ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಗೋಮಾಳ ಉಳಿವಿಗೆ ಆಗ್ರಹ

ಸೋಲೂರು ಹೋಬಳಿ ಮುಖಂಡರು, ಗ್ರಾಮಸ್ಥರ ಪ್ರತಿಭಟನೆ
Last Updated 5 ಜುಲೈ 2022, 4:24 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಕನಕೇನಹಳ್ಳಿಯಲ್ಲಿ ಮಾಜಿ ಸೈನಿಕರೊಬ್ಬರಿಗೆ ನೀಡಿರುವ 4.38 ಎಕರೆ ಭೂಮಿ ಕಬಳಿಸಲು ಅಕ್ರಮವಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸೋಲೂರು ಹೋಬಳಿ ಮುಖಂಡರು ಮತ್ತು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

‘ಗ್ರಾಮದ 7 ಎಕರೆ ಗೋಮಾಳದಲ್ಲಿ ವಸತಿ ರಹಿತರಿಗೆ ನಿವೇಶನ ನೀಡಲು ತೀರ್ಮಾನಿಸಲಾಗಿತ್ತು. ಇದೇ ಸ್ಥಳದಲ್ಲಿ ಮಾಜಿ ಸೈನಿಕರೊಬ್ಬರಿಗೆ 4.38 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಯೋಧನ ಪತ್ನಿ ಶಿರೀನ್‌ ತಾಜ್‌ ಅವರಿಂದ ಭೂಮಿ ಖರೀದಿಸಿರುವುದಾಗಿ ಹೇಳುತ್ತಿರುವಬೆಂಗಳೂರಿನ ವ್ಯಕ್ತಿಯೊಬ್ಬರು ಈ ಭೂಮಿಗೆ ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕೆ ನಮ್ಮದೇನೂ ತಕರಾರಿಲ್ಲ. ಆದರೆ, ಉಳಿದಿರುವ ಗೋಮಾಳ ಜಮೀನಿಗೂ ಅಕ್ರಮವಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್‌.ಗೌಡ ಹೇಳಿದರು.

ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಲವು ವ್ಯಕ್ತಿಗಳು ಸರ್ಕಾರಿ ಭೂಮಿ ಕಬಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗೀತಾ ಗಂಗರಂಗಯ್ಯ ಮಾತನಾಡಿ, ‘ಸ್ಥಳೀಯರಿಗೆ ಗೋಮಾಳ ಬಳಸಿಕೊಳ್ಳುವ ಹಕ್ಕಿದೆ. ಗ್ರಾಮೀಣರ ಕುರಿಮೇಕೆ, ದನ ಮೇಯಿಸಲು ಮತ್ತು ಇತರೆ ಸಾಮುದಾಯಿಕ ಕೆಲಸಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ. ತಹಶೀಲ್ದಾರರಿಗೆ ಗೋಮಾಳ ಉಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗೋಮಾಳ ರಕ್ಷಿಸದಿದ್ದರೆ ತಹಶೀಲ್ದಾರ್‌ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿ.ಪಂ.ಮಾಜಿ ಸದಸ್ಯ ರಂಗಸ್ವಾಮಿ, ಗ್ರಾ,ಪಂ.ಮಾಜಿ ಸದಸ್ಯ ಶರ್ಮ, ಗ್ರಾಮಸ್ಥರಾದ ಕರೀಂಖಾನ್‌, ಹನುಮಂತರಾಜು, ಜಮೀರ್‌, ಯೂಸಪ್‌, ಹನುಮಯ್ಯ ಇದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಅಧಿಕಾರಿ ನಾರಾಯಣ ಮಾತನಾಡಿ, ‘ಮಾಜಿ ಸೈನಿಕರೊಬ್ಬರಿಗೆ 4.38 ಎಕರೆ ಭೂಮಿ ಮಂಜೂರಾಗಿತ್ತು. ಅವರ ಪತ್ನಿ ಭೂಮಿಯನ್ನು ಬೇರೆಯವರಿಗೆ ಪರಭಾರೆ ಮಾಡಿದ್ದಾರೆ. ಸರ್ವೆ ನಂಬರ್‌ 17ರಲ್ಲಿ ಒಟ್ಟು 11.39 ಎಕರೆ ಗೋಮಾಳದ ಭೂಮಿ ಇದ್ದು, ಪೋಡಿ ಆಗಿಲ್ಲ. ಮುಸ್ಲಿಮರ ಖಬರಸ್ತಾನಕ್ಕೆ 2.05 ಎಕರೆ ಭೂಮಿ ಮೀಸಲಿಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಗೋಮಾಳ ಭೂಮಿಗೆ ಅಕ್ರಮವಾಗಿ ತಡೆಗೋಡೆ ನಿರ್ಮಾಣದ ಬಗ್ಗೆ ತಹಶೀಲ್ದಾರ್‌ ಗಮನಕ್ಕೆ ತಂದು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT