ಮಂಗಳವಾರ, ನವೆಂಬರ್ 12, 2019
28 °C

ಕನಕಪುರದಲ್ಲಿ ನಾಡಬಾಂಬ್‌ ತಿಂದ ಹಸುವಿನ ಬಾಯಿ ಛಿದ್ರ

Published:
Updated:

ಉಯ್ಯಂಬಳ್ಳಿ (ಕನಕಪುರ): ಜಮೀನಿನಲ್ಲಿ ಮೇಯುತ್ತಿದ್ದ ನಾಟಿ ಹಸುವೊಂದು ಮದ್ದಿನ ಉಂಡೆ (ನಾಡ ಬಾಂಬ್‌/ನೆಲಬಾಂಬ್‌) ತಿಂದು ಬಾಯಿ ಛಿದ್ರಗೊಂಡ ಘಟನೆ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಏಳಗಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಹಸು ಏಳಗಳ್ಳಿ ಗ್ರಾಮದ ಶಂಕರೇಗೌಡ ಎಂಬುವರಿಗೆ ಸೇರಿದೆ. ಪ್ರತಿದಿನದಂತೆ ಗುರುವಾರ ಬೆಳಿಗ್ಗೆ ಶಂಕರೇಗೌಡರು ಹಸುವನ್ನು ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದಾಗ ಈ ಘಟನೆ ನಡೆದಿದೆ.

ಕಳ್ಳ ಬೇಟೆಗಾರರು ಹಂದಿ ಬೇಟೆಯಾಡಲು ಈ ಮದ್ದಿನ ಉಂಡೆಯನ್ನು ಬಳಸುತ್ತಾರೆ. ನೆಲದಲ್ಲಿ ಹುದುಗಿಸಿ ಇಟ್ಟಿರುವ ಈ ಮದ್ದಿನ ಉಂಡೆಯನ್ನು ಹಂದಿ ಅಥವಾ ಇನ್ನಿತರ ಯಾವುದೆ ಪ್ರಾಣಿಯು ಅದನ್ನು ತಿಂದಾಗ ಅದರ ಬಾಯಿ ಮತ್ತು ಮುಖ ಛಿದ್ರವಾಗುತ್ತದೆ.

ಮದ್ದಿನ ಉಂಡೆಯನ್ನು ತಿಂದ ಹಸುವಿನ ಬಾಯಿ ಛಿದ್ರವಾಗಿದ್ದರೂ ಹಸು ಬದುಕಿದೆ. ಆದರೆ ಹಸುವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟ. ಏನೇ ಪ್ರಯತ್ನಪಟ್ಟರು ಮೇವನ್ನು ತಿನ್ನಲಾಗದೆ ಕ್ರಮೇಣ ಹಸು ಸಾವನ್ನಪ್ಪುತ್ತದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಹಸುವಿನ ಮಾಲಿಕ ಶಂಕರೇಗೌಡ ಸಾತನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)