ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಗೂಡು ಮಾರುಕಟ್ಟೆ ಸ್ಥಳಾಂತರ ಬೇಡ: ಎನ್. ರವಿಕುಮಾರ್

ರೇಷ್ಮೆ ಗೂಡು ಮಾರುಕಟ್ಟೆಗೆ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಭೇಟಿ
Published 19 ಜನವರಿ 2024, 14:27 IST
Last Updated 19 ಜನವರಿ 2024, 14:27 IST
ಅಕ್ಷರ ಗಾತ್ರ

ರಾಮನಗರ: ‘ನಗರದಲ್ಲಿರುವ ರೇಷ್ಮೆ ಗೂಡು ಮಾರುಕಟ್ಟೆಯು ಸುಸಜ್ಜಿತವಾಗಿದೆ. ರೈತರು ಮತ್ತು ಖರೀದಿದಾರರೆಲ್ಲರೂ ಈ ಜಾಗ ಅನುಕೂಲವಾಗಿರುವುದರಿಂದ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರಿಸದೆ, ಇಲ್ಲಿಯೇ ಮುಂದುವರಿಸಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು.

ನಗರದ ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರುಕಟ್ಟೆಯು ಈಗಾಗಲೇ ಅತ್ಯಂತ ಜನಪ್ರಿಯವಾಗಿದೆ. ಎಲ್ಲರಿಗೂ ಪರಿಚಿತವಾಗಿರುವ ಮಾರುಕಟ್ಟೆಯನ್ನು ಸ್ಥಳಾಂತರಿಸುವುದು ಸರಿಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಇಲ್ಲಿರುವ ಮಾರುಕಟ್ಟೆಯಲ್ಲಿ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ನಡೆಯುತ್ತಿದ್ದು, ಎಲ್ಲರ ವಿಶ್ವಾಸಕ್ಕೆ ಪಾತ್ರವಾಗಿದೆ. ರೈತರಿಗೆ ಯಾವುದೇ ರೀತಿಯ ಮೋಸಕ್ಕೆ ಅವಕಾಶವಿಲ್ಲ. ರೈತರ ಕಣ್ಣೆದುರಿಗೆ ಮಾರುಕಟ್ಟೆಯಲ್ಲಿ ತನ್ನ ಗೂಡು ಎಷ್ಟು ರೂಪಾಯಿಗೆ ಮಾರಾಟವಾಯ್ತು ಎಂಬ ನಿಖರ ಮಾಹಿತಿ ಸಿಗುತ್ತದೆ. 2015ಕ್ಕಿಂತ ಮುಂಚೆ ಇಲ್ಲಿ ಅಂತಹ ವ್ಯವಸ್ಥೆ ಇರಲಿಲ್ಲ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಯನ್ನು ತರಲಾಗಿದೆ. ನಿತ್ಯ ಪ್ರತಿ ಕೆ.ಜಿ.ಗೆ ₹ 400ರಿಂದ ₹ 500ರ ಆಸುಪಾಸಿನಲ್ಲಿ ಗೂಡು ಮಾರಾಟವಾಗುತ್ತಿದೆ. ಹಿಂದೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 1 ಸಾವಿರದಂತೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ದೇಶದಲ್ಲಿಯೇ ಈ ಬೆಲೆಗೆ ಎಲ್ಲಿಯೂ ಗೂಡು ಮಾರಾಟವಾಗಿರಲಿಲ್ಲ’ ಎಂದು ಹೇಳಿದರು.

‘ದೇಶದಲ್ಲಿ ರೇಷ್ಮೆಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ, ಅಗತ್ಯವಿರುವಷ್ಟು ರೇಷ್ಮೆ ನಮ್ಮಲ್ಲಿ ಉತ್ಪಾದನೆಯಾಗುತ್ತಿಲ್ಲ. ರೇಷ್ಮೆ ಬೆಳೆಯುವವರಿಗೆ ಯಾವುದೇ ನಷ್ಟ ಉಂಟಾಗುತ್ತಿಲ್ಲ. ಹಾಗಾಗಿ, ರೈತರು ಈ ಬೆಳೆಯುನ್ನು ಹೆಚ್ಚು ಬೆಳೆಯುವುದರಿಂದ ಮತ್ತಷ್ಟು ಲಾಭ ಗಳಿಸಬಹುದಾಗಿದೆ. ಅಡಿಕೆ ಬೆಳೆಯನ್ನು ಹೇಗೆ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದಾರೋ, ಅದೇ ರೀತಿ ರೇಷ್ಮೆ ಸಹ ಬೆಳೆಯಬೇಕು’ ಎಂದು ಸಲಹೆ ನೀಡಿದರು.

ಮಾರುಕಟ್ಟೆಯಲ್ಲಿ ಸುತ್ತಾಡಿ ರೇಷ್ಮೆಯನ್ನು ಪರಿಶೀಲಿಸಿದ ರವಿಕುಮಾರ್, ರೈತರೊಂದಿಗೆ ಮಾತುಕತೆ ನಡೆಸಿದರು. ನಂತರ, ಗೂಡಿನ ಮಾರುಕಟ್ಟೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.

ಮಾರುಕಟ್ಟೆಯಲ್ಲಿರುವ ಮೂಲಸೌಕರ್ಯ ಸಮಸ್ಯೆ ಹಾಗೂ ವಸತಿ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವೆ. ಬಳಿಕ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುವೆ.
–ಎನ್. ರವಿಕುಮಾರ್ ಮುಖ್ಯ ಸಚೇತಕ ವಿಧಾನ ಪರಿಷತ್

‘ಮಂಚನಬೆಲೆ ಪ್ರವಾಸಿ ತಾಣವಾಗಲಿ’

ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯಕ್ಕೆ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ‘ರಾಜಧಾನಿ ಬೆಂಗಳೂರಿಗೆ ಹತ್ತಿರುವ ಮಂಚನಬೆಲೆ ಜಲಾಶಯವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಗಮನ ಹರಿಸಬೇಕು. ಕೃಷ್ಣರಾಜ ಸಾಗರ ಜಲಾಶಯದ ಮಾದರಿಯಂತೆ ಈ ಜಲಾಶಯವನ್ನು ಸಹ ಸರ್ಕಾರ ಅಭಿವೃದ್ಧಿಪಡಿಸಬೇಕಿದೆ. ಜಲಾಶಯದಿಂದ ಯಶವಂತಪುರ ಮತ್ತು ಮಾಗಡಿ ಪಟ್ಟಣದ ಸುತ್ತಮುತ್ತಲಿನ 28 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ನೀರು ಕಲುಷಿತವಾಗಿರುವುದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ಮಾಹಿತಿ ಇದೆ. ಕಾರ್ಖಾನೆ ಸೇರಿದಂತೆ ಇತರೆ ಮೂಲಗಳಿಂದ ಜಲಾಶಯದ ನೀರು ಕಲುಷಿತಗೊಂಡಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ರವಿಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT