ಭಾನುವಾರ, ಫೆಬ್ರವರಿ 23, 2020
19 °C
ಕನಕಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ

ಪಕ್ಷದ ನಿಷ್ಠಾವಂತರಿಗೆ ಅಧಿಕಾರ: ಎಸ್‌.ಜಗನ್ನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೂ ಅಧಿಕಾರ ಸಿಗಬೇಕೆಂಬುದು ಭಾರತೀಯ ಜನತಾ ಪಕ್ಷದ ಅಜೆಂಡಾ. ಹಲವು ವರ್ಷಗಳಿಂದ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಾ ಬಂದಿದ್ದ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ಕೊಡಲಾಗುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ತಿಳಿಸಿದರು.

ಇಲ್ಲಿನ ಕನಕಪುರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಹೊನ್ನಿಗನಹಳ್ಳಿ ಎಸ್‌.ಜಗನ್ನಾಥ್‌ ಏರ್ಪಡಿಸಿದ್ದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ದುಡಿದು ಆ ಹುದ್ದೆಗೆ ಏರಿದ್ದಾರೆ. ಪಕ್ಷ ತತ್ವ, ಸಿದ್ಧಾಂತಗಳೊಂದಿಗೆ ಕೆಲಸ ಮಾಡುತ್ತಿದೆ. ಕಾರ್ಯಕರ್ತರು ಯಾವುದೇ ಅಧಿಕಾರವಿಲ್ಲದಿದ್ದರೂ ಪಕ್ಷಕ್ಕಾಗಿ ಪ್ರಮಾಣಿಕವಾಗಿ ದುಡಿಯುತ್ತಿದ್ದಾರೆ’ ಎಂದರು.

‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಅಧಿಕಾರ ಹಂಚಿಕೆ ಮಾಡುತ್ತಿದ್ದೇವೆ. ರಾಮನಗರಕ್ಕೆ ಹಾರೋಹಳ್ಳಿ ಮುರಳೀಧರ್‌, ಗ್ರೇಟರ್‌ ಬಿಡದಿ ಪ್ರಾಧಿಕಾರಕ್ಕೆ ವರದೇಗೌಡ, ಕನಕಪುರಕ್ಕೆ ಜಗನ್ನಾಥ್‌, ಆನೇಕಲ್‌ಗೆ ಜಯಣ್ಣ ಅವರುಗಳನ್ನು ನೇಮಕ ಮಾಡಿದ್ದೇವೆ. ಇತರ ಕಾರ್ಯಕರ್ತರನ್ನು ಗುರುತಿಸಿ ಬೇರೆ ಅವಕಾಶ ಕಲ್ಪಿಸಿಕೊಡಲಾಗುವುದು’ ಎಂದು ತಿಳಿಸಿದರು.

‘ಕನಕಪುರ ಯೋಜನಾ ಪ್ರಾಧಿಕಾರ ಹೊರತುಪಡಿಸಿ ಬೇರೆ ಪ್ರಾಧಿಕಾರಿಗಳು ಸಾಲದ ಸುಳಿಯಲ್ಲಿವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕ್ಷೇತ್ರ ರಾಮನಗರ ಪ್ರಾಧಿಕಾರದಲ್ಲಿ ಭಾರಿ ಅವ್ಯವಹಾರ ನಡೆದಿದ್ದು ಪ್ರಾಧಿಕಾರದ ಅಕೌಂಟ್‌ನ ಹಣವನ್ನು ಅಧಿಕಾರಿಯೊಬ್ಬರು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದು, ಅಕೌಂಟ್ ಸೀಜ್‌ ಆಗಿದೆ. ಈ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದೆ’ ಎಂದರು.

‘ಹಿಂದಿನ ಅವಧಿಯಲ್ಲಿ ಪ್ರಾಧಿಕಾರದಲ್ಲಿ ಯಾವುದೇ ಅಕ್ರಮ, ಭ್ರಷ್ಟಾಚಾರ ನಡೆದಿದ್ದರೂ ಅದರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆಯಲು ಬಿಡುವುದಿಲ್ಲ. ಜನ ಸಾಮಾನ್ಯರಿಗೆ ಜರೂರಾಗಿ, ಸುಲಭವಾಗಿ ಕೆಲಸ ಮಾಡಿಕೊಡುವಂತೆ ಪಕ್ಷದ ನಾಯಕರು ಎಲ್ಲ ಅಧ್ಯಕ್ಷರಿಗೂ ಸ್ಪಷ್ಟ ಆದೇಶ ನೀಡಿದ್ದಾರೆ’ ಎಂದು ತಿಳಿಸಿದರು.

ತೋಟಳ್ಳಿ ಮಠ ಮತ್ತು ಸಾತನೂರು ಮಠದ ಸ್ವಾಮೀಜಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜಾ ಕಾರ್ಯ ನೆರವೇರಿಸಿದರು. ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಚ್‌.ಮುರಳೀಧರ್‌, ಗ್ರೇಟರ್‌ ಬಿಡದಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜೇಗೌಡ, ‌ಆನೇಕಲ್‌ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಬಸಪ್ಪ, ಪುರಸಭೆ ಮಾಜಿ ಸದಸ್ಯ ಪುಟ್ಟರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು