ಚನ್ನಪಟ್ಟಣ (ರಾಮನಗರ): ‘ಈ ಭಾಗದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಇರೋದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಾತ್ರ. ಅವರ ಕೈ ಬಲಪಡಿಸುವುದಕ್ಕಾಗಿ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಶಕ್ತಿ ತುಂಬಿ’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಶಿಕ್ಷಕರಿಗೆ ಮನವಿ ಮಾಡಿದರು.
ತಾಲ್ಲೂಕಿನ ಕೆಂಗಲ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಲಿದೆ. ಈಗಾಗಲೇ 7ನೇ ವೇತನ ಆಯೋಗದ ವರದಿಯನ್ನು ಜಾರಿ ಮಾಡಿದೆ. ನಾವು ನಿಮಗೆ ಕೊಟ್ಟಿರುವ ಮತ್ತಷ್ಟು ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ. ಹಾಗಾಗಿ, ಶಿವಕುಮಾರ್ ಅವರ ಕೈ ಬಲಪಡಿಸಿ’ ಎಂದರು.