗರಸಭೆ ಮತ್ತು ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉಚಿತವಾಗಿ ಹಂಚಲಾಗಿದೆ ಎಂದರು.

ಗೊಂಬೆಗಳಿಗೆ ಸ್ಥಾನ: ಚನ್ನಪಟ್ಟಣ ಗೊಂಬೆಗಳು ನಮ್ಮ ಪರಂಪರೆಯ ಒಂದು ಭಾಗ. ದಸರಾ ಆಚರಣೆಯಲ್ಲಿ ಇವುಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.ಮಮೈಶುಗರ್ ಕಾರ್ಖನೆಗೆ ಸರ್ಕಾರ ₨25 ಕೋಟಿ ಅನುದಾನ ನೀಡಿದೆ. ಇದಕ್ಕಾಗಿ ಸಚಿವ ಸಂಪುಟ ಉಪ ಸಮಿತಿ ಸಹ ರಚನೆ ಆಗಿದೆ. ಆದರೆ ಸಕ್ಕರೆ ಸಚಿವರಿಗೆ ಕೋವಿಡ್ ಕಾರಣಕ್ಕೆ ಸದ್ಯ ಈ ಕಾರ್ಯಕ್ಕೆ ಅಡ್ಡಿ ಆಗಿದೆ ಎಂದು ಹೇಳಿದರು.

ಬಮುಲ್ ನಿರ್ದೇಶಕ ಪಿ. ನಾಗರಾಜು, ಬಮುಲ್‌ ಅಧಿಕಾರಿಗಳು ಜೊತೆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.