ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಳ...

2023ರಲ್ಲಿ ಶತಕ ದಾಟಿದ ಪೋಕ್ಸೊ ಪ್ರಕರಣ; ಕಳೆದ ಆರು ವರ್ಷದಲ್ಲಿ 464 ಪ್ರಕರಣ ದಾಖಲು
Published 11 ಜನವರಿ 2024, 5:45 IST
Last Updated 11 ಜನವರಿ 2024, 5:45 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲಿ ಮಕ್ಕಳ ಮೇಲೆ ನಡೆಯುವ ಇಂತಹ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲಾಗುತ್ತಿರುವ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಲೈಂಗಿಕತೆ ಮತ್ತು ಭವಿಷ್ಯದ ಬಗ್ಗೆ ಕಲ್ಪನೆಯೇ ಇಲ್ಲದ ಹದಿಹರೆಯದವರು ದೌರ್ಜನ್ಯದ ಉರುಳಿಸಿಗೆ ಸಿಲುಕಿ ಗರ್ಭಿಣಿಯರೂ ಆಗುತ್ತಿದ್ದಾರೆ.

ಇನ್ನೂ ಆಟವಾಡುವ ವಯಸ್ಸಿನ ಹಾಗೂ ಅಕ್ಷರ ಲೋಕಕ್ಕೆ ಆಗಷ್ಟೇ ತೆರೆದುಕೊಂಡು ಶಿಕ್ಷಣದ ಮೆಟ್ಟಿಲುಗಳನ್ನು ಏರುತ್ತಿರುವವರ ಮೇಲೆ ತಂದೆ, ಮಲ ತಂದೆ, ಸಹೋದರ, ಅಕ್ಕಪಕ್ಕದವರು ವೃದ್ಧ, ಚಿಕ್ಕಪ್ಪ ಸೇರಿದಂತೆ ಮಕ್ಕಳ ಆಪ್ತ ವಲಯದವರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಬಾಲಕಿಯರಷ್ಟೇ ಅಲ್ಲದೆ, ಬಾಲಕರ ಮೇಲೂ ಲೈಂಗಿಕ ದೌರ್ಜನ್ಯದಂತಹ ಹೀನ ಕೃತ್ಯಗಳು ವರದಿಯಾಗುತ್ತಿವೆ. 

ವರ್ಷದಲ್ಲಿ 118 ಪ್ರಕರಣ:

‘ಜಿಲ್ಲೆಯಲ್ಲಿ 2023ನೇ ವರ್ಷದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 118 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ದಾಖಲಾಗಿದ್ದ 91 ಪ್ರಕರಣಗಳಿಗೆ ಹೋಲಿಸಿದರೆ, ಈ ಸಂಖ್ಯೆ 2023ರಲ್ಲಿ 27ರಷ್ಟು ಜಾಸ್ತಿಯಾಗಿದೆ. ಐದು ವರ್ಷದೊಳಗಿನ ಕೂಸುಗಳಿಂಡಿದು 18 ವರ್ಷದೊಳಗಿನವರೆಗಿನ ಬಾಲಕಿಯರು ಲೈಂಗಿಕ ಕ್ರೌರ್ಯಕ್ಕೆ ತುತ್ತಾಗುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘18 ವರ್ಷದೊಳಗಿನವರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮಕ್ಕಾಗಿ 2012ರಲ್ಲಿ ಪೋಕ್ಸೊ ಕಾಯ್ದೆಯನ್ನು ಜಾರಿಗೆ ತಂದಿತು. ಅಂದಿನಿಂದ ಇಂತಹ ದೌರ್ಜನ್ಯಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಹಲವು ಪ್ರಕರಣಗಳಲ್ಲಿ ಶಿಕ್ಷೆಯೂ ಆಗುತ್ತಿದೆ. ಆದರೆ, ದೌರ್ಜನ್ಯ ಮಾತ್ರ ಇಳಿಮುಖವಾಗುತ್ತಿಲ್ಲ’ ಎನ್ನುತ್ತಾರೆ ರಾಮನಗರದ ವಕೀಲರೊಬ್ಬರು.

ಎಚ್ಚರಿಕೆ ನೀಡಿದ್ದ ಸದಸ್ಯೆ:

ಜಿಲ್ಲಾ ಕೇಂದ್ರದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಸ್. ಮಂಜು ಅವರು, ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಶಿಕ್ಷಕರು, ಮಕ್ಕಳು ಹಾಗೂ ಪೋಷಕರಿಗೆ ನಿರಂತರವಾಗಿ ಅರಿವು ಮೂಡಿಸಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಎನ್‌ಜಿಒಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಾಲ್ಯವಿವಾಹ ತಡೆಯುವಂತೆ ಸೂಚನೆ ನೀಡಿದ್ದರು.

ಜಾಗೃತಿ ಕಾರ್ಯಕ್ರಮ:

‘ಶಾಲಾ–ಕಾಲೇಜುಗಳ ಮಟ್ಟದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೊ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ವಸತಿಸಹಿತ ಶಾಲಾ–ಕಾಲೇಜುಗಳಲ್ಲಿ ಸಹ ಅರಿವು ಕಾರ್ಯಕ್ರಮ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ, ಆರೋಗ್ಯ ಇಲಾಖೆ ಸಿಬ್ಬಂದಿಗೆ, ಪೊಲೀಸ್ ಸಿಬ್ಬಂದಿಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ನಿರ್ವಹಣೆ ಕುರಿತು ವಿಷಯ ತಜ್ಞರಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗವೇಣಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮನ ಕಲುಕಿದ ಅಮಾನುಷ ಕೃತ್ಯಗಳು

6 ವರ್ಷದ ಮಗು ಮೇಲೆ ದೌರ್ಜನ್ಯ: 

ಕನಕಪುರದಲ್ಲಿ ಕೂಲಿ ಕೆಲಸ ಮಾಡುವ ತಂದೆ–ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ 6 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ, 28 ವರ್ಷದ ವ್ಯಕ್ತಿಯೊಬ್ಬ ಕಳೆದ ಅ. 31ರಂದು ಲೈಂಗಿಕ ದೌರ್ಜನ್ಯ ನಡೆಸಿದ್ದ. 

ಗರ್ಭಕ್ಕೆ ಕಾರಣವಾಗಿದ್ದ ಸಂಗೀತ ಮೇಷ್ಟ್ರು: 

ಸಂಗೀತ ಹೇಳಿಕೊಡುವ ನೆಪದಲ್ಲಿ 15 ವರ್ಷದ ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ಗರ್ಭಿಣಿಯಾಗುವಂತೆ ಮಾಡಿದ ಸಂಗೀತ ಶಿಕ್ಷಕನೊಬ್ಬನನ್ನು ಕಳೆದ ಅ. 7ರಂದು ಕುದೂರು ಠಾಣೆ ಪೊಲೀಸರು ಬಂಧಿಸಿದ್ದರು. ಶಾಲೆಗೆ ಹೋಗಿದ್ದ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ ವಿಷಯ ಗೊತ್ತಾಗಿತ್ತು.

ವಿದ್ಯಾರ್ಥಿನಿಯ ಶಿಕ್ಷಕ ಬ್ಲ್ಯಾಕ್‌ಮೇಲ್: 

ವಿದ್ಯಾರ್ಥಿನಿಯನ್ನು ಬೆದರಿಸಿ ನಗ್ನ ವಿಡಿಯೊ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣದಲ್ಲಿ ಕನಕಪುರ ತಾಲ್ಲೂಕಿನ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಇದಕ್ಕೆ ಸಹಕಾರ ನೀಡಿದ ವ್ಯಕ್ತಿಯೊಬ್ಬನನ್ನು ಕಳೆದ ಸೆ. 30ರಂದು ಪೊಲೀಸರು ಬಂಧಿಸಿದ್ದರು.

ಮಲತಂದೆಯಿಂದಲೇ ಕೃತ್ಯ:

 ರಾಮನಗರ ತಾಲ್ಲೂಕಿನ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಮೇಲೆ, ಆಕೆಯ ಮಲತಂದೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇದರಿಂದ ಬೇಸತ್ತ ಬಾಲಕಿ ಮನೆ ಬಿಟ್ಟು ಹೋಗಿದ್ದಳು. ಸತತ ಎರಡು ದಿನದ ಹುಡುಕಾಟದ ಬಳಿಕ, ಆಕೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಳು. ತನ್ನ ಹಳೆ ಶಾಲೆಯ ಶಿಕ್ಷಕರನ್ನು ಭೇಟಿ ಮಾಡಿ, ತನ್ನ ಮೇಲಿನ ದೌರ್ಜನ್ಯವನ್ನು ವಿವರಿಸಿದ್ದಳು. ಘಟನೆ ಬೆಳಕಿಗೆ ಬರುತ್ತಿದಂತೆ ಪೊಲೀಸರು ತಂದೆಯನ್ನು ಬಂಧಿಸಿದ್ದರು.

ಆಟೊ ಚಾಲಕನಿಂದ ದೌರ್ಜನ್ಯ: 

ರಾಮನಗರದ ಶಾಲೆಯೊಂದರ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಟೊ ಚಾಲಕನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದರು. ವಿದ್ಯಾರ್ಥಿನಿಯನ್ನು ಆಟೊದಲ್ಲಿ ನಿತ್ಯ ಶಾಲೆಗೆ ಕರೆದುಕೊಂಡು ಹೋಗಿ, ವಾಪಸ್‌ ಕರೆ ತರುತ್ತಿದ್ದ ಸಂದರ್ಭದಲ್ಲಿ ಆತ ದೌರ್ಜನ್ಯ ಎಸಗಿದ್ದ. ಘಟನೆಯಿಂದ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಕಳೆದ ಮಾರ್ಚ್ 17ರಂದು ಘಟನೆ ಬೆಳಕಿಗೆ ಬಂದಿತ್ತು.

ಪ್ರೀತಿ ನಿರಾಕರಿಸಿದ್ದಕ್ಕೆ ಆ್ಯಸಿಡ್ ಎರಚಿದ್ದ:

 ತನ್ನನ್ನು ಪ್ರೀತಿಸಲು ನಿರಾಕರಿಸಿದ್ದ 17 ವರ್ಷದ ಬಾಲಕಿ ಮೇಲೆ ಕನಕಪುರದಲ್ಲಿ 22 ವರ್ಷದ ಯುವಕನೊಬ್ಬ ಆ್ಯಸಿಡ್ ಎರಚಿ ಕ್ರೌರ್ಯ ಮೆರೆದಿದ್ದ.  ಪೊಲೀಸರು ಆತನನ್ನು ಕಳೆದ ಫೆ. 18ರಂದು ಬಂಧಿಸಿದ್ದರು.

2 ವರ್ಷದ ಮಗು ಮೇಲೆ ದೊಡ್ಡಪ್ಪ ಅತ್ಯಾಚಾರ: 

ಎರಡು ವರ್ಷದ ಬಾಲಕಿ ಮೇಲೆ ಸ್ವಂತ ದೊಡ್ಡಪ್ಪನೇ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ಚನ್ನಪಟ್ಟಣದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದಿತ್ತು. ಬೀಡಿ ಕಾರ್ಮಿಕನಾದ ಆರೋಪಿ ತನ್ನ ಸಹೋದರನ ಮಗಳನ್ನು ಚಾಕೊಲೇಟ್‌ ಕೊಡಿಸುವುದಾಗಿ ಮನೆಯಿಂದ ಕರೆದೊಯ್ದಿದ್ದ.

ಬಾಲಕನ ಮೇಲೂ ದೌರ್ಜನ್ಯ: 

ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಚನ್ನಪಟ್ಟಣ ತಾಲ್ಲೂಕಿನ ವ್ಯಕ್ತಿಯೊಬ್ಬರನ್ನು ಗ್ರಾಮಾಂತರ ಪೊಲೀಸರು 2022ರ ಜ. 9ರಂದು ಪೊಲೀಸರು ಬಂಧಿಸಿದ್ದರು. ಎದುರು ಮನೆಯ ಬಾಲಕನನ್ನು ಆರೋಪಿ ಕೆಲ ದಿನಗಳಿಂದ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಬಾಲಕನ ವರ್ತನೆಯಲ್ಲಾದ ಬದಲಾವಣೆ ಗಮನಿಸಿ ಅನುಮಾನಗೊಂಡ ಪೋಷಕರು ಬಾಲಕನನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT