ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವನದುರ್ಗದಲ್ಲಿ ಚಾರಣ: 4 ದಿನವಾದರೂ ಪತ್ತೆಯಾಗದ ಯುವಕ

Published 27 ಡಿಸೆಂಬರ್ 2023, 19:10 IST
Last Updated 27 ಡಿಸೆಂಬರ್ 2023, 19:10 IST
ಅಕ್ಷರ ಗಾತ್ರ

ಮಾಗಡಿ : ತಾಲ್ಲೂಕಿನ ಸಾವನದುರ್ಗಕ್ಕೆ ಡಿ.24ರಂದು ಬೆಂಗಳೂರಿನಿಂದ ಚಾರಣಕ್ಕೆ ಬಂದು ನಾಪತ್ತೆಯಾಗಿರುವ ಉತ್ತರಪ್ರದೇಶ ಮೂಲದ ಯುವಕ ಸಾಫ್ಟ್‌ವೇರ್ ಎಂಜಿನಿಯರ್ ಗಗನ್‌ದೀಪ್ ಸಿಂಗ್‌ (30) ನಾಲ್ಕು ದಿನವಾದರೂ ಪತ್ತೆಯಾಗಿಲ್ಲ.

ಅವರ ಪತ್ತೆಗಾಗಿ ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಥಳೀಯರನ್ನೊಳಗೊಂಡ 100ಕ್ಕೂ ಹೆಚ್ಚು ಮಂದಿ ಬೆಳಿಗ್ಗೆಯಿಂದ ಸಂಜೆವರೆಗೆ ಸತತ ಹುಡುಕಾಟ ನಡೆಸುತ್ತಿದ್ದಾರೆ. ಡ್ರೋನ್ ಮತ್ತು ಥರ್ಮಲ್ ಡ್ರೋನ್ ಮೂಲಕವೂ ಶೋಧ ನಡೆಸಲಾಗಿದೆ. ಆದರೂ, ಪತ್ತೆಯಾಗಿಲ್ಲ. ಕತ್ತಲೆಯಾದ ಕಾರಣ ಸಂಜೆ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿದೆ.

ಬೆಟ್ಟದ ಸುತ್ತಮುತ್ತ ಬಹುತೇಕ ಹುಡುಕಾಟ ನಡೆಸಲಾಗಿದೆ. ಎಲ್ಲಿಯೂ ಸುಳಿವು ಸಿಕ್ಕಿಲ್ಲ. ಅವರ ಬಳಿ ಇದ್ದ ಆ್ಯಪಲ್ ಐಫೋನ್ ನಾಪತ್ತೆಯಾದ ದಿನದಂದು ಸಂಜೆ 5ಕ್ಕೆ ಸ್ವಿಚ್ ಆಫ್ ಆಗಿದೆ. ಫೋನ್‌ ಲೊಕೇಷನ್ ಆಧರಿಸಿ ಪತ್ತೆ ಹಚ್ಚುವುದಕ್ಕಾಗಿ, ಲೊಕೇಷನ್ ಪತ್ತೆಗೆ ನೆರವಾಗುವಂತೆ ಆ್ಯಪಲ್ ಕಂಪನಿಗೂ ಪತ್ರ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಸ್‌ಮಸ್ ಪ್ರಯುಕ್ತ ಸಾಲು ರಜೆ ಇದ್ದಿದ್ದರಿಂದಾಗಿ ಸಿಂಗ್ ಹಾಗೂ ಅವರ ಸ್ನೇಹಿತ 24ರಂದು ಸಾವನದುರ್ಗ ಬೆಟ್ಟಕ್ಕೆ ಚಾರಣ ಬಂದಿದ್ದರು. ಬೆಟ್ಟ ಹತ್ತುವಾಗ ಅವರ ಸ್ನೇಹಿತ ಸುಸ್ತಾಗಿದ್ದರಿಂದ ಅರ್ಧದಲ್ಲೇ ಉಳಿದಿದ್ದರು. ಸ್ನೇಹಿತನನ್ನು ಅಲ್ಲಿಯೇ ಬಿಟ್ಟು ಬೆಟ್ಟ ಹತ್ತಿದ್ದ ಸಿಂಗ್, ಮರಳಿ ವಾಪಸ್ ಬಂದಿರಲಿಲ್ಲ. ಸಂಜೆಯಾದರೂ ಬಾರದಿದ್ದರಿಂದ ಆತಂಕಗೊಂಡ ಅವರ ಸ್ನೇಹಿತ ಮಾಗಡಿ ಠಾಣೆಗೆ ದೂರು ಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT