ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಟಿಇ ತಿದ್ದುಪಡಿ: ಸುಪ್ರೀಂ ಕೋರ್ಟ್‌ನಲ್ಲಿ ದಾವೆ’

ಕುಮಾರಸ್ವಾಮಿ ನಿರ್ಧಾರದಿಂದ ಬಡ ಮಕ್ಕಳಿಗೆ ಅನ್ಯಾಯ ಆರೋಪ
Last Updated 20 ನವೆಂಬರ್ 2019, 17:11 IST
ಅಕ್ಷರ ಗಾತ್ರ

ರಾಮನಗರ: ‘ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಖಾಸಗಿ ಶಾಲೆ ಆಡಳಿತ ಮಂಡಳಿಗಳ ಲಾಬಿಗೆ ಮಣಿದು ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದರು. ಇದರಿಂದ ರಾಜ್ಯದ 1.5 ಲಕ್ಷ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ’ ಎಂದು ಆರ್‌ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್ ಅಸೋಸಿಯೇಶನ್ ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಯೋಗಾನಂದ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಂದಿನ ಸರ್ಕಾರ ಆರ್‌ಟಿಇ ಕಾಯ್ದೆ ನಿಯಮ 4ಕ್ಕೆ ತಂದಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಆರ್‌ಟಿಇ ಕಲಂ 12(1)ಸಿ ಅನ್ನು ಮರುಚಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಎಸ್.ಸುರೇಶ್ ಅವರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಇದಕ್ಕೆ ಅವರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದರು.

‘ತಿದ್ದುಪಡಿಯನ್ನು ಪ್ರಶ್ನಿಸಿ ನಮ್ಮ ಸಂಘಟನೆ ವತಿಯಿಂದ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ವಾದ ಆಲಿಸಿದ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು. ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆಯನ್ನು ಹೂಡಿದ್ದೇವೆ. ಕೋಟ್ ಅರ್ಜಿಯನ್ನು ತೆಗೆದುಕೊಂಡಿದ್ದು, ಈ ಕುರಿತು ಸರ್ಕಾರಕ್ಕೆ ನೋಟಿಸ್ ನೀಡಿದೆ’ ಎಂದು ತಿಳಿಸಿದರು.

‘ 2012–-13 ನೇ ಸಾಲಿನಿಂದ 2018–-19 ತನಕ ರಾಜ್ಯದಲ್ಲಿ ಸುಮಾರು 6.50 ಲಕ್ಷ ವಿದ್ಯಾರ್ಥಿಗಳು ಈ ಕಾಯ್ದೆಯ ಫಲಾನುಭವಿಗಳಾಗಿದ್ದು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ, ದುರ್ಬಲ ವರ್ಗದ ಮಕ್ಕಳು ಖಾಸಗಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕೆಂಬುದು ಇದರ ಉದ್ದೇಶ. ಆದರೆ, ಮೈತ್ರಿ ಸರ್ಕಾರ ಅವೈಜ್ಞಾನಿವಾಗಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮೂಲ ಉದ್ದೇಶಕ್ಕೆ ದಕ್ಕೆ ತಂದಿದೆ ಎಂದರು.

ಆರ್‌ಟಿಇನಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತದೆ ಎಂಬುದೇ ಉದ್ದೇಶವಾಗಿದ್ದರೇ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿ, ದೆಹಲಿ, ಪಂಜಾಬ್, ಕೇರಳ ರಾಜ್ಯಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುತ್ತಾರೆ. ಅದೇ ರೀತಿ, ರಾಜ್ಯದಲ್ಲಿ ಶಿಕ್ಷಣ ನೀಡಲಿ. ಆ ಸಮಯಕ್ಕೆ ಕಾಯ್ದೆಗೆ ತಿದ್ದುಪಡಿ ತಂದರೇ, ನಮ್ಮದು ಯಾವುದೇ ಅಭ್ಯಂತರ ಇಲ್ಲ ಎಂದು ತಿಳಿಸಿದರು.

ಉಪ ಚುನಾವಣೆ ಮುಗಿದ ತಕ್ಷಣ ನಿಯೋಗದೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟವರನ್ನು ಭೇಟಿ ಮಾಡುತ್ತೇವೆ. ಸರಿಯಾದ ಸ್ಪಂದನೆ ಸಿಗದಿದ್ದರೆ ಸಂಘಟನೆ ವತಿಯಿಂದ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಸಂಘಟನೆಯ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭರಶೆಟ್ಟಿ, ಕಾರ್ಯದರ್ಶಿ ಗುರುನಾಥರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT