ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ರಾಜೀನಾಮೆ ವಿರೋಧಿಸಿ ಪ್ರತಿಭಟನೆ

Last Updated 10 ಜುಲೈ 2019, 12:47 IST
ಅಕ್ಷರ ಗಾತ್ರ

ರಾಮನಗರ: ‘ಅಧಿಕಾರ ಹಾಗೂ ಹಣದ ಆಸೆಗಾಗಿ 14 ಶಾಸಕರು ರಾಜೀನಾಮೆ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಇಲ್ಲಿನ ಐಜೂರು ವೃತ್ತದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.

‘ಮೈತ್ರಿ ಸರ್ಕಾರದ ಬಗ್ಗೆ ಬೇಸರವಿದ್ದರೆ ಕ್ಷೇತ್ರದ ಜನತೆಯೊಂದಿಗೆ ಹೋರಾಟ ಮಾಡಿ, ನ್ಯಾಯ ಕೇಳಬಹುದಿತ್ತು. ನಾವೆಲ್ಲರೂ ಅವರ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಸರ್ಕಾರದ ಕಿವಿ ಹಿಂಡುವ ಕಾರ್ಯ ಮಾಡುತ್ತಿದ್ದೆವು. ಆದರೆ ಶಾಸಕರು ಇವೆಲ್ಲವನ್ನು ಬಿಟ್ಟು, ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಪರ ರಾಜ್ಯದಲ್ಲಿ ಅಡಗಿಕುಳ್ಳುವ ಮೂಲಕ ನಮ್ಮ ರಾಜ್ಯದ ಮಾನ ಹರಾಜು ಹಾಕಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪಿ.ಕೃಷ್ಣೇಗೌಡ ಆರೋಪಿಸಿದರು.

‘ಅವರು ಮರಳಿ ನಮ್ಮ ರಾಜ್ಯಕ್ಕೆ ಬರುವಾಗ ಜನರ ಬಳಿ ಕ್ಷಮೆ ಕೇಳಬೇಕು. ಇಲ್ಲವಾದರೆ ರಾಜ್ಯದ ಮಾನ ಕಳೆದ ಶಾಸಕರ ಮುಖಗಳಿಗೆ ಕಪ್ಪು ಮಸಿ ಹಚ್ಚುವ ಕಾರ್ಯಕ್ಕೆ ಮುಂದಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವುಗೌಡ ಮಾತನಾಡಿ ‘ರಾಜ್ಯದ ರಾಜಕೀಯ ಬೆಳವಣಿಗೆ ನೋಡಿ ಜನರಲ್ಲಿ ಹತಾಶೆಯ ಭಾವನೆ ಮೂಡುವಂತಾಗಿದೆ. ರಾಜ್ಯದಲ್ಲಿ ಮಳೆ, ಬೆಳೆ ಇಲ್ಲದೆ ರೈತರು ಕಂಗಾಲಾಗಿರುವಾಗ ಬಡ ಜನರ ಸಮಸ್ಯೆಯನ್ನು ಪರಿಹರಿಸುವ ಬದಲು ಸ್ವರಾಜಕೀಯ ಹಿತಾಶಕ್ತಿಗಾಗಿ ರಾಜೀನಾಮೆ ನೀಡಿದ್ದಾರೆ’ ಎಂದು ದೂರಿದರು.

‘ಬೆಳೆ ಪರಿಹಾರ ರೈತರ ಕೈ ಸೇರಿಲ್ಲ. ಶಾಲಾ ಮಕ್ಕಳಿಗೆ ಸರಿಯಾಗಿ ಸಮವಸ್ತ್ರ ತಲುಪಿಲ್ಲ. ಸರ್ಕಾರದ ಆಡಳಿತ ವೈಖರಿಯ ಭಾಗವಾದ ಈ ಶಾಸಕರು ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಬದಲು ರೆಸಾರ್ಟ್ ರಾಜಕಾರಣದಲ್ಲಿ ಮುಳುಗುವ ಮೂಲಕ ಮತ್ತೊಮ್ಮೆ ಚುನಾವಣೆ ಎದುರಾಗುವ ಸಂದರ್ಭ ಸೃಷ್ಟಿ ಮಾಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ವ್ಯರ್ಥ ಖರ್ಚು ಮಾಡುವ ಮೂಲಕ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುವಂತೆ ಮಾಡಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಉಮಾರಾಜ್, ಶಶಿಕಿರಣ, ಸಿದ್ದು, ಕಿರಣ್, ಸಂಜಯ, ವಿನೋದ್, ಮಹೇಶ್, ರಮೇಶ್, ವೆಂಕಟೇಶ್, ವಾಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT