ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ದಾರಿ ತಪ್ಪಿದ್ದ ಯುವತಿಯರ ರಕ್ಷಣೆ

ಹಂದಿಗುಂದ ಬೆಟ್ಟದಲ್ಲಿ ಚಾರಣ ಕೈಗೊಂಡಿದ್ದ ಯುವತಿಯವರು
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಹಂದಿಗುಂದಿ ಬೆಟ್ಟಕ್ಕೆ ಚಾರಣ ಕೈಗೊಂಡು ದಾರಿತಪ್ಪಿ ರಾತ್ರಿಯವರೆಗೆ ಬೆಟ್ಟದಲ್ಲೇ ಸಿಲುಕಿದ್ದ ಯುವತಿಯರ ಗುಂಪನ್ನು ಪೊಲೀಸರು ರಕ್ಷಿಸಿದ್ದಾರೆ. ಬೆಂಗಳೂರು ಮೂಲದ ಆರು ಯುವತಿಯರು ಡಿ. 16ರಂದು ಬೆಳಿಗ್ಗೆ ಬೆಟ್ಟಕ್ಕೆ ಚಾರಣ ಹೋಗಿದ್ದರು. ಸಂಜೆವರೆಗೆ ಬೆಟ್ಟದಲ್ಲೇ ಸುತ್ತಾಡಿದ್ದ ಯುವತಿಯರು, ಕೆಳಕ್ಕೆ ಇಳಿಯುವಾಗ ದಾರಿ ತಪ್ಪಿದ್ದರು.

ಯುವತಿಯರು ಸರಿಯಾದ ದಾರಿ ಹುಡುಕಾಡುವ ಹೊತ್ತಿಗೆ ಕತ್ತಲಾಗಿತ್ತು. ಮೊಬೈಲ್‌ ಫೋನ್‌ನಲ್ಲಿ ನೆಟ್‌ವರ್ಕ್ ಸಮಸ್ಯೆ ಜೊತೆಗೆ, ಕುರುಚಲು ಕಾಡಿನ ಬೆಟ್ಟದಲ್ಲಿ ಕಾಡುಪ್ರಾಣಿಗಳ ಭಯವೂ ಶುರುವಾಗಿದೆ. ಮೊಬೈಲ್‌ ಟಾರ್ಚ್ ಬೆಳಕಲ್ಲೇ ನೆಟ್‌ವರ್ಕ್ ಸಿಗುವ ಜಾಗಕ್ಕೆ ಬಂದಿದ್ದ ಯುವತಿಯರು, ಕೂಡಲೇ 112ಗೆ ಕರೆ ಮಾಡಿ ಬೆಟ್ಟದಲ್ಲಿ ಸಿಲುಕಿಕೊಂಡಿರುವ ಕುರಿತು ಮಾಹಿತಿ ನೀಡಿದರು ಎಂದು ಪೊಲೀಸರು ಹೇಳಿದರು.

ಕರ್ತವ್ಯನಿರತ ಪೊಲೀಸರಾದ ರಾಜೇಶ್ ಮತ್ತು ರಮೇಶ್ ಅವರು, ರಕ್ಷಣೆಗಾಗಿ ತಪ್ಪಲಿನವರೆಗೆ ವಾಹನದಲ್ಲಿ ಬಂದರು. ಬೆಟ್ಟಕ್ಕೆ ವಾಹನ ಹೋಗಲು ಸಾಧ್ಯವಾಗದಿದ್ದರಿಂದ ಸ್ಥಳೀಯರ ನೆರವಿನೊಂದಿಗೆ ಕಾಲ್ನಡಿಗೆಯಲ್ಲೇ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಬೆಟ್ಟಕ್ಕೆ ಸುಮಾರು 10 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ತೆರಳಿದರು ಎಂದು ತಿಳಿಸಿದರು.

ಯುವತಿಯರ ಮೊಬೈಲ್ ನೆಟ್‌ವರ್ಕ್ ಮತ್ತು ಟಾರ್ಚ್ ಬೆಳಕು ಆಧರಿಸಿ ಎರಡು ತಾಸಿನ ಬಳಿಕ ಅವರಿರುವ ಸ್ಥಳವನ್ನು ಪತ್ತೆ ಹಚ್ಚಲಾಯಿತು. ನಂತರ, ಆರು ಮಂದಿಯನ್ನು ಬೆಟ್ಟದಿಂದ ಕೆಳಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬಂದು, ಕಳಿಸಿ ಕೊಡಲಾಯಿತು ಎಂದರು.

ದಾರಿ ಕಾಣದೆ ಬೆಟ್ಟದಲ್ಲಿ ಸಿಲುಕಿದ್ದ ತಮ್ಮನ್ನು ರಕ್ಷಿಸಿದ ಪೊಲೀಸರಿಗೆ ಯುವತಿಯರು ಕೃತಜ್ಞತೆ ಸಲ್ಲಿಸಿದರು. ರಕ್ಷಣಾ ಕಾರ್ಯಾಚರಣೆ ವಿಷಯವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು, ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT