ಶುಕ್ರವಾರ, ಮೇ 27, 2022
23 °C
ಮೂವರು ಸಾಧಕರಿಗೆ ಗೌರವ: ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಭಾಗಿ

ಕೋವಿಡ್‌ ಸೈನಿಕರಿಗೆ ‘ಪ್ರಜಾವಾಣಿ’ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯು ಕೋವಿಡ್ ಸೋಂಕು ಮುಕ್ತ ಆಗುವತ್ತ ಹೆಜ್ಜೆ ಇಟ್ಟಿದ್ದು, ಇದಕ್ಕೆ ಕಾರಣರಾದ ಕೋವಿಡ್‌ ಸೈನಿಕರನ್ನು ಬುಧವಾರ ‘ಪ್ರಜಾವಾಣಿ’ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಕಿರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಈ ಸಾಧಕರಿಗೆ ‘ಪ್ರಜಾವಾಣಿ’ ವತಿಯಿಂದ ನೀಡಲಾದ ಪ್ರಮಾಣಪತ್ರದ ಜೊತೆಗೆ ಶಾಲು ಹೊದಿಸಿ ಸನ್ಮಾನಿಸಿದರು. ರಾಮನಗರದ ಕಂದಾಯ ಭವನದಲ್ಲಿ ಇರುವ ಕೋವಿಡ್‌ ರೆಫರಲ್‌ ಆಸ್ಪತ್ರೆಯಲ್ಲಿ ವೈದ್ಯರಾಗಿ ನೂರಾರು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಕನಕಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ನರಸಿಂಹ ಮೂರ್ತಿ, ಕೋವಿಡ್‌ ಆಸ್ಪತ್ರೆಯಲ್ಲಿ ಹಗಲು–ರಾತ್ರಿಯೆಲ್ಲದೇ ರೋಗಿಗಳ ಶುಶ್ರೂಷೆ ಮಾಡಿದ ನರ್ಸಿಂಗ್‌ ಅಧಿಕಾರಿ, ಸರ್ಕಾರಿ ನರ್ಸಿಂಗ್‌ ಶಾಲೆಯ ಪ್ರಾಚಾರ್ಯೆ ಕೆ.ಆರ್. ಹರಿಣಾಕ್ಷಿ ಅವರನ್ನು ಸಚಿವರು ಸತ್ಕರಿಸಿದರು. ಜಿಲ್ಲಾಸ್ಪತ್ರೆಯ ಆಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿರುವ ಸತೀಶ್‌ ಅವರನ್ನೂ ಇದೇ ಸಂದರ್ಭ ಸತ್ಕರಿಸಲಾಯಿತು.

‘ಪ್ರಜಾವಾಣಿ’ ಪತ್ರಿಕೆಯು ಇಂತಹದ್ದೊಂದು ಜನಮುಖಿ ಕಾರ್ಯ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ. ಇದು ಇತರರಿಗೆ ಮಾದರಿ’ ಎಂದು ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು. ‘ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಕೋವಿಡ್‌ ಪರಿಹಾರ ಕಾರ್ಯ, ಆರೋಗ್ಯ ಸೌಲಭ್ಯಗಳನ್ನು ಜನರಿಗೆ ಒದಗಿಸಲು ಮುಂಚೂಣಿಯಲ್ಲಿ ದುಡಿದ ಕೊರೊನಾ ವಾರಿಯರ್‌ಗಳ ಸೇವೆ ಅಮೂಲ್ಯ. ಇದೀಗ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಲಸಿಕೆ ಲಭ್ಯವಾಗಿದ್ದು, ಜನರಲ್ಲಿನ ಭಯ ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮೊದಲ ಹಂತದ ಲಸಿಕೆ ಕಾರ್ಯ ಮುಗಿದಿದ್ದು, ಎರಡನೇ ಹಂತದ ಲಸಿಕೆ ಅಭಿಯಾನ ನಡೆದಿದೆ. ಸಾವಿರಾರು ಮಂದಿ ಈಗಾಗಲೇ ಲಸಿಕೆ ಪಡೆದಿದ್ದು, ಯಾವುದೇ ಅಡ್ಡ ಪರಿಣಾಮವಿಲ್ಲದೇ ಆರೋಗ್ಯದಿಂದ ಇದ್ದಾರೆ’ ಎಂದು ಅವರು ವಿವರಿಸಿದರು.

ಅಭಿನಂದನೆ: ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಹಿರಿಯ ವೈದ್ಯ ನರಸಿಂಹ ಮೂರ್ತಿ ‘ಪತ್ರಿಕೆಯೊಂದು ಕೋವಿಡ್ ಕಾಲದಲ್ಲಿ ಸೇವೆ ಸಲ್ಲಿಸಿದ ನಮ್ಮನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಇದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಸೋಂಕು ನಿಯಂತ್ರಣ ಮತ್ತು ಈ ಬಗ್ಗೆ ಜನರಲ್ಲಿ ಅರಿತು ಮೂಡಿಸುವಲ್ಲಿ ‘ಪ್ರಜಾವಾಣಿ’ಯಂತಹ ಪತ್ರಿಕೆಯ ಪಾತ್ರವೂ ಮಹತ್ವದ್ದಾಗಿದೆ’ ಎಂದು ಬಣ್ಣಿಸಿದರು. ಕೆ.ಆರ್. ಹರಿಣಾಕ್ಷಿ ಮಾತನಾಡಿ ‘ಈ ಸನ್ಮಾನವು ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿ–ಸಿಬ್ಬಂದಿಗೆ ಸಂದ ಗೌರವ. ಇದರಿಂದ ಇನ್ನಷ್ಟು ಮಂದಿ ಪ್ರೇರಣೆಗೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಜಯರತ್ನಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯ, ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷೆ ಎಸ್. ಸುಗುಣ ತಿಮ್ಮಪ್ಪರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಪದ್ಮಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಪ್ರಧಾನ ಕಾರ್ಯದರ್ಶಿ ರುದ್ರದೇವರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು