ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಣ ಸಿದ್ದೇಶ್ವರರ ಮಹಾ ರಥೋತ್ಸವ 18ರಂದು

ಏಕಾಶಿಲಾ ಬೆಟ್ಟದಲ್ಲಿ ಜಾತ್ರೆ ಸಂಭ್ರಮ: ನಾಡಿನ ವಿವಿಧೆಡೆಯಿಂದ ಭಕ್ತರು ಭಾಗಿ
Last Updated 17 ಮೇ 2019, 13:21 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಅವ್ವೇರಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮಹಾ ರಥೋತ್ಸವ ಇದೇ 18 ರಂದು ಮಧ್ಯಾಹ್ನ 12.05ಕ್ಕೆ ನಡೆಯಲಿದೆ. ಪ್ರತಿ ವರ್ಷ ವೈಶಾಖ ಬುದ್ಧ ಪೂರ್ಣಿಮೆಯ ದಿನದಂದು ರಥೋತ್ಸವವು ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ.

ಮಹತ್ವದ ಧಾರ್ಮಿಕ ಸ್ಥಳ

ಜಿಲ್ಲೆಯಲ್ಲಿ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕಾಗಿ ಮಹತ್ವ ಪಡೆದ ಹಲವು ಸ್ಥಳಗಳಿವೆ. ಇವುಗಳ ಪೈಕಿ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ರೇವಣಸಿದ್ಧೇಶ್ವರ ಬೆಟ್ಟವೂ ಒಂದಾಗಿದೆ. ರಾಮನಗರದಿಂದ ಆಗ್ನೇಯಕ್ಕೆ ಸುಮಾರು ಹದಿನೈದು ಕಿಲೋ ಮೀಟರ್‌ಗಳಷ್ಟು ದೂರದಲ್ಲಿ ಈ ಬೆಟ್ಟವಿದೆ. ಈ ಸ್ಥಳದಲ್ಲಿ ರೇವಣಸಿದ್ಧರೆಂಬ ಯತೀಶ್ವರರು ಅನೇಕ ಕಾಲ ಯೋಗಾನುಷ್ಠಾನದಲ್ಲಿದ್ದು, ಈ ಗಿರಿಯನ್ನು ಸಿದ್ಧಗಿರಿಯನ್ನಾಗಿ ಮಾಡಿದುದರಿಂದ ಈ ಕ್ಷೇತ್ರಕ್ಕೆ ‘ರೇವಣಸಿದ್ದೇಶ್ವರ ಬೆಟ್ಟ’ ಎಂದು ಹೆಸರು ಬಂದಿರುವುದಾಗಿ ತಿಳಿದು ಬರುತ್ತದೆ.

ಈ ಬೆಟ್ಟದ ಬುಡದಲ್ಲಿರುವ ತೇರುಬೀದಿಯಲ್ಲಿ ರೇಣುಕಾಂಬೆಯ ದೇಗುಲವಿದೆ. ಮಹಾಶಿವಭಕ್ತೆಯಾಗಿದ್ದ ರೇಣುಕಾಂಬೆ ರೇವಣಸಿದ್ಧೇಶ್ವರರ ಅನುಗ್ರಹಕ್ಕಾಗಿ ಅವರ ಆದೇಶದಂತೆ ಇಲ್ಲಿ ನೆಲೆಸಿದಳೆಂದು ಹೇಳುತ್ತಾರೆ. ಈಕೆಯನ್ನು ‘ರೇವಮ್ಮ’ ಎಂತಲೂ ಕರೆಯುತ್ತಾರೆ. ಬೆಟ್ಟದ ಮುಖ್ಯಭಾಗದಲ್ಲಿ ಗುಹಾಂತರ ದೇವಾಲಯವಿದ್ದು, ದೇವಾಲಯದಲ್ಲಿ ಸುಮಾರು ಅರ್ಧ ಅಡಿಯಷ್ಟು ಎತ್ತರದ ಉದ್ಭವವಾದದ್ದೆಂದು ಹೇಳಲಾಗುವ ರೇವಣಸಿದ್ದೇಶ್ವರರ ಶಿಲಾಲಿಂಗವಿದೆ. ದೇವಸ್ಥಾನದ ಪಕ್ಕದಲ್ಲಿ ನೀರಿನ ದೊಣೆ ಇದ್ದು, ಇದರಲ್ಲಿ ಎಲ್ಲಾ ಕಾಲದಲ್ಲಿ ನೀರಿರುತ್ತದೆ ಎಂದು ಪ್ರಮಾಣಿತ ಸತ್ಯವಾಗಿಯೂ ಕಂಡು ಬರುತ್ತದೆ ಎನ್ನುತ್ತಾರೆ ಸಾಹಿತಿ ಡಾ.ಎಲ್.ಸಿ. ರಾಜು.

ಬೆಟ್ಟ ಹತ್ತುವ ಪ್ರಾರಂಭದಲ್ಲಿ ಎಡದ ಕಡೆ ಗಣಪತಿ ಮತ್ತು ಬಲದ ಕಡೆ ರೇವಣಸಿದ್ಧೇಶ್ವರರ ಪಾದಗಳಿವೆ. ಕೆಲವು ಮೆಟ್ಟಿಲುಗಳನ್ನು ಹತ್ತಿದರೆ ಬಲಭಾಗದ ಬಂಡೆಯ ಮೇಲೆ ರಾಜನೊಬ್ಬನ ವಿಗ್ರಹವಿದೆ. ರೇವಣಸಿದ್ಧೇಶ್ವರರ ಪರಮಭಕ್ತನಾದ ತೆಂಗಿನಕಲ್ಲು ರಾಜನ ವಿಗ್ರಹವೆಂದು ಇದನ್ನು ಗುರುತಿಸಲಾಗುತ್ತಿದೆ. ರೇವಣಸಿದ್ಧರ ಅಪೇಕ್ಷೆಯ ಮೇರೆಗೆ ಬೆಟ್ಟಕ್ಕೆ ಮೆಟ್ಟಿಲುಗಳು ಮತ್ತು ದೇವಾಲಯಗಳನ್ನು ಕಟ್ಟಿಸಿಕೊಟ್ಟವನು ಈತನೇ ಎಂದು ಹೇಳಲಾಗುತ್ತದೆ. ತೆಂಗಿನಕಲ್ಲಿನ ರಾಜನ ವಿಗ್ರಹಕ್ಕೂ ಈಗ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಹಾಭಾರತ ಕಾಲದ ನಂಟೂ ಈ ಬೆಟ್ಟಕ್ಕಿರುವಂತೆ ತೋರುತ್ತದೆ. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಈ ಪ್ರದೇಶದಲ್ಲೂ ಕೆಲಕಾಲ ವಾಸ ಮಾಡಿದ್ದರಂತೆ. ಆ ಸಂದರ್ಭದಲ್ಲಿ ಭೀಮನು ಬೆಟ್ಟದ ಮೇಲೆ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸಿದುದರಿಂದ ಈ ಬೆಟ್ಟಕ್ಕೆ ‘ಭೀಮೇಶ್ವರ ಬೆಟ್ಟ’ ಎಂದ ಹೆಸರೂ ಸಹ ಬಂತೆಂಬ ಪ್ರತೀತಿ ಇದೆ ಎಂದರು.

ರಾಜ್ಯಾದ್ಯಂತ ಇರುವ ರೇವಣಸಿದ್ಧೇಶ್ವರರ 85 ನೆಲೆಗಳಲ್ಲಿ ಅವ್ವೇರಹಳ್ಳಿ ಗ್ರಾಮದ ವ್ಯಾಪ್ತಿಗೆ ಬರುವ ರೇವಣಸಿದ್ದೇಶ್ವರರ ನೆಲೆ ಪ್ರಮುಖವಾದುದಾಗಿದೆ. ಈ ಸ್ಥಳವು ಪೌರಾಣಿಕವಾಗಿ ರೇವಣಸಿದ್ಧರು 1400 ವರ್ಷಗಳ ಹಿಂದೆ ಬಂದಿದ್ದರೆಂದು 700 ವರ್ಷಗಳು ಇಲ್ಲಿಯೇ ತಪಸ್ಸಿಗೆ ಕುಳಿತಿದ್ದರು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಜನಪದರು ರೇವಣಸಿದ್ಧರನ್ನು ‘ದೊಡ್ಡಯ್ಯ’ ಎಂದು ಅವರ ಮಗ ರುದ್ರಮುನಿಯನ್ನು ‘ಚಿಕ್ಕಯ್ಯ’ ಎಂದು ಕರೆಯುವುದು ಪ್ರಚಲಿತವಾಗಿದೆ.

ಇಲ್ಲಿನ ರೇಣುಕಾಂಭ ರೇವಣಸಿದ್ಧರ ಪರಮಭಕ್ತೆಯಾಗಿದ್ದಳು. ಈಕೆಯ ತಾಯಿ ಗುನ್ನೂರಿನ ಮಾಯಾದೇವಿ ಎಂಬ ನಂಬಿಕೆ ಇದೆ. ರೇವಣಸಿದ್ಧರ ಜತೆಯಲ್ಲಿ ಕೊಲ್ಲಿಪಾಕಿಯಿಂದ ಬಂದು ಇಲ್ಲಿಗೆ ನೆಲೆಸಿದರು. ರೇಣುಕಾಂಬೆಯನ್ನು ‘ತೇರಮ್ಮ’ ಎಂತಲೂ ಇಲ್ಲಿನವರು ಕರೆಯುತ್ತಾರೆ.

ಅವ್ವೇರಹಳ್ಳಿಯ ಬೆಟ್ಟದಲ್ಲಿರುವ ಶಾಸನದ ಉಲ್ಲೇಖದನ್ವಯ ಇಲ್ಲಿನ ಭೀಮೇಶ್ವರ ದೇವಾಲಯವನ್ನು ಸ್ಥಾನಿಕ ಚನ್ನಬಸಪ್ಪನ ಸಹೋದರ ವೀರಣ್ಣ ಚನ್ನರುದ್ರಯ್ಯ ನಿರ್ಮಿಸಿದರು. ಸಂಕಲಗರೆಯ ತಿಮ್ಮಯ್ಯ ದೇಗುಲ ನಿರ್ಮಾಣದಲ್ಲಿ ಕೈ ಜೋಡಿಸಿ ಪೂರ್ತಿಗೊಳಿಸಿದನು. ಇಲ್ಲಿ ತಮಿಳು ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನವು ವಿಜಯನಗರ ಕಾಲಕ್ಕೆ ಸೇರಿದ್ದು, ಇದರಲ್ಲಿ ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳನ್ನು ನಿರ್ಮಿಸಿದ ಮಾಹಿತಿ ಇದೆ ಎಂದರು.

ತೆಂಗಿನಕಲ್ಲಿನ ಪಾಳೇಗಾರ ಕಾಟಯ್ಯ ಈ ಸ್ಥಳವನ್ನು ಅಭಿವೃದ್ಧಿಗೊಳಿಸಿದ. ಅಂದಿನಿಂದ ಇಲ್ಲಿ ರೇವಣಸಿದ್ಧೇಶ್ವರರ ಜಾತ್ರೆ,ಉತ್ಸವಗಳು ತಪ್ಪದೇ ನಡೆದುಕೊಂಡು ಬರುತ್ತಿವೆ. ಇಡೀ ದಕ್ಷಿಣ ಭಾರತದ ರೇವಣಸಿದ್ಧೇಶ್ವರರ ಜಾತ್ರೆಗಳಲ್ಲಿ ಅತ್ಯಂತ ದೊಡ್ಡ ಜಾತ್ರೆ ಇಲ್ಲಿಯೇ ನಡೆಯುವುದು. ಸಾವಿರಾರು ಜನ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಇದು ವೈಶಾಖ ಪೂರ್ಣಿಮೆಯ ಹಿಂದಿನ ದಿನ ಜರುಗುತ್ತದೆ.

ರೇವಣಸಿದ್ಧರ ಬೆಟ್ಟ ಪ್ರಾಕೃತಿಕವಾಗಿ ದಕ್ಷಿಣ ಕರ್ನಾಟಕದ ಏಕಶಿಲಾ ಬೆಟ್ಟಗಳಲ್ಲಿ ಒಂದು. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು, ಪ್ರವಾಸಿಗರು, ಚಾರಣಿಗರು ಭೇಟಿ ನೀಡುತ್ತಾರೆ.

ಶ್ರೀಮಠ: ಬೆಟ್ಟದ ತಳದಲ್ಲಿ ರೇವಣಸಿದ್ದೇಶ್ವರ ಸ್ವಾಮಿ ದಾಸೋಹ ಮಠವನ್ನು 1890ರಲ್ಲಿ ಸ್ಥಾಪನೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ದಾಸೋಹವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಠದ ಹಿರಿಯ ಸ್ವಾಮೀಜಿ ಬಸಲಿಂಗರಾಜ ಶಿವಾಚಾರ್ಯ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಮಠಕ್ಕೆ ಮೊದಲು ಮುದ್ದುಬಸಲಿಂಗರಾಜ ಸ್ವಾಮೀಜಿ, ಚನ್ನಬಸವಲಿಂಗರಾಜ ಸ್ವಾಮೀಜಿ, ಈಗ ರಾಜಶೇಖರ ಶಿವಾಚಾರ್ಯರು ಕಿರಿಯ ಸ್ವಾಮೀಜಿಯಾಗಿದ್ದಾರೆ.

*ರೇವಣಸಿದ್ದೇಶ್ವರರ ರಥೋತ್ಸವಕ್ಕೆ ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಗ್ರಾ.ಪಂ. ವತಿಯಿಂದ ಅವರಿಗೆ ಅವಶ್ಯವಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ
–ಸವಿತಾ ದೇವರಾಜು
ಅಧ್ಯಕ್ಷೆ, ಹುಲಿಕೆರೆ–ಗುನ್ನೂರು ಗ್ರಾ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT