ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಯಲ್ಲಿ ಮಾಡ್ಯೂಲರ್‌ ಐಸಿಯು: ಡಿಸಿಎಂ ಅಶ್ವತ್ಥನಾರಾಯಣ ಚಾಲನೆ

Last Updated 28 ಮೇ 2021, 4:07 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕು ಆಸ್ಪತ್ರೆಯೊಂದರ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಅತ್ಯಾಧುನಿಕ ಮಾಡ್ಯೂಲರ್‌ ಐಸಿಯು ಘಟಕವನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗುರುವಾರ ಲೋಕಾರ್ಪಣೆ ಮಾಡಿದರು.

ಕೋವಿಡ್‌ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುವ ಈ ಮಾಡ್ಯೂಲರ್‌ ಐಸಿಯು ಅನ್ನು ಆ್ಯಕ್ಟ್‌ ಗ್ರಾಂಟ್‌ ಮತ್ತು ರೆನಾಕ್‌ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಈ ರೀತಿಯ ಐಸಿಯುಗಳನ್ನು ಈಗಾಗಲೇ ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಬಳಕೆ ಮಾಡಲಾಗುತ್ತಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ಎಸಿಟಿ (ಆಕ್ಷನ್‌ ಕೋವಿಡ್‌ ಟೀಂ) ಗ್ರಾಂಟ್ಸ್‌ ಈ ಮಾಡ್ಯೂಲರ್‌ ಐಸಿಯು ಅನ್ನು ಮಾಗಡಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ. ಅದಕ್ಕೆ ಅಗತ್ಯವಾದ ಮಾನಿಟರ್‌ಗಳನ್ನು ಬಿಡದಿಯ ಟೊಯೊಟಾ ಕಿರ್ಲೋಸ್ಕರ್‌ ಕಂಪನಿ ನೀಡಿದ್ದು, ವೆಂಟಿಲೇಟರ್‌ಗಳು ಪಿ.ಎಂ. ಕೇರ್‌ನಿಂದ ಬಂದಿವೆ. ಈ ಐಸಿಯು ಹೊರಗಿನಿಂದ ಒಳಬರುವ ಅಥವಾ ಒಳಗಿನಿಂದ ಹೊರ ಬರುವ ಗಾಳಿಯು ಸಂಪೂರ್ಣವಾಗಿ ಶುದ್ಧೀಕರಣಗೊಳ್ಳುತ್ತದೆ. ಜತೆಗೆ ಪ್ರತ್ಯೇಕ ಆಮ್ಲಜನಕ ಸಂಪರ್ಕದ ಜತೆಗೆ, ನೀರು ಹಾಗೂ ಒಳಚರಂಡಿ ಪ್ರತ್ಯೇಕ ಸಂಪರ್ಕ ಇರುತ್ತದೆ. ರಾಜ್ಯದಲ್ಲೇ ಇಂಥ ಆಧುನಿಕ ಐಸಿಯು ಅನ್ನು ಪಟ್ಟಣದ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ’ ಎಂದರು.

ಆಮ್ಲಜನಕ ಘಟಕ: ‘ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 100 ಹಾಸಿಗೆಗಳಿದ್ದು, ಈ ಪೈಕಿ 50 ಬೆಡ್‌ಗಳಿಗೆ ಆಮ್ಲಜನಕ ಸೌಲಭ್ಯವಿದೆ. ಇನ್ನು ಕೆಲ ದಿನಗಳಲ್ಲಿಯೇ ಉಳಿದ 50 ಹಾಸಿಗೆಗಳನ್ನು ಆಮ್ಲಜನಕ ಹಾಸಿಗೆಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಅಲ್ಲದೆ, ನಿಮಿಷಕ್ಕೆ 600 ಕೆಎಲ್‌ ಪೂರೈಕೆ ಸಾಮರ್ಥ್ಯದ ಆಮ್ಲಜನಕ ಉತ್ಪಾದಕವನ್ನೂ ಎರಡು ತಿಂಗಳಲ್ಲಿ ಸ್ಥಾಪನೆ ಮಾಡಲಾಗುವುದು. ಜತೆಗೆ ಒಟ್ಟು ಬೆಡ್‌ಗಳಲ್ಲಿ ಶೇ 25 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡುವ ಉದ್ದೇಶವೂ ಇದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಆಮ್ಲಜನಕ ಘಟಕಗಳನ್ನು ಅಳವಡಿಸಲಾಗುವುದು’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ನೇಮಕ: ‘ಎಲ್ಲಾ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡ
ಲಾಗುವುದು. ಮುಖ್ಯವಾಗಿ ಸೋಲೂರು ಮತ್ತು ತಿಪ್ಪಸಂದ್ರ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಕ್ಷಣವೇ ಸಿಬ್ಬಂದಿ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು’ ಎಂದು ಡಿಸಿಎಂ ತಿಳಿಸಿದರು.

ಭೇಟಿ: ಸಿದ್ಧಾರೂಢಾಶ್ರಮದಲ್ಲಿ ಆದ್ಯತಾ ಗುಂಪಿಗೆ ಲಸಿಕೆ ನೀಡುತ್ತಿರುವುದನ್ನು ಡಿಸಿಎಂ ವೀಕ್ಷಿಸಿದರು. ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಸೋಂಕಿತರ ಯೋಗಕ್ಷೇಮ ವಿಚಾರಿಸಿದರು. ವಿ.ಡಿ.ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು.

ಶಾಸಕ ಎ.ಮಂಜುನಾಥ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌, ಜಿ.ಪಂ. ಸಿಇಒ ಇಕ್ರಂ, ಡಿಎಚ್‌ಒ ಡಾ.ನಿರಂಜನ್‌, ರೆನಾಕ್‌ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಾಜಿ ಅಬ್ರಹಾಂ, ಹಿರಿಯ ಪ್ರಧಾನ ವ್ಯವಸ್ಥಾಪಕ ಸುಧೀರ್‌ ಮನೆನ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು, ಬಿಜೆಪಿ ಮುಖಂಡರಾದ ಎಚ್‌.ಎಂ.ಕೃಷ್ಣಮೂರ್ತಿ, ಧನಂಜಯ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ ಪ್ರಸಾದ್‌, ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್‌, ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT