ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಲೀಲಾ ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ: ₹13 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಕುದೂರು: ₹ 13 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಇಂದು ಚಾಲನೆ
ವಿವೇಕ್ ಕುದೂರು
Published 5 ಮಾರ್ಚ್ 2024, 5:25 IST
Last Updated 5 ಮಾರ್ಚ್ 2024, 5:25 IST
ಅಕ್ಷರ ಗಾತ್ರ

ಕುದೂರು: ಇಲ್ಲಿನ ಶ್ರೀರಾಮ ಲೀಲಾ ಮೈದಾನದಲ್ಲಿ ₹ 6 ಕೋಟಿ ವೆಚ್ಚದ ಹೈಟೆಕ್ ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಸಂಸದ ಡಿ.ಕೆ ಸುರೇಶ್ ಹಾಗೂ ಶಾಸಕ ಎಚ್.ಸಿ. ಬಾಲಕೃಷ್ಣ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ.

ಒಟ್ಟು 2 ಎಕರೆ 27 ಗುಂಟೆ ವಿಸ್ತೀರ್ಣದಲ್ಲಿರುವ ಮೈದಾನದಲ್ಲಿ 27 ವರ್ಷಗಳ ಹಿಂದೆ ಕಟ್ಟಿದ ಬಯಲು ರಂಗಮಂದಿರವಿದೆ. ಇದರ ಪಕ್ಕ ಮಕ್ಕಳ ಉದ್ಯಾನವಿದೆ. ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಪಟುಗಳಿಗೆ ಅಭ್ಯಾಸ ಇದೇ ಮೈದಾನದಲ್ಲಿ ನಡೆಯುತ್ತದೆ. 

ನೀಲಿ ನಕ್ಷೆಯಲ್ಲಿರುವ ಮಕ್ಕಳ ಆಟದ ಉದ್ಯಾನ
ನೀಲಿ ನಕ್ಷೆಯಲ್ಲಿರುವ ಮಕ್ಕಳ ಆಟದ ಉದ್ಯಾನ

ಹೈಟೆಕ್ ಮೈದಾನದಲ್ಲಿ ಏನೇನಿರಲಿದೆ?:

ಎರಡು ದಶಕಗಳ ಹಿಂದೆ ಕಟ್ಟಿದ ರಂಗಮಂದಿರವನ್ನು ತೆಗೆದು ಆಧುನಿಕ ರೀತಿಯಲ್ಲಿ ಕಟ್ಟಲಾಗುತ್ತದೆ. ರಂಗಮಂದಿರದ ಹಿಂಭಾಗದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಪ್ರಸಾದನ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಮೇಲ್ಭಾಗದಲ್ಲಿ ಚೆಸ್ ಕೇರಂನಂತಹ ಆಟಗಳನ್ನು ಆಡಲು ಕೊಠಡಿ ನಿರ್ಮಾಣ ಮಾಡಲಾಗುತ್ತದೆ.

ರಂಗಮಂದಿರದ ಒಂದು ಪಕ್ಕದಲ್ಲಿ ಮಕ್ಕಳ ಸುಂದರ ಉದ್ಯಾನ ನಿರ್ಮಿಸಿ ಅದರಲ್ಲಿ ಮಕ್ಕಳು ಆಡಬಹುದಾದ ಆಟಿಕೆಗಳನ್ನು ಅಲ್ಲಿ ಅಳವಡಿಸುವಂತೆ ವಿನ್ಯಾಸ ಮಾಡಲಾಗಿದೆ.

ಸಕಲ ಸೌಲಭ್ಯವುಳ್ಳ ಶ್ರೀರಾಮ ಲೀಲಾ ಮೈದಾನ ಯೋಜನೆಯ ನೀಲನಕ್ಷೆ
ಸಕಲ ಸೌಲಭ್ಯವುಳ್ಳ ಶ್ರೀರಾಮ ಲೀಲಾ ಮೈದಾನ ಯೋಜನೆಯ ನೀಲನಕ್ಷೆ

ಈಗಿರುವ ಮೈದಾನದ ರಂಗಮಂದಿರದ ಎಡಭಾಗದಿಂದ ಸೊಸೈಟಿ ಕಟ್ಟಡ ಹಿಂಭಾಗದವರೆಗೆ ‘ಎಲ್’ ಆಕಾರದಲ್ಲಿ ಜನರು ಕುಳಿತುಕೊಳ್ಳುವಂತ ಮೆಟ್ಟಿಲುಗಳನ್ನು ಮಾಡಿ ನೆರಳಿಗೆ ಟೆಂಜೈಲ್ ರೂಫಿಂಗ್ ಹಾಕಲಾಗುತ್ತದೆ. ಮೈದಾನದಲ್ಲಿ ಆಡುವ ಆಟಗಳು ಮತ್ತು ರಂಗಮಂದಿರದ ಚಟುವಟಿಕೆಗಳನ್ನು ಕುಳಿತು ನೋಡುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಈಗಿರುವ ತಡೆಗೋಡೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೂತನವಾಗಿ ನಿರ್ಮಾಣ ಮಾಡಲಾಗುತ್ತದೆ. ಮಳೆ ನೀರು ಹೊರಗೆ ಹೋಗಿ ಒಳಚರಂಡಿಗೆ ಸಂಪರ್ಕ ಕಲ್ಪಿಸುತ್ತದೆ. ಇದರ ಮೇಲೆಯೇ ಟೈಲ್ಸ್ಗಳನ್ನು ಹಾಕಿ ಅದನ್ನು ಜನರ ವಾಯುವಿಹಾರಕ್ಕೆ ಅನುವು ಮಾಡಿಕೊಡಲಾಗುವ ವ್ಯವಸ್ಥೆ ಮಾಡಲಾಗುತ್ತದೆ. 

ಶ್ರೀರಾಮ ಲೀಲಾ ಮೈದಾನ ಯೋಜನೆಯ ನೀಲನಕ್ಷೆ
ಶ್ರೀರಾಮ ಲೀಲಾ ಮೈದಾನ ಯೋಜನೆಯ ನೀಲನಕ್ಷೆ

ಯಾವೆಲ್ಲಾ ಕ್ರೀಡೆಗಳಿಗೆ ಅನುಕೂಲ:

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವಂತಹ ನೆಟ್ ವ್ಯವಸ್ಥೆಯಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುವಂತೆ ಯೋಜನೆ ಮಾಡಲಾಗಿದೆ. ಮೈದಾನದ ಸುತ್ತಲೂ ಅಥ್ಲೆಟಿಕ್ ಕ್ರೀಡೆಗಳಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿ, ರಾತ್ರಿ ವೇಳೆಯೂ ಆಟವಾಡಲು ಮತ್ತು ಪಂದ್ಯಾವಳಿಗಳನ್ನು ಏರ್ಪಡಿಸಲು ಅನುಕೂಲವಾಗುವಂತಹ ನಾಲ್ಕು ಹೈಮಾಸ್ಟ್ ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗುವುದು. ಮೈದಾನದ ಪಕ್ಕದಲ್ಲಿರುವ ರೇಷ್ಮೆ ಇಲಾಖೆ ಕಟ್ಟಡ ತೆರವುಗೊಂಡ ನಂತರ, ಆ ಜಾಗದಲ್ಲಿ ಒಳಾಂಗಣ ಸ್ಟೇಡಿಯಂ ನಿರ್ಮಾಣ ಮಾಡಿ ಅಲ್ಲಿ ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಟೆನ್ನಿಸ್ ಆಟಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಈ ಮೈದಾನಕ್ಕೆ ಮೂರು ಗೇಟ್‌ಗಳನ್ನು  ಅಳವಡಿಸಲಾಗುವುದು. ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಗೇಟ್‌ಗಳನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. 

ಶ್ರೀರಾಮಲೀಲಾ ಮೈದಾನದ ಒಳಾಂಗಣ ಕ್ರೀಡಾಂಗಣದ ನೀಲಿ ನಕ್ಷೆ
ಶ್ರೀರಾಮಲೀಲಾ ಮೈದಾನದ ಒಳಾಂಗಣ ಕ್ರೀಡಾಂಗಣದ ನೀಲಿ ನಕ್ಷೆ

ಒಟ್ಟು ₹ 13 ಕೋಟಿ ವೆಚ್ಚ

ರಾಮಲೀಲಾ ಮೈದಾನದ ಯೋಜನೆ ಮುಗಿಯುವುದರೊಳಗೆ ಸುಮಾರು ₹13 ಕೋಟಿ ಬೇಕಾಗುತ್ತದೆ. ಈಗ ಮೊದಲ ಹಂತದಲ್ಲಿ ₹ 6 ಕೋಟಿ ಬಿಡುಗಡೆಯಾಗಿದೆ. ಈ ಯೋಜನೆ ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ. ಮಂಜುನಾಥ್ ಎಂ.ಜಿ. ಎಂಜಿನಿಯರ್ ಎರಡು ಹಂತಗಳಲ್ಲಿ ಹಣ ಬಿಡುಗಡೆ ಕ್ರೀಡಾಪಟುಗಳ ದಶಕಗಳ ಬೇಡಿಕೆಯಾಗಿದ್ದ ಶ್ರೀರಾಮಲೀಲಾ ಮೈದಾನದ ಉನ್ನತೀಕರಣ ಕೈಗೊಳ್ಳಲಾಗಿದೆ.  ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಮೊದಲ ಹಂತದಲ್ಲಿ ₹6 ಕೋಟಿ ಬಿಡುಗಡೆ ಮಾಡಿಸಲಾಗಿದೆ. ಉಳಿದ ಹಣವನ್ನು ಇನ್ನೆರಡು ಹಂತದಲ್ಲಿ ಬಿಡುಗಡೆ ಮಾಡಲಾಗುವುದು. ಎಚ್.ಸಿ. ಬಾಲಕೃಷ್ಣ ಶಾಸಕ ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT