ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ ಸಮುದಾಯದವರು ಭಾರತೀಯ ಸಂಸ್ಕೃತಿ ಉಳಿಸಬೇಕು

ಚನ್ನಪಟ್ಟಣ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಉದ್ಘಾಟನೆ
Last Updated 2 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚನ್ನಪಟ್ಟಣ: ಬ್ರಾಹ್ಮಣ ಸಮುದಾಯ ಸಂಘಟಿತರಾಗಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಉಳಿಸಬೇಕು ಎಂದು ಉಡುಪಿ ಪುತ್ತಿಗೆ ಮಠದ ಪೀಠಾಧ್ಯಕ್ಷ ಸುಗುಣೇಂದ್ರತೀರ್ಥ ಶ್ರೀಪಾದರು ಕರೆ ನೀಡಿದರು.

ಪಟ್ಟಣದ ಕೋಟೆ ರಾಘವೇಂದ್ರ ಮಠದಲ್ಲಿ ಭಾನುವಾರ ನಡೆದ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಉದ್ಘಾಟನೆ ನೆರವೇರಿಸಿಅವರು ಮಾತನಾಡಿದರು.

‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಂಸ್ಕೃತಿ ಒಮ್ಮೆ ನಾಶವಾದರೆ ಮತ್ತೆ ಕಟ್ಟಲು ಸಾಧ್ಯವಾಗುವುದಿಲ್ಲ. ನಿಮ್ಮ ಮಕ್ಕಳಿಗೆ ಲೌಖಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ನೀಡಬೇಕು. ಬ್ರಾಹ್ಮಣರ ಸಾತ್ವಿಕ ಜೀವನ ಶೈಲಿ, ಸಸ್ಯಾಹಾರವನ್ನು ಇಂದು ಇಡೀ ಜಗತ್ತು ಅನುಕರಿಸುತ್ತಿದೆ. ನಮ್ಮ ಪರಂಪರೆ ಮತ್ತು ಆಚರಣೆಗಳನ್ನು ಇತರರು ಗೌರವಿಸುತ್ತಿರುವಾಗ ನಾವು ಅದನ್ನು ಹೆಚ್ಚಿಸುವ ಕೆಲಸ ಮಾಡಬೇಕು’ ಎಂದರು.

ಕೂಡಲಿ ಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಮಾತನಾಡಿ, ‘ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ ಎಂದು ವೇದಗಳು ಹೇಳಿವೆ. ಅದರಂತೆ ಬ್ರಾಹ್ಮಣ ಸಮುದಾಯ ಸಂಘಟಿತರಾಗುವ ಮೂಲಕ ಧರ್ಮದ ಆಚರಣೆ ಮತ್ತು ರಕ್ಷಣೆಯ ಹೊಣೆಯನ್ನು ಹೊರಬೇಕು. ಬ್ರಾಹ್ಮಣರು ತಮ್ಮ ಧರ್ಮ ಮತ್ತು ಆಚರಣೆಗಳಿಗೆ ಚ್ಯುತಿಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಮೇಲುಕೋಟೆ ಯದುಗಿರಿ ಯತಿರಾಜ ಮಠದ ಯತಿರಾಜ ಜೀಯರ್ ಸ್ವಾಮೀಜಿ ಮಾತನಾಡಿ, ‘ಬ್ರಾಹ್ಮಣ ಎಂಬುದು ಧರ್ಮದ ಸಂಕೇತ. ಧರ್ಮ ಮತ್ತು ಬ್ರಾಹ್ಮಣ ಒಂದಕ್ಕೊಂದು ಪೂರಕವಾಗಿದ್ದು, ಧರ್ಮ ಉಳಿದರೆ ಮಾತ್ರ ಬ್ರಾಹ್ಮಣ ಉಳಿಯಲು ಸಾಧ್ಯ. ಧರ್ಮವನ್ನು ಉಳಿಸುವ ಮೂಲಕ ಲೋಕದ ಉದ್ಧಾರಕ್ಕಾಗಿ ಶ್ರಮಿಸುವ ಕೆಲಸವನ್ನು ಬ್ರಾಹ್ಮಣರು ಮಾಡಬೇಕು’ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟ ನಾರಾಯಣ್ ಮಾತನಾಡಿ, ‘ರಾಜ್ಯದಲ್ಲಿ 35 ಲಕ್ಷದಷ್ಟಿರುವ ಬ್ರಾಹ್ಮಣ ಸಮುದಾಯ ಒಗ್ಗಟ್ಟಿಲ್ಲದ ಕಾರಣ ಸಾಕಷ್ಟು ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ನಾವೆಲ್ಲರು ಒಗ್ಗೂಡಿದಾಗ ರಾಜಕೀಯ ಮತ್ತು ಸಾಮಾಜಿಕವಾಗಿ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ , ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಕ್ರಾಂತಿ ಟ್ರಸ್ಟ್ ಸಂಸ್ಥಾಪಕ ಅನಿಲ್ ಕುಮಾರ್ ಜಮದಗ್ನಿ ಮತ್ತು ಹಿರಿಯ ಮುಖಂಡ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್, ಉಪಾಧ್ಯಕ್ಷ ಎಂ.ವಿ.ಶಂಕರನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ರಾಮ ಪ್ರಸಾದ್, ಪತ್ರಕರ್ತ ವೇಣುಗೋಪಾಲಕೃಷ್ಣ, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎನ್.ರಾಮಪ್ರಸಾದ್, ಕಾರ್ಯದರ್ಶಿ ರಾಘವೇಂದ್ರ ಮಯ್ಯ, ಖಜಾಂಚಿ ಪಿ.ಹೊಯ್ಸಳ, ಉಪಾಧ್ಯಕ್ಷ ರವಿಕುಮಾರ್, ಜಂಟಿ ಕಾರ್ಯದರ್ಶಿ ವೆಂಕಟೇಶಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾದ ಡಾ.ಮಧುಸೂಧನಾಚಾರ್ಯ ಜೋಷಿ ಮತ್ತು ನಾಗೇಂದ್ರ. ನಿರ್ದೇಶಕರಾದ ಎಸ್.ವೆಂಕಟೇಶಮೂರ್ತಿ, ಸು.ನಾ.ನಂದಕುಮಾರ್, ಎಂ.ಎಸ್.ನರಸಿಂಹ, ಕೆ.ವಿ.ಮಧುಸೂದನ್, ಎನ್.ಮೋಹನ್, ಎಸ್.ಮಧುಸೂದನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT