ಕನಕಪುರ: ರೈತ ಸಂಘ ಬಲಿಷ್ಠಗೊಳ್ಳಬೇಕಾದರೆ ನಿಜವಾದ ರೈತರು ಸಂಘದಲ್ಲಿ ಸದಸ್ಯರಾಗಬೇಕು. ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಉಯ್ಯಂಬಳ್ಳಿ ಸತೀಶ್ ತಿಳಿಸಿದರು.
ತಾಲ್ಲೂಕಿನ ಸಾತನೂರು ಮಹದೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ನಡೆದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಕಾಲದಲ್ಲಿ ರೈತ ಸಂಘದ ಚಳವಳಿಗೆ ಸರ್ಕಾರವೇ ಭಯ ಬೀಳುತ್ತಿತ್ತು. ಅಧಿಕಾರಿಗಳು ಭಯದಿಂದ ಕಚೇರಿಯಲ್ಲಿ ಕುಳಿತು ಸಾರ್ವಜನಿಕರ ಕೆಲಸ ಮಾಡುತ್ತಿದ್ದರು. ಆದರೆ, ಈಗ ರೈತ ಸಂಘದ ಹೋರಾಟ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಸಂಘದ ಯುವ ಮುಖಂಡ ಕಾಡಳ್ಳಿ ಅನುಕುಮಾರ್ ಮಾತನಾಡಿ, ರೈತ ಸಂಘ ಸಕ್ರಿಯವಾಗಿ ಸಂಘಟಿತ ಹೋರಾಟ ನಡೆಸಬೇಕಿದೆ ಎಂದರು.
ರೈತರ ಸಮಸ್ಯೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಾರ್ವಜನಿಕರ ಕೆಲಸ ಮಾಡದ ಅಧಿಕಾರಗಳ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ಆಂಥೋಣಿರಾಜ್, ಹೋಬಳಿ ಘಟಕದ ಅಧ್ಯಕ್ಷ ರಮೇಶ್, ಸಿದ್ದೇಗೌಡ, ಪದಾಧಿಕಾರಿಗಳಾದ ವೆಂಕಟೇಶ್, ಶಿವಗೂಳಿಗೌಡ, ಪುಟ್ಟಸ್ವಾಮಿಗೌಡ, ಶ್ರೀಕಂಠಸ್ವಾಮಿ, ಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.