ಬುಧವಾರ, ಸೆಪ್ಟೆಂಬರ್ 22, 2021
23 °C

ಮಾಗಡಿ: ದಾಸಯ್ಯನಕಟ್ಟೆ ಒತ್ತುವರಿ: ಸರ್ವೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ತಾಲ್ಲೂಕಿನ ಸೂರಪ್ಪನಹಳ್ಳಿ ಬಳಿ ಅಕ್ರಮ ಒತ್ತುವರಿಯಾಗಿದೆ ಎನ್ನಲಾದ ದಾಸಯ್ಯನಕಟ್ಟೆಯನ್ನು ಭೂಮಾಪನಾ ಇಲಾಖೆಯಿಂದ ಸರ್ವೆ ಮಾಡಿಸಲಾಗುವುದು ಎಂದು ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಪ್ರಸಾದ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೂಮಾಪನಾ ಇಲಾಖೆ ಅಧಿಕಾರಿಗಳಿಗೆ ದಾಸಯ್ಯನಕಟ್ಟೆ ಸರ್ವೆ ಮಾಡಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು. ದಾಸಯ್ಯನಕಟ್ಟೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುವುದು’ ಎಂದರು.

ಸೋಮೇಶ್ವರ ಸ್ವಾಮಿ ದೇವಾಲಯದ ನೈಋತ್ಯ ದಿಕ್ಕಿನಲ್ಲಿ ಶಿಥಿಲವಾಗಿರುವ ಕೆಂಪೇಗೌಡರ ಗೋಪುರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಗೋಪುರ ದುರಸ್ತಿಗೆ ಸಮಾಜ ಸೇವಕ ಕೆ. ಬಾಗೇಗೌಡ ಮುಂದೆ ಬಂದಿದ್ದಾರೆ. ಗೋಪುರಕ್ಕೆ ಹೋಗಲು ರಸ್ತೆ ಬಿಡಿಸಿಕೊಡುತ್ತೇನೆ. ಸರ್ಕಾರಿ ಭೂಮಿಯಲ್ಲಿ ಇರುವ ಗೋಪುರ ವೀಕ್ಷಣೆಗೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಲು ಹೊಸದಾಗಿ ರಸ್ತೆ ಮಾಡಿಸುತ್ತೇವೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಇರುವ ಮುಜರಾಯಿ ದೇವಾಲಯಗಳ ಭೂಮಿ, ಸ್ಥಿರ ಮತ್ತು ಚರ ಆಸ್ತಿಗಳ ದಾಖಲೆ ಸಂಗ್ರಹಿಸಲಾಗುತ್ತಿದೆ. ಪ್ರತಿಯೊಂದು ಮುಜರಾಯಿ ದೇವಾಲಯದಲ್ಲೂ ಕಡ್ಡಾಯವಾಗಿ ಸ್ಟಾಕ್‌ಬುಕ್‌ ತೆರೆದು ದಾಖಲೆ ನಮೂದಿಸಲಾಗುತ್ತಿದೆ. ತಿರುಮಲೆ ರಂಗನಾಥ ಸ್ವಾಮಿ ದೇವಾಲಯದ ಭೂಮಿ ಮತ್ತು ಆಭರಣಗಳ ದಾಖಲೆ ಖಚಿತಪಡಿಸಿಕೊಳ್ಳುವುದು ಮುಜರಾಯಿ ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.

ತಿರುಮಲೆ ನರಸಿಂಹದೇವರ ಬೆಟ್ಟ, ಮಾಂಡವ್ಯ ಗುಹೆ ಮತ್ತು ಸೋಮೇಶ್ವರ ಸ್ವಾಮಿ, ಗವಿಗಂಗಾಧರೇಶ್ವರ ಸ್ವಾಮಿ ಸೇರಿದಂತೆ ಇತರೆ ಮುಜರಾಯಿ ದೇವಾಲಯಗಳ ಆಸ್ತಿ ರಕ್ಷಣೆ ಮಾಡುವಂತೆ ಭಕ್ತರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾಖಲೆ ನಮೂದಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಕೆರೆಕಟ್ಟೆ, ಕಲ್ಯಾಣಿ, ರಾಜಕಾಲುವೆ ಒತ್ತುವರಿ ತೆರವಿಗೆ ಸುಪ್ರಿಂ ಕೋರ್ಟ್‌ ಆದೇಶ ನೀಡಿದ್ದು, ಸರ್ವೆ ಕಾರ್ಯ ನಡೆದಿದೆ. ರಂಗನಾಥಸ್ವಾಮಿ ದೇವಾಲಯದ ಅರವಟಿಕೆಗಳ ಮೂಲ ದಾಖಲೆಗಳಲ್ಲಿ ರಂಗನಾಥ ಸ್ವಾಮಿ ಅರವಟಿಕೆ ಎಂದೇ ನಮೂದಾಗಿದೆ. ಅರವಟಿಕೆಗಳ ದಾಖಲೆ ತಿದ್ದಿ ಖಾಸಗಿಯವರಿಗೆ ಖಾತೆ ಮಾಡಿರುವುದು ಕಂಡುಬಂದರೆ ಅರವಟಿಕೆಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು. ಅರವಟಿಕೆಗಳ ಮೂಲ ಖಾತೆದಾರ ರಂಗನಾಥ ಸ್ವಾಮಿ ಎಂದೇ ಇರಬೇಕು. ಸರ್ಕಾರಿ ಭೂಮಿ ಉಳಿಸಲು ಕಂದಾಯ, ಭೂಮಾಪನಾ, ಇತರೇ ಇಲಾಖೆಗಳು ಮುಂದಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.