ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೂರ್ವ ಸಿದ್ಧತೆ ಇಲ್ಲದ್ದೇ ಸೋಲಿಗೆ ಕಾರಣ’

ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ: ಬಿಜೆಪಿ ಪರಾಜಿತ ಅಭ್ಯರ್ಥಿ ಸ್ಪಷ್ಟನೆ
Last Updated 26 ಮೇ 2019, 13:30 IST
ಅಕ್ಷರ ಗಾತ್ರ

ರಾಮನಗರ: ‘ಚುನಾವಣೆಯಲ್ಲಿ ಡಿ.ಕೆ. ಸಹೋದರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಒಳ ಒಪ್ಪಂದ ಮಾಡಿಕೊಳ್ಳುವುದಾಗಲಿ, ಪಲಾಯನ ಮಾಡುವುದಾಗಲಿ ನನ್ನ ಜಾಯಮಾನ ಅಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅಶ್ವತ್ಥ್ ನಾರಾಯಣಗೌಡ ಸ್ಪಷ್ಟನೆ ನೀಡಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ಹಾಗೂ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ನಡೆಸುವಲ್ಲಿ ವಿಫಲವಾಗಿದ್ದೇ ಚುನಾವಣೆಯಲ್ಲಿ ಸೋಲು ಅನುಭವಿಸಲು ಕಾರಣವಾಗಿದೆ. ಮೂರು ನಾಲ್ಕು ತಿಂಗಳ ಮುಂಚೆಯೇ ಅಭ್ಯರ್ಥಿ ಘೋಷಣೆಯಾಗಿದ್ದರೆ ಇಲ್ಲಿಯೂ ಬಿಜೆಪಿ ಗೆದ್ದು ಕರ್ನಾಟಕ ಕಾಂಗ್ರೆಸ್ ಮುಕ್ತ ಆಗುತ್ತಿತ್ತು. ಇದು ಪಕ್ಷದ ವರಿಷ್ಠರ ಅರಿವಿಗೂ ಬಂದಿದೆ’ ಎಂದು ತಿಳಿಸಿದರು.

‘ಸಿ.ಪಿ. ಯೋಗೇಶ್ವರ್ ಅಭ್ಯರ್ಥಿಯಾಗಿದ್ದರೆ ಸುಲಭವಾಗಿ ಸಂಸದರಾಗುವ ಅವಕಾಶ ಸಿಗುತ್ತಿತ್ತು. ಅವರು ನಿರಾಕರಿಸಿದ ಹಿನ್ನಲೆಯಲ್ಲಿ ಆಕಸ್ಮಿಕವಾಗಿ ನಾನು ಅಭ್ಯರ್ಥಿಯಾದೆ. ಚುನಾವಣೆಯಲ್ಲಿ ಯಾರೇ ಹೊಂದಾಣಿಕೆ, ಒಳಒಪ್ಪಂದ ಮಾಡಿಕೊಂಡರೂ ಮತದಾರ ಮತ್ತು ಪಕ್ಷದ ಕಾರ್ಯಕರ್ತರು ಅದನ್ನು ಒಪ್ಪುವುದಿಲ್ಲ’ ಎಂದು ತಿಳಿಸಿದರು.

‘ನಾನು ಬೆಂಗಳೂರು ಉತ್ತರ ಕ್ಷೇತ್ರ ಚುನಾವಣೆಯ ಜವಾಬ್ದಾರಿ ಹೊತ್ತಿಕೊಂಡಿದ್ದೆ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಇರುವಂತೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು. ತರಾತುರಿಯಲ್ಲಿಯೇ ನಾನು ನಾಮಪತ್ರ ಸಲ್ಲಿಸಿದೆ. ಚುನಾವಣೆಗೆ ಬಾಕಿ ಉಳಿದಿದ್ದ ಕೇವಲ 22 ದಿನಗಳಲ್ಲಿ ಮತದಾರರನ್ನು ಭೇಟಿಯಾಗಲು ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ’ ಎಂದರು.

‘ಪಕ್ಷದ ಕಾರ್ಯಕರ್ತರು ಬದ್ಧತೆಯಿಂದ ಅವಿರತವಾಗಿ ಶ್ರಮಿಸಿದ ಫಲವಾಗಿಯೇ ಚುನಾವಣೆಯಲ್ಲಿ ನನಗೆ 6 ಲಕ್ಷಕ್ಕೂ ಅಧಿಕ ಮತಗಳು ಲಭಿಸಿದವು. ಪ್ರಧಾನಿ ಮೋದಿರವರ ಐದು ವರ್ಷಗಳ ಆಡಳಿತ ಮತ್ತು ಅವರ ನಾಯಕತ್ವವನ್ನು ಮೆಚ್ಚಿ ಮತದಾರರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿಯಲ್ಲಿ ಒಡಕು ಸ್ವಲ್ಪ ಮಟ್ಟಿಗೆ ಮತಗಳನ್ನು ತಂದು ಕೊಟ್ಟಿರಬಹುದು. ಆದರೆ, ಪ್ರಧಾನಿ ಮೋದಿರವರ ನಾಯಕತ್ವವನ್ನು ಜನರು ಒಪ್ಪಿ ಮತ ನೀಡಿದ್ದಾರೆ. ಇದಕ್ಕೆ ದೇಶದ 19 ರಾಜ್ಯಗಳಲ್ಲಿ ಖಾತೆ ತೆರೆಯಲಾಗದೆ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿರುವುದೇ ಸಾಕ್ಷಿ’ ಎಂದರು.

2014ರ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆಗ ಬಿಜೆಪಿಗೆ 4 ಲಕ್ಷ ಮತಗಳು ಲಭಿಸಿದ್ದವು. ಈ ಬಾರಿ ಮೈತ್ರಿಯ ನಡುವೆಯೂ ಬಿಜೆಪಿಗೆ ಉತ್ತಮ ಮತಗಳು ಲಭಿಸಿವೆ. ಇದು ಸಂಸದ ಡಿ.ಕೆ.ಸುರೇಶ್ ಕಾರ್ಯವೈಖರಿ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ’ ಎಂದು ತಿಳಿಸಿದರು.

‘ಡಿ.ಕೆ.ಸಹೋದರರ ಮಧ್ಯೆ ಚುನಾವಣೆ ಎದುರಿಸುವುದೇ ಕಷ್ಟ ಎನ್ನುತ್ತಾರೆ. ಹೀಗಿದ್ದರು ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದ್ದೇನೆ. ಅಂಕಿ ಸಂಖ್ಯೆಗಳ ಆಧಾರದಲ್ಲಿ ನಾನು ಸೋತಿರಬಹುದು. ಆದರೆ, ಈ ಸೋಲು ನನ್ನಲ್ಲಿ ಆತ್ಮಾಸ್ಥೈರ್ಯವನ್ನು ಹೆಚ್ಚಿಸಿದೆ. ಮುಂದೆಯೂ ಕ್ಷೇತ್ರದಲ್ಲಿಯೇ ಉಳಿದುಕೊಂಡು ಕಾರ್ಯಕರ್ತರ ಜತೆಗೂಡಿ ಪಕ್ಷವನ್ನು ಸಂಘಟಿಸುತ್ತೇನೆ’ ಎಂದು ತಿಳಿಸಿದರು.

ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಆನೇಕಲ್ ಮತ್ತು ಕುಣಿಗಲ್ ನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ ಎಂದರು.

ರಾಜ್ಯದಲ್ಲಿ ಅಧಿಕಾರಕ್ಕಾಗಿ ಬಿಜೆಪಿ ಅಪರೇಷನ್ ಕಮಲ ಮಾಡುವುದಿಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ತಾಳ್ಮೆಯಿಂದ ಇರುತ್ತೇವೆ ಎಂದಿದ್ದಾರೆ. ಈಗ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಗರ್ಭಪಾತ ಆಗುವ ಸ್ಥಿತಿಗೆ ಬಂದಿದೆ. ಮೈತ್ರಿ ಸರ್ಕಾರ ಪತನವಾದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂಕ್ಕೆ ಉತ್ತರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಮಾತನಾಡಿ, ಮೈತ್ರಿ ರಾಜಕಾರಣಕ್ಕೆ ಸಡ್ಡು ಹೊಡೆದು ಚುನಾವಣೆ ನಡೆಸಿದ್ದೇವೆ. ಈ ಚುನಾವಣೆ ಮೂಲಕ ಡಿ.ಕೆ.ಸುರೇಶ್ ದಬ್ಬಾಳಿಕೆ ಮತ್ತು ದೌರ್ಜನ್ಯ ಕಡಿಮೆಯಾಗಲಿದೆ. ಮುಂಬರುವ ಚುನಾವಣೆಗಳಲ್ಲಿಯೂ ಅವರ ಗೂಂಡಾಗಿರಿಗೆ ಹೆದರದೇ ಪ್ರಬಲವಾಗಿ ಸ್ಪರ್ಧೆ ನೀಡಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಎಸ್.ಆರ್. ನಾಗರಾಜ್, ಬಿ. ನಾಗೇಶ್, ಪಿ. ರವಿಕುಮಾರ್, ಪ್ರವೀಣ್ ಗೌಡ, ವರದರಾಜ್ ಗೌಡ, ಮುರುಳೀಧರ್, ಜಿ.ವಿ. ಪದ್ಮನಾಭ, ಸದಾನಂದ, ಮಂಜೇಗೌಡ ಇದ್ದರು.

*
ತರಾತುರಿಯಲ್ಲಿಯೇ ನಾನು ನಾಮಪತ್ರ ಸಲ್ಲಿಸಿದೆ. ಕೇವಲ 22 ದಿನದ ಪ್ರಚಾರದಲ್ಲಿ ಎಲ್ಲರನ್ನೂ ಭೇಟಿ ಮಾಡಲಿ ಮನವೊಲಿಸಲು ಆಗಲಿಲ್ಲ.
-ಅಶ್ವತ್ಥ್ ನಾರಾಯಣಗೌಡ, ಬಿಜೆಪಿ ಪರಾಜಿತ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT