ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಶಿವರಾಂ ಹೆಸರಲ್ಲಿ ಸ್ಪರ್ಧಾತ್ಮಕ ಕೇಂದ್ರಕ್ಕೆ ಒತ್ತಾಯ

Published 8 ಮಾರ್ಚ್ 2024, 15:16 IST
Last Updated 8 ಮಾರ್ಚ್ 2024, 15:16 IST
ಅಕ್ಷರ ಗಾತ್ರ

ರಾಮನಗರ: ‘ಇತ್ತೀಚೆಗೆ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ, ಸಿನಿಮಾ ನಟ ಹಾಗೂ ರಾಜಕಾರಣಿ ಜಿಲ್ಲೆಯ ಕೆ. ಶಿವರಾಂ ಅವರ ಹೆಸರಿನಲ್ಲಿ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಬೇಕು’ ಎಂದು ದಲಿತ ಮುಖಂಡ ಜಯಕಾಂತ್ ಚಾಲುಕ್ಯ ಒತ್ತಾಯಿಸಿದರು.

ಶಿವರಾಂ ಅವರಿಗೆ ನುಡಿನಮನ ಸಮಾರಂಭ ಹಮ್ಮಿಕೊಳ್ಳುವ ಸಲುವಾಗಿ, ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದಲಿತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಪಾಸಾದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಶಿವರಾಂ ಅವರದ್ದು. ಅವರ ಸಾಧನೆ ಯುವಜನರಿಗೆ ಸದಾ ಸ್ಫೂರ್ತಿಯಾಗಿದೆ. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ತೆರೆದು ಅಲ್ಲಿ ಎಲ್ಲಾ ಪರೀಕ್ಷೆಗಳಿಗೂ ತರಬೇತಿ ನೀಡಬೇಕು. ಜೊತೆಗೆ, ಶಿವರಾಂ ಅವರ ಪುತ್ಥಳಿ ನಿರ್ಮಿಸಬೇಕು’ ಎಂದರು.

‘ಅಧಿಕಾರಿಯಾಗಿ ಶಿವರಾಂ ಅವರು ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸಾವಿರಾರು ಮಂದಿಗೆ ಸಹಾಯ ಮಾಡಿದ್ದಾರೆ. ಅವರ ಆಡಳಿತ ವೈಖರಿ ಅಧಿಕಾರಿಗಳಿಗೆ ಮಾದರಿಯಾದುದು. ಸಿನಿಮಾ ನಟರೂ ಆಗಿದ್ದ ಅವರು, ಸದಭಿರುಚಿಯ ಚಿತ್ರಗಳನ್ನು ಮಾಡಿ ಜನಮಾನಸದಲ್ಲಿ ನೆಲೆಸಿದ್ದಾರೆ. ದಲಿತ ಮಹಾಸಭಾ, ಛಲವಾದಿ ಮಹಾಸಭಾ ಸ್ಥಾಪಿಸಿದ ಅವರು ತಳ ಸಮುದಾಯದವರ ಸಂಘಟನೆಗೂ ಕೊಡುಗೆ ನೀಡಿದ್ದಾರೆ’ ಎಂದು ಬಣ್ಣಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ದಲಿತ ಸಂಘಟನೆಗಳ ಮುಖಂಡರು, ನುಡಿ ನಮನ ಸಮಾರಂಭದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಜಿಲ್ಲಾ ಮಟ್ಟದಲ್ಲೇ ದೊಡ್ಡದಾಗಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ಒತ್ತಾಯ ಕೇಳಿಬಂತು. ಸದ್ಯ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ, ಅಧಿಸೂಚನೆ ಪ್ರಕಟವಾದ ಬಳಿಕ ಚರ್ಚಿಸಿ ಕಾರ್ಯಕ್ರಮದ ದಿನಾಂಕ ನಿಗದಿಪಡಿಸುವ ಕುರಿತು ಮುಖಂಡರು ತೀರ್ಮಾನಕ್ಕೆ ಬಂದರು.

ಮುಖಂಡರಾದ ಕೆ. ಶಿವಣ್ಣ, ಚಕ್ಕಲೂರು ಚೌಡಯ್ಯ, ಜಯಚಂದ್ರ, ಶಿವಶಂಕರ್, ಚಲುವರಾಜು, ಶೇಖರ್, ಬಾನಂದೂರು ಶಿವಕುಮಾರ್, ಶಿವಪ್ರಕಾಶ್, ಕುಮಾರ್, ನಿಖಿಲ್ ಸಜ್ಜೆನಿಂಗಯ್ಯ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT