ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕಂದಾಯ ಭವನಕ್ಕೆ ಮತ್ತೆ ಕಳೆ

Published 2 ಜನವರಿ 2024, 5:19 IST
Last Updated 2 ಜನವರಿ 2024, 5:19 IST
ಅಕ್ಷರ ಗಾತ್ರ

ರಾಮನಗರ: ನಗರದ ಹೃದಯಭಾಗದಲ್ಲಿರುವ ಕಂದಾಯ ಭವನಕ್ಕೆ ಸದ್ಯದಲ್ಲೇ ಮತ್ತೆ ಕಳೆ ಬರಲಿದೆ. ಹಳೆ ಜಿಲ್ಲಾಧಿಕಾರಿ ಕಚೇರಿಯೂ ಆಗಿದ್ದ ಎಸ್‌.ಪಿ ಕಚೇರಿ ವೃತ್ತದಲ್ಲಿರುವ ಈ ಭವನವು ಹಿಂದಿನಂತೆ ಮತ್ತೆ ಜನಸೇವೆಗೆ ಮುಕ್ತವಾಗಲಿದೆ.

ಹೌದು, ಕೆಲ ವರ್ಷಗಳಿಂದ ಪಾಳು ಬಿದ್ದಂತಿದ್ದ ಕಂದಾಯ ಭವನಕ್ಕೆ ವಿವಿಧ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲಾಡಳಿತ ಈ ಕ್ರಮದಿಂದಾಗಿ, ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿದ್ದ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿಗಳ ಬಾಡಿಗೆ ಮೊತ್ತವೂ ಉಳಿತಾಯವಾಗಲಿದೆ. ನಗರದ ಒಂದೊಂದು ಮೂಲೆಯಲ್ಲಿದ್ದ ಮೂಲಸೌಕರ್ಯವಿಲ್ಲದ ಈ ಖಾಸಗಿ ಕಟ್ಟಡಗಳಿಗೆ ಜನ ಇನ್ನು ಮುಂದೆ ಅಲೆಯುವುದು ಸಹ ತಪ್ಪಲಿದೆ.

7 ವರ್ಷದಿಂದ ಖಾಲಿ: ರಾಮನಗರವು ಜಿಲ್ಲೆಯಾಗಿ ಘೋಷಣೆಯಾದ ಬಳಿಕ ನಿರ್ಮಾಣವಾಗಿದ್ದ ಕಂದಾಯ ಭವನದಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಇದ್ದವು. 2016ರಲ್ಲಿ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಎದುರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣವಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಬಹುತೇಕ ಕಚೇರಿಗಳು ಅಲ್ಲಿಗೆ ಸ್ಥಳಾಂತರವಾಗಿದ್ದವು. ಅಂದಿನಿಂದ ಕಟ್ಟಡ ಖಾಲಿ ಬಿದ್ದಿತ್ತು.

ರಾಮನಗರಕ್ಕೆ ಮಂಜೂರಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಕಚೇರಿಯನ್ನು ತಾತ್ಕಾಲಿಕವಾಗಿ ಆರಂಭಿಸುವ ಸಲುವಾಗಿ, 2017ರ ಮಾರ್ಚ್‌ 19ರಂದು ವಿಶ್ವವಿದ್ಯಾಲಯಕ್ಕೆ ಅಧಿಕೃತವಾಗಿ ಕಟ್ಟಡವನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ, ವಿವಿಧ ಕಾರಣಗಳಿಗಾಗಿ ಕಚೇರಿ ಶುರುವಾಗಲಿಲ್ಲ.

ಕೋವಿಡ್ ಆಸ್ಪತ್ರೆಯಾಗಿತ್ತು: ಇದಾದ 3 ವರ್ಷ ಖಾಲಿ ಇದ್ದ ಕಟ್ಟಡವನ್ನು, 2020ರಲ್ಲಿ ಕೋವಿಡ್-19 ರೆಫೆರೆಲ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿತ್ತು. ಕೋವಿಡ್ ಅಬ್ಬರ ಸಂಪೂರ್ಣ ಇಳಿಮುಖವಾಗುವವರೆಗೆ ಕಟ್ಟಡವು ಆಸ್ಪತ್ರೆಯಾಗಿತ್ತು.

ನಂತರ, ಯಥಾರೀತಿಯಲ್ಲಿ ಖಾಲಿ ಉಳಿದಿದ್ದ ಕಟ್ಟಡವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಖಾಸಗಿ ಕಟ್ಟಡದಲ್ಲಿರುವ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕೆಂಬ ಒತ್ತಾಯ ಕೇಳಿ ಬರುತ್ತಲೇ ಇತ್ತು. ಕಡೆಗೂ ಜಿಲ್ಲಾಡಳಿತಕ್ಕೆ ಆ ಕೂಗು ಮುಟ್ಟಿದೆ.

ಒಂದೇ ಸೂರಿನಡಿ ಸೇವೆ: ‘ಸರ್ಕಾರಿ ಕಚೇರಿಗಳು ಒಂದೊಂದು ದಿಕ್ಕಿನಲ್ಲಿದ್ದರೆ ಜನರಿಗೂ ಓಡಾಡಲು ತೊಂದರೆಯಾಗುತ್ತದೆ. ಹಾಗಾಗಿ, ಕೆಲ ವರ್ಷಗಳಿಂದ ಖಾಲಿ ಇದ್ದ ಕಂದಾಯ ಭವನಕ್ಕೆ ಬಾಡಿಗೆ ಕಟ್ಟಡಗಳಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸುತ್ತಿದ್ದೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಚೇರಿಗಳ ಸ್ಥಳಾಂತರದ ಹಿನ್ನೆಲೆಯಲ್ಲಿ ಕಂದಾಯ ಭವನದ ಸ್ವಚ್ಛತೆ ಕೆಲಸ ಬಹುತೇಕ ಪೂರ್ಣಗೊಂಡಿದೆ. ಸಂಬಂಧಪಟ್ಟ ಇಲಾಖೆಯವರು ತಮಗೆ ಹಂಚಿಕೆಯಾಗಿರುವ ಜಾಗದಲ್ಲಿ ಕಚೇರಿ ತೆರೆಯಬೇಕು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಬೇಗನೆ ಮುಗಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಭವನದಲ್ಲಿರುವ 37 ಕಚೇರಿ ಕೊಠಡಿಗಳ ಪೈಕಿ ಇದುವರೆಗೆ 21 ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಬಾಡಿಗೆ ಕಚೇರಿಯಲ್ಲಿರುವ ಇನ್ನೂ ಕೆಲ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರಿ ಕಟ್ಟಡವಿರುವಾಗ ಸರಿಯಾದ ಮೂಲಸೌಕರ್ಯವಿಲ್ಲದ ಮತ್ತು ಜನರ ಓಡಾಟಕ್ಕೆ ಅನಾನುಕೂಲವಾಗುವ ಖಾಸಗಿ ಕಟ್ಟಡದಲ್ಲಿ ಕಚೇರಿಗಳು ಇರುವುದು ಬೇಡ ಎಂಬುದು ಜಿಲ್ಲಾಡಳಿತದ ಉದ್ದೇಶವಾಗಿದೆ’ ಎಂದರು.

ಖಾಸಗಿ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳು ಕಂದಾಯ ಭವನಕ್ಕೆ ಸ್ಥಳಾಂತರವಾಗಲು ಈಗಾಗಲೇ ಅನುಮತಿ ಕೊಟ್ಟಿದ್ದೇವೆ. ಜನವರಿ ಅಂತ್ಯದೊಳಗೆ ಕಚೇರಿಗಳು ಭವನದಲ್ಲಿ ಶುರುವಾಗಲಿವೆ ಬಿ.ಸಿ. ಶಿವಾನಂದ ಮೂರ್ತಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಮನಗರ

‘ಹಣದ ಜೊತೆಗೆ ಕಟ್ಟಡವೂ ಉಳಿಯಲಿದೆ’

‘ಕಂದಾಯ ಭವನ ಆರಂಭದಿಂದಾಗಿ ಖಾಸಗಿ ಕಟ್ಟಡಗಳಿಗೆ ತೆರಬೇಕಾದ ಬಾಡಿಗೆ ಮೊತ್ತದ ಜೊತೆಗೆ ಪಾಳು ಬಿದ್ದಿದ್ದ ಕಟ್ಟಡವೂ ಉಳಿಯಲಿದೆ. ಇದರೊಂದಿಗೆ ಅರ್ಧ ಕಿಲೋಮೀಟರ್ ಅಂತರದ ಒಂದೇ ಮಾರ್ಗದಲ್ಲಿ ಕಂದಾಯ ಭವನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಜಿಲ್ಲಾಸ್ಪತ್ರೆ ಜಿಲ್ಲಾ ಪಂಚಾಯಿತಿ ಕಟ್ಟಡಗಳು ನೆಲೆಸಿದಂತಾಗಿದೆ. ಇದರಿಂದ ಜನರಿಗೂ ಕೆಲಸ –ಕಾರ್ಯ ನಿಮಿತ್ತ ಕಚೇರಿಗಳಿಗೆ ಬಂದು ಹೋಗಲು ಅನುಕೂಲವಾಗಲಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT