‘ಪೊಲೀಸರ ಸೇವೆ ಶ್ಲಾಘನಾರ್ಹ’

ಶುಕ್ರವಾರ, ಏಪ್ರಿಲ್ 19, 2019
31 °C
ಪೊಲೀಸ್ ಧ್ವಜ ದಿನಾಚರಣೆ: ನಿವೃತ್ತ ಸಿಬ್ಬಂದಿಗೆ ಸನ್ಮಾನ

‘ಪೊಲೀಸರ ಸೇವೆ ಶ್ಲಾಘನಾರ್ಹ’

Published:
Updated:
Prajavani

ಚನ್ನಪಟ್ಟಣ: ‘ದೇಶದಲ್ಲಿ ಶಾಂತಿ ನೆಮ್ಮದಿ ಇದ್ದರೆ ಅದು ಪೊಲೀಸರಿಂದ ಸಾಧ್ಯವಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಂ.ಜಿ. ಉಮಾ ಹೇಳಿದರು.

ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿದರು. ಸೇವೆ, ಶೌರ್ಯ ಹಾಗೂ ಅರ್ಪಣಾ ಮನೋಭಾವದ ಸಂಕೇತವಾಗಿರುವ ಪೊಲೀಸರು ತಮ್ಮ ಕುಟುಂಬವನ್ನು ಮರೆತು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಮಾಜದ ರಕ್ಷಣೆ ಮಾಡುತ್ತಿದ್ದಾರೆ. ಇಂತಹವರಿಗೆ ಗೌರವ ನೀಡಿದಾಗ ಮಾತ್ರ ಸಮಾಜ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದಂತೆ ಎಂದರು.

ಎಲ್ಲೋ ಒಬ್ಬ ಅಧಿಕಾರಿಗೆ ಸಾರ್ವಜನಿಕರೊರ್ವ ಕಪಾಳ ಮೋಕ್ಷ ಮಾಡಿದನೆಂದರೆ ಅದನ್ನು ವೈಭವೀಕರಿಸುವುದು ತಪ್ಪು. ಯಾರೇ ಆಗಲಿ ಕಾನೂನನ್ನು ಕೈಗೆ ತಗೆದು ಕೊಳ್ಳಬಾರದು. ಅಧಿಕಾರಿ ತಪ್ಪೆಸೆಗಿದರೆ ಆತನನ್ನು ಶಿಕ್ಷಿಸಲು ಹಲವು ಮಾರ್ಗಗಳಿವೆ. ಸಾರ್ವಜನಿಕರು ದುಡುಕು ನಿರ್ಧಾರಗಳಿಗೆ ತಮ್ಮ ಬುದ್ದಿಯನ್ನು ಕೊಡಬಾರದು ಎಂದರು.

ಸಮಾಜ ಸೇವೆಯ ಒಂದು ಭಾಗವಾಗಿರುವ ಪೊಲೀಸ್ ಸೇವೆಯನ್ನು ನಿರ್ವಹಿಸಿ ನಿವೃತ್ತಿಯಾಗಿ ಪುರಸ್ಕಾರ ಪಡೆಯುತ್ತಿರುವ ಅಧಿಕಾರಿಗಳು ಮುಂದೆಯೂ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಾನತ್ ಮಾತನಾಡಿ ಸಮಾಜದಲ್ಲಿ ಪೊಲೀಸ್ ವ್ಯವಸ್ಥೆ ಇಲ್ಲದಿದ್ದರೆ ಎದುರಾಗುವ ಅವ್ಯವಸ್ಥೆ ಕಲ್ಪನೆಗೂ ಸಿಲುಕದಾಗಿದೆ. ಪೊಲೀಸರೆಂದರೆ ಸಮಾಜ ಸೇವಕರು ಎಂದರ್ಥವಾಗಿದೆ. ದಿನದ 24 ತಾಸುಗಳು ಕಾಲ ತನ್ನವರನ್ನು ಮರೆತು ಸಾರ್ವಜನಿಕ ಸೇವೆಯನ್ನು ಮಾಡುವ ಇವರಿಗೆ ಸಮಾಜ ಯಾವುದೇ ಕೊಡುಗೆ ನೀಡಿದರೂ ಸಾಲದು ಎಂದು ಬಣ್ಣಿಸಿದರು.

ಪೊಲೀಸ್ ಧ್ವಜ ವಿತರಣೆಯಿಂದ ಬರುವ ಹಣವನ್ನು ನಿವೃತ್ತ ಪೊಲೀಸರು, ಸೇವಾನಿರತ ಪೋಲಿಸರ ಕಲ್ಯಾಣ ನಿಧಿ ಹಾಗೂ ಕೇಂದ್ರ ಪೊಲೀಸರ ಕಲ್ಯಾಣ ನಿಧಿಗೆ ನೀಡಲಾಗುವುದು ಎಂದು ತಿಳಿಸಿದರು.

ನಿವೃತ್ತ ಎ.ಎಸ್.ಐ. ಚನ್ನಪ್ಪ ಪೊಲೀಸ್‍ ಧ್ವಜ ವಂದನೆಯನ್ನು ಸ್ವೀಕರಿಸಿದರು. ಇದೇ ಸಂದರ್ಭ ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಚನ್ನಪಟ್ಟಣ ಡಿವೈಎಸ್ಪಿ ಟಿ.ಮಲ್ಲೇಶ್, ರಾಮನಗರ ಡಿವೈಎಸ್ಪಿ ಪುರುಷೋತ್ತಮ್ ಹಾಗೂ ಮಾಗಡಿ ಡಿವೈಎಸ್ಪಿ ವೇಣುಗೋಪಾಲ್ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !