ಯುಗಾದಿ ಹಬ್ಬದ ಖರೀದಿ ಸಂಭ್ರಮ

ಮಂಗಳವಾರ, ಏಪ್ರಿಲ್ 23, 2019
33 °C

ಯುಗಾದಿ ಹಬ್ಬದ ಖರೀದಿ ಸಂಭ್ರಮ

Published:
Updated:
Prajavani

ರಾಮನಗರ: ಲೋಕಸಭೆ ಚುನಾವಣೆ ಕಾವು ಹಾಗೂ ಬಿಸಿಲಿನ ಝಳದೊಂದಿಗೆ ಯುಗಾದಿ ಹಬ್ಬವನ್ನು ಆಚರಿಸಲು ಜನರು ಸಿದ್ಧತೆ ನಡೆಸಿದ್ದಾರೆ.

ಸತತ ಬರಗಾಲದಿಂದ ಕಂಗೆಟ್ಟುಹೋಗಿದ್ದ ಜನರು ಈ ವರ್ಷ ವಸಂತಾಗಮನವನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಬರಗಾಲದಿಂದ ಬೆಳೆಯನ್ನೇ ಕಾಣದಾಗಿದ್ದ ರೈತರು ಈ ವರ್ಷ ತಡವಾಗಿಯಾದರೂ ಬಿದ್ದ ಮಳೆಯಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ರಾಗಿ ಬೆಳೆ ಅಷ್ಟಕ್ಕಷ್ಟೇ ಎಂಬಂತೆ ಕೈಸೇರಿತು. ಇದೀಗ ಯುಗಾದಿ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.

ಯುಗಾದಿ ಮುನ್ನಾ ದಿನವಾದ ಶುಕ್ರವಾರ ಇಲ್ಲಿನ ಎಂ.ಜಿ.ರಸ್ತೆ, ಹಳೆ ಬಸ್ ನಿಲ್ದಾಣ ಜನಜಂಗುಳಿಯಿಂದ ತುಂಬಿ ಹೋಗಿತ್ತು. ವ್ಯಾಪಾರಸ್ಥರು ಹಣ್ಣು, ಹೂವು, ತರಕಾರಿಗಳೊಂದಿಗೆ ಮಾರಾಟದ ಉತ್ಸಾಹದಲ್ಲಿದ್ದರು. ಗ್ರಾಮೀಣ ಭಾಗದ ಜನರು ಹಬ್ಬದ ಪದಾರ್ಥಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಾರುಕಟ್ಟೆ ರಸ್ತೆಯಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಜನಸಂದಣಿ ಇತ್ತು.

ಬಟ್ಟೆ ಅಂಗಡಿಗಳಲ್ಲಿ ಜನರ ದಂಡೇ ತುಂಬಿತ್ತು. ಎಲ್ಲರೂ ಕುಟುಂಬ ಸದಸ್ಯರಿಗೆ ಹೊಸ ಬಟ್ಟೆ ಖರೀದಿಸಲು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಮಹಿಳೆಯರು, ಮಕ್ಕಳು, ಯುವಕ–-ಯುವತಿಯರು ಇಷ್ಟದ ಬಟ್ಟೆ ಖರೀದಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುತ್ತಿತ್ತು. ಇಲ್ಲಿನ ರೈಲ್ವೆ ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೂವು, ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ವಿವಿಧ ಹಣ್ಣಿನ ಬೆಲೆ ಗಗನಮುಖಿಯಾಗಿತ್ತು. ಪ್ರತಿ ಕೆಜಿ ಸೇಬು -ಕನಿಷ್ಠ ₹ 150–180. ದ್ರಾಕ್ಷಿ- ₹ 60–80, ಮೂಸಂಬಿ- ₹ 60, ದಾಳಿಂಬೆ -₹ 120, ಬಾಳೆಹಣ್ಣು- ₹ 60–70, ಪಚ್ಚ ಬಾಳೆಹಣ್ಣು-40, ಖರ್ಬೂಜ ₹ 25ಕ್ಕೆ ಮಾರಾಟವಾಗುತ್ತಿತ್ತು.

ಸೇವಂತಿಗೆ ಹೂವು ಪ್ರತಿ ಮಾರಿಗೆ ₹ 100, ಮಲ್ಲಿಗೆ ₹ 80, ಕನಕಾಂಬರ- ₹ 100 ಇತ್ತು. ಪ್ರತಿ ಹಾರದ ಬೆಲೆ ಕನಿಷ್ಠ ₹ 100– 200. ಮಾವಿನ ಸೊಪ್ಪು ಪ್ರತಿ ಕಟ್ಟಿಗೆ ₹ 10ಕ್ಕೆ ಮಾರಾಟವಾಯಿತು.

ತರಕಾರಿ ಬೆಲೆ ಸಾಮಾನ್ಯವಾಗಿತ್ತು. ಕ್ಯಾರೆಟ್, ಬೀಟ್‌ರೂಟ್, ಗೆಡ್ಡೆಕೋಸು ಪ್ರತಿ ಕೆಜಿಗೆ ₹ 30–40ಕ್ಕೆ ಮಾರಾಟವಾಗುತ್ತಿತ್ತು. ವ್ಯಾಪಾರಸ್ಥರು ಹೂವು-ಹಣ್ಣಿನ ಬೆಲೆಗಳನ್ನು ಜೋರಾಗಿ ಕೂಗಿ ಹೇಳುತ್ತಾ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ಹಬ್ಬದ ಪದಾರ್ಥಗಳ ಖರೀದಿಸಲು ಮುಂದಾಗಿದ್ದ ಜನರು ಬೆಲೆಯಲ್ಲಿ ಚೌಕಾಸಿ ಮಾಡಲು ಮುಂದಾಗಿದ್ದರು. ಹಬ್ಬದ ಕಾರಣದಿಂದಾಗಿ ವ್ಯಾಪಾರಸ್ಥರು ನಿರ್ದಿಷ್ಟ ಬೆಲೆಯನ್ನು ಕಡಿಮೆ ಮಾಡಲು ಒಪ್ಪುತ್ತಿರಲಿಲ್ಲ. ಕೊನೆಗೆ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣು-ಹೂವು ಖರೀದಿಸದೇ ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸಿ ಮುನ್ನಡೆಯುತ್ತಿರುವುದು ಕಂಡುಬಂದಿತು.

ಸಿಹಿ ತಿನಿಸು ತಯಾರಿ

ಯುಗಾದಿ ಹಬ್ಬ ಎಂದರೆ ನೆನಪಿಗೆ ಬರುವುದೇ ಹೋಳಿಗೆ. ಹೀಗಾಗಿ ತೊಗರಿಬೇಳೆ, ಬೆಲ್ಲ, ಮೈದಾ, ಚಿರೋಟಿ ರವೆ ಇತ್ಯಾದಿಗಳ ಖರೀದಿದಾರರು ಹೆಚ್ಚಾಗಿದ್ದರು. ಮನೆಗಳಲ್ಲಿ ಮಹಿಳೆಯರು ಹಬ್ಬದ ಸವಿರುಚಿಗಳನ್ನು ತಯಾರಿಸುವ ಸಡಗರದಲ್ಲಿದ್ದರು. ಕಾಯಿ ಒಬ್ಬಟ್ಟು, ಬೇಳೆ ಹೋಳಿಗೆ ತಯಾರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !