ಬುಧವಾರ, ಆಗಸ್ಟ್ 10, 2022
21 °C
ದಲಿತ ಸಂಘಟನೆಗಳ ಒಕ್ಕೂಟದಿಂದ ಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ

ಎಸ್‌ಐ ಅನುಚಿತ ವರ್ತನೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಹಾರೋಹಳ್ಳಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮುರಳಿ ಅವರು ದಲಿತ ಸಮುದಾಯದ ಜನರೊಡನೆ ಅನುಚಿತವಾಗಿ ವರ್ತಿಸುತ್ತಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಹಾರೋಹಳ್ಳಿ ಗ್ರಾಮಸ್ಥರು ಹಾಗೂ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಮಾಯಿಸಿ, ಪೊಲೀಸ್ ಅಧಿಕಾರಿಯ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರಿಗೆ
ಮನವಿ ಪತ್ರ ಸಲ್ಲಿಸಿದರು.

ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯ ಅಧ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ‘ಮುರಳಿ ಅವರು ಕನಕಪುರ ತಾಲ್ಲೂಕಿನ ಗೂಗಾರೇದೊಡ್ಡಿ ಗ್ರಾಮದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಕಾಳಮ್ಮ
ಎಂಬ ಮಹಿಳೆ ಠಾಣೆಯಲ್ಲಿ ದೂರು ನೀಡಲು ಹೋದಾಗ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪರಿಶಿಷ್ಟ ಜಾತಿ ದೌರ್ಜನ್ಯದ ದೂರನ್ನು ಸ್ವೀಕರಿಸದೇ ಬೆದರಿಸಿ, ಬಲವಂತವಾಗಿ ಬೇರೆ ದೂರು ಬರೆಸಿ ಸಹಿ ಹಾಕಿಸಿ
ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಆರೋಪಿಸಿದರು. ‘ಇದೇ 14ರಂದು ಹಾರೋಹಳ್ಳಿಯ ಅರುಣಾಚಲೇಶ್ವರ ದೇವಸ್ಥಾನದ ಬಳಿ ಪರಿಶಿಷ್ಟ ಜಾರಿಗೆ ಸೇರಿದ ಗೋಪಾಲ್ ಎಂಬ ಯುವಕನಿಗೆ ವಿನಾಕಾರಣ ಥಳಿಸಿದ್ದಾರೆ’ ಎಂದು ದೂರಿದರು.

ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ಹಾರೋಹಳ್ಳಿ ಠಾಣೆಗೆ ಈ ಅಧಿಕಾರಿ ವರ್ಗಾವಣೆಯಾಗಿ ಬಂದಾಗಿನಿಂದಲೂ ಅಮಾಯಕರ ಮೇಲೆ ಮನಬಂದಂತೆ ಲಾಠಿ
ಪ್ರಯೋಗ ಮಾಡತ್ತಿದ್ದಾರೆ’ ಎಂದು ಆರೋಪಿಸಿದರು.

ಎಚ್ಚರಿಕೆ: ಎಸ್ಪಿ ಗಿರೀಶ್‌ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಸಂಬಂಧಿಸಿದ ಠಾಣಾಧಿಕಾರಿ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮುಖಂಡರ ಎದುರೇ ಮಾತನಾಡಿಸಿದರು. ಈ ರೀತಿಯ ಘಟನೆ
ಮರುಕಳುಹಿಸದಂತೆ ನೋಡಿಕೊಳ್ಳುವಂತೆ ಮುರಳಿ ಅವರಿಗೆ ಎಚ್ಚರಿಕೆ ನೀಡಿದರು.

ವಿವಿಧ ದಲಿತ ಪರ ಸಂಘಟನೆಗಳ ಮುಖಂಡರಾದ, ಕೋಟೆ ಕುಮಾರ್, ಕೋಟೆ ಶ್ರೀನಿವಾಸ್, ರುದ್ರೇಶ್‌, ಪ್ರಕಾಶ್, ಯಡವನಹಳ್ಳಿ ಚಂದ್ರು, ಮರಳವಾಡಿ ಮಂಜು, ರವಿ, ಹರೀಶ್ ಬಾಲು, ವೆಂಕಟೇಶ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.