ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಗಿನ ಮೈತ್ರಿ ಸ್ವಾಭಾವಿಕ; ಹಿಂದಿನದ್ದು ಅಸ್ವಾಭಾವಿಕ– ನಿಖಿಲ್‌ ಕುಮಾರಸ್ವಾಮಿ

Published 18 ಮಾರ್ಚ್ 2024, 16:43 IST
Last Updated 18 ಮಾರ್ಚ್ 2024, 16:43 IST
ಅಕ್ಷರ ಗಾತ್ರ

ರಾಮನಗರ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ನಾವು ಮಾಡಿಕೊಂಡಿರುವ ಮೈತ್ರಿ ಸ್ವಾಭಾವಿಕವಾದುದು. ಅದೇ 2019ರಲ್ಲಿ ಕಾಂಗ್ರೆಸ್ ಜೊತೆ ಮಾಡಿಕೊಂಡಿದ್ದ ಮೈತ್ರಿ ಅಸ್ವಾಭಾವಿಕವಾಗಿತ್ತು. ಹಾಗಾಗಿ, ಕಾರ್ಯಕರ್ತರಿಂದ ಸ್ಪಂದನೆ ಸಿಕ್ಕಿರಲಿಲ್ಲ. ಈಗಿನ ಸ್ಥಿತಿ ಹಿಂದಿನಂತಿಲ್ಲ. ಬಿಜೆಪಿ–ಜೆಡಿಎಸ್ ಕಾರ್ಯಕರ್ತರು ಗೆಲುವಿಗಾಗಿ ಒಗ್ಗೂಡಿ ಕೆಲಸ ಮಾಡುತ್ತಾರೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

‘ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಕಾರಣಕ್ಕಾಗಿ ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸಿದೆಯೇ ಹೊರತು, ನಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿಲ್ಲ. ಹಾಗಾಗಿ, ಮುಂದೆ ನಮ್ಮ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುವ ಯಾವುದೇ ಆತಂಕವಿಲ್ಲ’ ಎಂದು ನಗರದ ಜಾಲಮಂಗಲ ರಸ್ತೆಯ ಮಂಜುನಾಥ ಕನ್ವೆನ್ಷನ್ ಹಾಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಶೀಘ್ರ ತೀರ್ಮಾನ: ‘ನಮಗೆ ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಬಿಜೆಪಿ ವರಿಷ್ಠರನ್ನು ಕೇಳಿದ್ದೇವೆ. ಇತ್ತೀಚೆಗೆ ಕುಮಾರಸ್ವಾಮಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗಲೂ ಇದೇ ಬೇಡಿಕೆ ಮುಂದಿಟ್ಟಿದ್ದಾರೆ. ಕೋಲಾರದ 8 ಕ್ಷೇತ್ರಗಳ ಪೈಕಿ, 3 ಕಡೆ ನಮ್ಮ ಶಾಸಕರಿದ್ದಾರೆ. ಅಲ್ಲಿ ಜೆಡಿಎಸ್ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ, ಕ್ಷೇತ್ರವನ್ನು ನಮಗೆ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಸದ್ಯದಲ್ಲೇ ಈ ಕುರಿತು ತೀರ್ಮಾನ ಹೊರಬೀಳಲಿದೆ’ ಎಂದು ತಿಳಿಸಿದರು.

‘ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಡಾ. ಸಿ.ಎನ್ ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಿಲ್ಲಿಸುವ ಕುರಿತು ಸ್ವತಃ ಗೃಹ ಸಚಿವ ಅಮಿತ್ ಶಾ ಅವರೇ ನಮ್ಮ ವರಿಷ್ಠರ ಜೊತೆ ಪ್ರಸ್ತಾಪಿಸಿದರು. ಮಾತನಾಡಿ ಒಪ್ಪಿಸುವಂತೆ ಹೇಳಿದರು. ಅದರಂತೆ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಮಾತನಾಡಿ ಸ್ಪರ್ಧೆಗೆ ಮನವೊಲಿಸಿದರು’ ಎಂದು ಹೇಳಿದರು.

ಪಕ್ಷಾತೀತ ವ್ಯಕ್ತಿ: ‘ಬಡವರ ಸೇವೆ ಮೂಲಕ ಮನೆ ಮಾತಾಗಿರುವ ಮಂಜುನಾಥ್ ಅವರಂತಹವರು ರಾಜಕಾರಣಕ್ಕೆ ಬಂದರೆ, ಕ್ರಾಂತಿಕಾರಕ ಬದಲಾವಣೆಗಳನ್ನು ತರಬಹುದು ಎಂದು ಅಮಿತ್ ಶಾ ಅವರು ಹೇಳಿದ್ದರು. ಎಲ್ಲರ ಒತ್ತಾಸೆಯಂತೆ ಅವರು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿದ್ದರೂ ಅವರೊಬ್ಬ ಪಕ್ಷಾತೀತ ವ್ಯಕ್ತಿಯಾಗಿದ್ದಾರೆ. ಹೋದಲ್ಲೆಲ್ಲಾ ಅವರಿಗೆ ಹೆಚ್ಚಿನ ಜನ ಬೆಂಬಲ ಸಿಗುತ್ತಿದೆ’ ಎಂದರು.

‘ಕುಮಾರಸ್ವಾಮಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದರಿಂದ ನನ್ನ ಮೇಲೆ ಹೆಚ್ಚಿನ ಒತ್ತಡವಿದೆ. ಎಲ್ಲಾ ಕಡೆ ಪ್ರವಾಸ ಮಾಡಿ ಪಕ್ಷವನ್ನು ಅಣಿಗೊಳಿಸುತ್ತಿದ್ದೇನೆ. ಕನಕಪುರ ಸೇರಿದಂತೆ ಗ್ರಾಮಾಂತರ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಬೆಸೆಯಲು ಜಂಟಿ ಸಭೆಗಳನ್ನು ಶೀಘ್ರ ಮಾಡುತ್ತೇವೆ. ಒಟ್ಟಿನಲ್ಲಿ ಈ ಸಲ ಗ್ರಾಮಾಂತರದಲ್ಲಿ ಮೈತ್ರಿಕೂಟದ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡರಾದ ರಾಜಶೇಖರ್, ಎಚ್.ಸಿ. ರಾಜಣ್ಣ, ಉಮೇಶ್, ನರಸಿಂಹಮೂರ್ತಿ ಹಾಗೂ ಇತರರು ಇದ್ದರು.

‘ಶಾಸಕರಿಗೆ ಮಾತೇ ಮುಳುವಾಗಲಿದೆ’
‘ಕುಮಾರಸ್ವಾಮಿ ಅವರ ಕುರಿತು ರಾಮನಗರ ಮತ್ತು ಮಾಗಡಿ ಶಾಸಕರ ಉದ್ಧಟತನದ ಮಾತುಗಳು ಮುಂದೆ ಅವರಿಗೇ ಮುಳುವಾಗಲಿವೆ. ಭವಿಷ್ಯದ ಸೋಲಿನ ಹತಾಶೆಯಿಂದಾಗಿ ಅವರ ಬಾಯಲ್ಲಿ ಇಂತಹ ಮಾತುಗಳು ಬರುತ್ತಿವೆ. ಕ್ಷೇತ್ರದ ಮತದಾರರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ, ಶಾಸಕರಿಗೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಶಾಸಕರಾದ ಎಚ್‌.ಎ. ಇಕ್ಬಾಲ್ ಹುಸೇನ್ ಮತ್ತು ಎಚ್‌.ಸಿ. ಬಾಲಕೃಷ್ಣ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
‘ಮಂಡ್ಯ ಅಭ್ಯರ್ಥಿ: ಶೀಘ್ರ ಬಹಿರಂಗ’
‘ಮಂಡ್ಯದಲ್ಲಿ ನನಗೆ ಮತ್ತು ಕುಮಾರಸ್ವಾಮಿ ಅವರಿಗೆ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಕಳೆದ ಸಲ ನಾನು ಅಲ್ಲಿ ಸೋತಿರುವ ನೋವು ಕಾರ್ಯಕರ್ತರಲ್ಲಿ ಇನ್ನೂ ಇದೆ. ಹಾಗಾಗಿ, ಈ ಸಲ ಮತ್ತೆ ಸ್ಪರ್ಧಿಸಿದರೆ ಗೆಲ್ಲಿಸುವುದಾಗಿ ಕಾರ್ಯಕರ್ತರು ನನ್ನ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ. ಅವರ ಅಭಿಪ್ರಾಯವನ್ನು ಸಹ ಗೌರವಿಸಬೇಕಿದೆ. ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಶೀಘ್ರ ಬಹಿರಂಗವಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT