ಸೋಮವಾರ, ಫೆಬ್ರವರಿ 24, 2020
19 °C

ರಾಮನಗರ ಮ್ಯಾರಥಾನ್‌ನ ಏಳನೇ ಆವೃತ್ತಿ: ಓಡಿ ದಣಿದ ಉತ್ಸಾಹಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ಬಸವನಪುರ ಮೈದಾನದ ಸುತ್ತಮುತ್ತ ಭಾನುವಾರ ಮುಂಜಾನೆ ಉತ್ಸಾಹದ ಓಟ ನಡೆಯಿತು. ಬೇರೆ ಬೇರೆ ಊರುಗಳಿಂದ ಬಂದಿದ್ದ ಸಾವಿರಕ್ಕೂ ಮಂದಿ ಒಟ್ಟಾಗಿ ಓಡಿ ದಣಿದರು.

ಯಲ್ಲೋ ಅಂಡ್‌ ರೆಡ್ ಫೌಂಡೇಶನ್ ನೇತೃತ್ವದಲ್ಲಿ ಆಯೋಜಿಸಿದ್ದ ರಾಮನಗರ ಮ್ಯಾರಥಾನ್‌ನ ಏಳನೇ ಆವೃತ್ತಿಯ ಮೊದಲ ಓಟವು ಬೆಳಗ್ಗೆ 6.30ಕ್ಕೆ ಚಾಲನೆ ಪಡೆದುಕೊಂಡಿತು. ಮೊದಲಿಗೆ 21 ಕಿ.ಮೀ. ಕ್ರಮಿಸುವ ಗುರಿ ಹೊತ್ತು ಸ್ಪರ್ಧಿಗಳು ಹೆಜ್ಜೆ ಇಟ್ಟರು. ಅದರ ಬೆನ್ನಿಗೆ 11 ಕಿ.ಮೀ. ಹಾಗೂ 7 ಕಿ.ಮೀ. ಓಟಗಳಿಗೂ ಚಾಲನೆ ದೊರೆಯಿತು. ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧಿಗಳು ಓಡಿದರು.

ಇಳಿಜಾರು–ದಿಬ್ಬಗಳಿಂದ ಕೂಡಿದ ಕಚ್ಚಾ ರಸ್ತೆಯಲ್ಲಿ ನಡೆದ ಮ್ಯಾರಥಾನ್‌ ನಗರದ ಮಂದಿಗೆ ಹೊಸ ಅನುಭವ ನೀಡಿತು. ಮಾವಿನ ಹೂವುಗಳಿಂದ ಮೈ ದುಂಬಿದ ಮರಗಳು, ಬೃಹತ್ತಾದ ಬಂಡೆಗಳ ಸೌಂದರ್ಯವನ್ನು ಸವಿಯುತ್ತಾ ಓಟಗಾರರು ಹೆಜ್ಜೆ ಹಾಕಿದರು.

ಬಸವನಪುರದಿಂದ ಆರಂಭಗೊಂಡ ಓಟವು ವಡೇರಹಳ್ಳಿ, ರಾಂಪುರದೊಡ್ಡಿ, ಗೋಪಾಲಪುರ, ದಾಸೇಗೌಡನ ದೊಡ್ಡಿ, ಹುಣಸನಹಳ್ಳಿ ಮೊದಲಾದ ಮಾರ್ಗಗಳಲ್ಲಿ ಸಾಗಿ ಮತ್ತೆ ಬಸವನಪುರಕ್ಕೆ ವಾಪಸ್‌ ಆಯಿತು. ಮಾರ್ಗದಲ್ಲಿ ಅಲ್ಲಲ್ಲಿ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಮ್ಯಾರಥಾನ್‌ನಲ್ಲಿ ಯುವ ಓಟಗಾರರೇ ಹೆಚ್ಚಿದ್ದರೂ ಸಾಕಷ್ಟು ಮಂದಿ ಹಿರಿಯರೂ ಪಾಲ್ಗೊಂಡರು. ಬೆಂಗಳೂರಿನ ಐಟಿ–ಬಿ.ಟಿ. ಉದ್ಯೋಗಿಗಳು, ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಈ ಬಾರಿ ಯುರೋ ಕಿಡ್ಸ್‌ನ ಪುಟಾಣಿ ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷ. ಶ್ವಾನ ಕೂಡ ಹೆಜ್ಜೆ ಹಾಕಿ ಗಮನ ಸೆಳೆಯಿತು.

ಚಾಲನೆ

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಇಕ್ರಂ, ಎಸ್ಪಿ ಅನೂಪ್‌ ಶೆಟ್ಟಿ, ಬಿಜೆಪಿ ಮುಖಂಡ ಅಶ್ವತ್ಥ್‌ ನಾರಾಯಣ ಓಟಗಳಿಗೆ ಹಸಿರು ನಿಶಾನೆ ತೋರಿದರು. ಯಲ್ಲೋ ಅಂಡ್‌ ರೆಡ್‌ ಫೌಂಡೇಶನ್‌ ಅಧ್ಯಕ್ಷ ರಾಘವೇಂದ್ರ, ವ್ಯವಸ್ಥಾಪಕ ನಿರ್ದೇಶಕ ಆನಂದ ಶಿವ ಇದ್ದರು.

ಈ ವರ್ಷ ಅರಣ್ಯ ಕೃಷಿ ಅಗತ್ಯತೆ ಮತ್ತು ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಸಂದೇಶಗಳನ್ನು ಮ್ಯಾರಥಾನ್‌ ಮೂಲಕ ಸಾರಲಾಯಿತು. ರೋಟರಿ ಸಿಲ್ಕ್ ಸಿಟಿ , ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್‌ ಕ್ಲಬ್, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೋಲೀಸ್, ಗೇಲ್‌ ಇಂಡಿಯಾ, ಕೆಎಂಎಫ್‌ ಸೇರಿದಂತೆ ವಿವಿಧ ಸಂಸ್ಥೆಗಳು ಸಹಯೋಗ ನೀಡಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)