ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ

Last Updated 3 ಮೇ 2019, 16:23 IST
ಅಕ್ಷರ ಗಾತ್ರ

ರಾಮನಗರ: ಲೋಕಸಭೆ ಚುನಾವಣೆ ಮುಗಿದಿದ್ದು, ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಅಭ್ಯರ್ಥಿಗಳ ಭವಿಷ್ಯ ಅಡಗಿ ಕುಳಿತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ 2,672 ಮತಗಟ್ಟೆಗಳಲ್ಲಿನ ವಿದ್ಯುನ್ಮಾನ ಮತ ಯಂತ್ರಗಳನ್ನು ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ.

ಗುರುವಾರ ಮತದಾನ ಮುಗಿದ ನಂತರ ಸೂಕ್ತ ದಾಖಲೆಗಳೊಂದಿಗೆ ಮತಯಂತ್ರಗಳನ್ನು ವಶಕ್ಕೆ ಪಡೆದು ಚುನಾವಣಾಧಿಕಾರಿಗಳು ಭದ್ರತಾ ಕೊಠಡಿಯಲ್ಲಿ ಇರಿಸಿದ್ದಾರೆ. ಇಡೀ ಕಾಲೇಜಿಗೆ ಭಾರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಮೇ 23 ರಂದು ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದ್ದು, ಅಲ್ಲಿವರೆಗೆ ಕಟ್ಟಡಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಕಟ್ಟಡದ ಸುತ್ತ ಅರೆ ಸೇನಾಪಡೆ, ರಾಜ್ಯ ಮೀಸಲು ಪಡೆ, ಜಿಲ್ಲಾ ಮೀಸಲು ಪಡೆ ಹಾಗೂ ಸ್ಥಳೀಯ ಪೊಲೀಸರು ಸೇರಿದಂತೆ ನೂರಕ್ಕೂ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

ವಿದ್ಯುನ್ಮಾನ ಮತ ಯಂತ್ರಗಳಿರುವ ಭದ್ರತಾ ಕೊಠಡಿಯ ಕಾವಲಿಗೆ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಕಟ್ಟಡದ ಒಳಭಾಗದ ರಕ್ಷಣಾ ಕಾರ್ಯಕವನ್ನು ರಾಜ್ಯ ಮೀಸಲು ಪಡೆಯ ಯೋಧರಿಗೆ ವಹಿಸಲಾಗಿದೆ. ಕಟ್ಟಡದ ಹೊರಗಡೆ ಜಿಲ್ಲಾ ಮೀಸಲು ಪಡೆ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನೇಮಿಸಲಾಗಿದೆ.

ಜತೆಗೆ ಕಟ್ಟಡದ ಒಳಭಾಗ, ಮುಂಭಾಗ ಹಾಗೂ ಹೊರಭಾಗ ಸಿಸಿ ಟಿವಿಗಳನ್ನು ಅಳವಡಿಸುವ ಮೂಲಕ ಕಣ್ಗಾವಲು ಇಡಲಾಗಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ರಜೆ ಇರುವ ಕಾರಣ ವಿದ್ಯಾರ್ಥಿಗಳು ಕಾಲೇಜಿನತ್ತ ಬರುತ್ತಿಲ್ಲ. ಆದರೆ ಇದೇ ಕಟ್ಟಡದಲ್ಲಿ ಡಿಪ್ಲೋಮಾ ಕಾಲೇಜಿದ್ದು, ಈ ವಿದ್ಯಾರ್ಥಿಗಳು ಓಡಾಡಲು ಬಳಸುತ್ತಿದ್ದ ಪ್ರಮುಖ ಮಾರ್ಗವನ್ನು ಮುಚ್ಚಿ, ಓಡಾಡಲು ಪ್ರತ್ಯೇಕ ಮಾರ್ಗವನ್ನು ಸೂಚಿಸಲಾಗಿದೆ. ಆ ಮೂಲಕ ಭದ್ರತಾ ಕೊಠಡಿಯ ಭದ್ರತೆಗೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲಾಗಿದೆ.

ಭದ್ರತಾ ಕೊಠಡಿ ಇರುವ ಪ್ರದೇಶವನ್ನು ಸಂಪೂರ್ಣವಾಗಿ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಈ ಸ್ಥಳಕ್ಕೆ ಮಾಧ್ಯಮದವರ ಭೇಟಿಗೂ ಅವಕಾಶವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ತಿಳಿಸಿದರು.

ಕುಣಿಗಲ್, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕುಗಳಲ್ಲಿ ನಡೆದ ಮತದಾನದ ಮತಪೆಟ್ಟಿಗೆಗಳನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುರಕ್ಷಿತವಾಗಿಡಲು ಸ್ಟ್ರಾಂಗ್ ರೂಮ್ ಗಳನ್ನು ನಿರ್ಮಿಸಿ ಅದರಲ್ಲಿ ಮತಪೆಟ್ಟಿಗೆಗಳನ್ನು ಭದ್ರವಾಗಿ ಇರಿಸಿ ಸೀಲ್ ಮಾಡಲಾಗಿದೆ ಎಂದು ತಿಳಿಸಿದರು.

ಕೇಂದ್ರಿಯ ಮೀಸಲು ಪಡೆಯ ಯೋಧರು ಇಲ್ಲಿ ಕಾವಲು ಕಾಯುತ್ತಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮತ ಎಣಿಕೆ ಕಾರ್ಯದ ಪೂರ್ವ ಸಿದ್ಧತೆ ಕಾರ್ಯವು ಚಾಲ್ತಿಯಲ್ಲಿರುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT