ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಸೌಲಭ್ಯ ಅನ್ಯ ಜಾತಿಗಳ ಪಾಲು

ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಧನಂಜಯ ನಾಯ್ಕ್‌ ಆರೋಪ
Last Updated 27 ಫೆಬ್ರುವರಿ 2020, 13:58 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪಲಾನುಭವಿಗಳಿಗೆ ನೀಡಬೇಕಿದ್ದ ಸರ್ಕಾರಿ ಸವಲತ್ತುಗಳನ್ನು ಅನ್ಯಜಾತಿಯವರಿಗೆ ನೀಡಿ ಶೋಷಿತರಿಗೆ ಅನ್ಯಾಯ ಮಾಡಲಾಗಿದೆ ಎಂದು ತಾಲ್ಲೂಕು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌ ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ರಾಜಕೀಯ ಪಕ್ಷಗಳು ಮತಬ್ಯಾಂಕ್‌ ಆಗಿ ಬಳಸಿಕೊಂಡಿವೆ. ಅಧಿಕಾರಿಗಳು ಕೂಡ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಫಲಾನುಭವಿಗಳಿಗೆ ಸಿಗಬೇಕಿದ್ದ ಸವಲತ್ತುಗಳನ್ನು ಕಾನೂನು ಬಾಹಿರವಾಗಿ ಮೇಲ್ವರ್ಗದವರಿಗೆ ನೀಡಿ ವಂಚಿಸಿದ್ದಾರೆ. ಶೋಷಿತರ ಪಹಣಿ ನೀಡಿ ಕೃಷಿ ಇಲಾಖೆ ವತಿಯಿಂದ ದಲಿತರಿಗೆ ನೀಡಬೇಕಿದ್ದ ಟ್ರ್ಯಾಕ್ಟರ್‌ಗಳನ್ನು ಮೇಲ್ವರ್ಗದ ಪ್ರಭಾವಿಗಳಿಗೆ ನೀಡಲಾಗಿದೆ. ತೋಟಗಾರಿಕೆ, ಸಾಮಾಜಿಕ ಅರಣ್ಯ, ರೇಷ್ಮೆ ಇತರೆ ಇಲಾಖೆಗಳಲ್ಲೂ ಸಹ ದಲಿತರಿಗೆ ಸಿಗಬೇಕಿದ್ದ ಸವಲತ್ತುಗಳನ್ನು ಅನ್ಯಜಾತಿಯವರಿಗೆ ನೀಡಿ ಅಧಿಕಾರಿಗಳು ವಂಚಿಸಿದ್ದಾರೆ.‌ ಗಂಗಾ ಕಲ್ಯಾಣ ಯೋಜನೆಯಡಿ ದಲಿತರ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ ಹಲವು ವರ್ಷಗಳು ಕಳೆದಿದ್ದರೂ ಪಂಪ್‌ ಅಳವಡಿಸಿಲ್ಲ ಎಂದು ದೂರಿದರು.

ಎಚ್‌.ವಿಡಿಎಸ್‌ ಯೋಜನೆಯಡಿ ಟ್ರಾನ್ಸ್‌ಫಾರ್ಮರ್‌ ಅಳವಡಿಸಲು ಶೋಷಿತ ಸಮುದಾಯದ ರೈತರಿಂದ ಹಣ ಪಾವತಿಸಿಕೊಳ್ಳಲಾಗಿದೆ. 32ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿಟ್ಟಿರುವ ವಿಶೇಷ ಘಟಕದ ಅನುದಾನ ಬಳಸಿಕೊಂಡಿಲ್ಲ. ಪ್ರತಿಯೊಂದು ಗ್ರಾಮ ಪಂಚಾಯಿತಿಯಿಂದಲೂ ₹2ಲಕ್ಷ ಹಣ ಸರ್ಕಾರಕ್ಕೆ ವಾಪಸ್‌ ಹೋಗುತ್ತಿದೆ. ವಿಶೇಷ ಘಟಕದ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗುವ ಸ್ಥಿತಿ ಎದುರಾಗಿದೆ. ದಲಿತ ಕಾಲೊನಿಗಳಲ್ಲಿ 50ವರ್ಷಗಳ ಹಿಂದೆ ನಿವೇಶನ ನೀಡಲಾಗಿದ್ದು ಮನೆ ನಿರ್ಮಿಸಿಕೊಳ್ಳಲಾಗಿದೆ. ಇಂದಿಗೂ ದಲಿತರ ಹೆಸರಿಗೆ ಖಾತೆಗಳಾಗಿಲ್ಲ. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳ ಅಧಿಕಾರಿಗಳು ದಲಿತ, ಹಿಂದುಳಿದ ಸಮುದಾಯದವರಿಗೆ ಸವಲತ್ತು ನೀಡುವಲ್ಲಿ ಕಾಳಜಿ ವಹಿಸಿದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.

ಬಿಸಿಎಂ ಮತ್ತು ಎಸ್‌ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಆನ್‌ಲೈನ್‌ ಮೂಲಕ ಅರ್ಜಿ ತುಂಬುವಾಗ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ಸೂಕ್ತ ವಿದ್ಯಾರ್ಥಿ ವೇತನ ಸಿಕ್ಕುತ್ತಿಲ್ಲ. ದಲಿತರ ಬಗ್ಗೆ ಅಧಿಕಾರಿಗಳು ಕೂಡ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್‌ ಮಾತನಾಡಿ, ಸಾಮಾಜಿಕ ನ್ಯಾಯದಂತೆ ಪರಿಶಿಷ್ಟ ಜಾತಿ, ಪಂಗಡದ ಸಮುದಾಯಗಳಿಗೆ ಸಿಗಬೇಕಾದ ಸವಲತ್ತು ನೀಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗೀತಾ ಗಂಗರಂಗಯ್ಯ, ಉಪಾಧ್ಯಕ್ಷ ಅಂಬಿಕಾನರಸಿಂಹಮೂರ್ತಿ, ಸದಸ್ಯರಾದ ಹನುಮಂತರಾಯಪ್ಪ, ನಾರಾಯಣಪ್ಪ, ಸುಗುಣಕಾಮರಾಜ್‌ ಮಾತನಾಡಿದರು. ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರಸ್ವಾಮಿ, ಬಿಸಿಎಂ ಅಧಿಕಾರಿ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT