ಬುಧವಾರ, ಜನವರಿ 22, 2020
21 °C

ರಸ್ತೆ ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಹಲವೆಡೆ ಕಳಪೆ ರಸ್ತೆ ಕಾಮಗಾರಿ ಮಾಡಲಾಗಿದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ ಅವರು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಆರಂಭದಲ್ಲಿಯೆ ಸಿಡಿಮಿಡಿಗೊಂಡ ಅಧ್ಯಕ್ಷರು, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರಸ್ತೆ ಕಾಮಗಾರಿಗಳು ಕಳಪೆಯಿಂದ ನಡೆಯುತ್ತಿವೆ. ಇದರ ಬಗ್ಗೆ ಸಾರ್ಜನಿಕರ ದೂರುಗಳು ಹೆಚ್ಚಾಗುತ್ತಿವೆ ಎಂದರು.

ಲೋಕೋಪಯೋಗಿ ಇಲಾಖೆಯ ಪ್ರಗತಿ ವರದಿಯನ್ನು ಇಲಾಖೆಯ ಹಿರಿಯ ಎಂಜಿನಿಯರ್ ನಾರಾಯಣಗೌಡ ಒಪ್ಪಿಸುತ್ತಿದ್ದಂತೆ, ಮಧ್ಯ ಪ್ರವೇಶ ಮಾಡಿದ ರಾಜಣ್ಣ ಅವರು ಮೈಲನಾಯ್ಕನ ಹೊಸಹಳ್ಳಿಯಿಂದ ಚಿಕ್ಕೇನಹಳ್ಳಿವರೆಗಿನ ರಸ್ತೆ ಕಾಮಗಾರಿಯ ವಿಚಾರದಲ್ಲಿ ಸಂಪೂರ್ಣವಾಗಿ ತರಾಟೆಗೆ ತಗೆದುಕೊಂಡರು.

ರಸ್ತೆಯ ಅವ್ಯವಸ್ಥೆಯಿಂದ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಹಲವಾರು ರೀತಿಯ ಸಮಸ್ಯೆಗಳನ್ನು ಸೃಷ್ಟಿಮಾಡಿದೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ನಿಮ್ಮ ಇಲಾಖೆಯ ಎಇಇ ಅವರು ಸಭೆಗೆ ಬರಲಿ ಎಂದು ಹೇಳಿ ಎಇಇಗೆ ಕರೆ ಮಾಡಿ ಸಭೆಗೆ ಬರುವಂತೆ ತಿಳಿಸಿದರು. ನಂತರ ಇತದರೆಡೆ ನಡೆಸದಿರುವ ರಸ್ತೆ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು. ಆದರೆ ಎಇಇ ಮಾತ್ರ ಸಭೆ ಮುಗಿದರೂ ಸಭೆಗೆ ಬರಲೇ ಇಲ್ಲ. ಇದಕ್ಕೆ ಅಧ್ಯಕ್ಷರು ಅವರಿಗೆ ನೋಟೀಸ್ ನೀಡುವುದಾಗಿ ತಿಳಿಸಿದರು.

ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ಹೋಗುವ ರಸ್ತೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಲೋಕಪಯೋಗಿ ಇಲಾಖೆ ವತಿಯಿಂದ ರಸ್ತೆಗೆ ಡಾಂಬರು ಮಾಡಿಕೊಡಲಾಗಿದೆ. ಇದರ ಮರ್ಮವೇನು, ಇದಕ್ಕೆ ಉತ್ತರಿಸಿ ಎಂದು ಎಂಜಿನಿಯರ್ ನಾರಾಯಣಗೌಡ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಆದರೆ ಅವರು ಉತ್ತರ ನೀಡಲು ವಿಫಲರಾದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸಾಕಮಾದಮ್ಮ, ಇಒ ಚಂದ್ರು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು