ಶನಿವಾರ, ಆಗಸ್ಟ್ 20, 2022
21 °C
ದ್ವಿತೀಯ ಪಿಯು, ಎಸ್ಸೆಸ್ಸೆಲ್ಸಿಗೆ ತರಗತಿ: ವಿದ್ಯಾಗಮ ಯೋಜನೆ ಹೊಸರೂಪ

ಶಾಲೆ ಆರಂಭ: ಸಾರ್ವಜನಿಕರ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಹೊಸ ವರ್ಷದಿಂದ ಶಾಲೆ–ಕಾಲೇಜುಗಳ ಬಾಗಿಲು ತೆರೆಯಲಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ.

ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜನವರಿ 1ರಿಂದಲೇ ನಿಯಮಿತ ತರಗತಿಗಳನ್ನು ನಡೆಸುವುದಾಗಿ ಸರ್ಕಾರ ಶನಿವಾರ ಘೋಷಿಸಿದೆ. ಇದರ ಜೊತೆಗೆ 6ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಯೋಜನೆಯು ಜಾರಿಯಾಗಲಿದೆ.

ಸಿದ್ಧತೆ: ಶಾಲೆಗಳ ಆರಂಭಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಸಿದ್ಧತೆ ಆರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 1430 ಶಾಲೆಗಳಿವೆ. ಇವುಗಳಲ್ಲಿ ಅಗತ್ಯವಾದ ಸ್ವಚ್ಚತಾ ಕಾರ್ಯಕ್ರಮಗಳ ಜೊತೆಗೆ ಪರಿಕರಗಳನ್ನೂ ಸಿದ್ಧವಾಗಿಟ್ಟುಕೊಳ್ಳುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಮಕ್ಕಳ ಸುರಕ್ಷತೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ.

ಜನರು ಏನಂತಾರೆ?: ಶೈಕ್ಷಣಿಕ ಚಟುವಟಿಕೆ ಆರಂಭವನ್ನು ಶಿಕ್ಷಣ ವಲಯದ ಜೊತೆಗೆ ಸಾರ್ವಜನಿಕರು ಸ್ವಾಗತ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಬೇಕು ಎನ್ನುವುದು ಅವರ ಸಲಹೆಯಾಗಿದೆ.

‘ಸದ್ಯಕ್ಕೆ ಕೋವಿಡ್ ಭೀತಿ ಕಡಿಮೆ ಆಗಿದೆ. ಹೀಗಾಗಿ ಶಾಲೆಗಳನ್ನು ತೆರೆಯುವ ನಿರ್ಧಾರ ಸ್ವಾಗತಾರ್ಹ. ಆನ್‌ಲೈನ್‌ ತರಗತಿಗಳು ನಡೆದಿದ್ದರೂ ಅವು ಅಷ್ಟು ಪರಿಣಾಮಕಾರಿ ಆಗಿಲ್ಲ. ಇದರಿಂದಾಗಿ ಸಾಕಷ್ಟು ಮಕ್ಕಳು ಶಿಕ್ಷಣದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಶಾಲೆ–ಕಾಲೇಜುಗಳಲ್ಲಿಯೇ ಅಂತರ ಕಾಯ್ದುಕೊಂಡು ತರಗತಿಗಳನ್ನು ನಡೆಸುವುದು ಒಳಿತು’ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದ ಅತಿಮುಖ್ಯ ಘಟ್ಟ. ಹೀಗಾಗಿ ಈ ತರಗತಿಗಳನ್ನು ಮೊದಲಿಗೆ ಆರಂಭಿಸುತ್ತಿರುವುದು ಉತ್ತಮ ನಿರ್ಧಾರ. ಹಾಗೆಯೇ ಸಿಲಬಸ್ ಅನ್ನೂ ಉಳಿದ ಅವಧಿಗೆ ತಕ್ಕಂತೆ ಪರಿಷ್ಕರಣೆ ಮಾಡಬೇಕು’ ಎಂಬುದು ಶಿಕ್ಷಣ ತಜ್ಞರ ಸಲಹೆಯಾಗಿದೆ.

ಶುಲ್ಕ ಪರಿಷ್ಕರಿಸಿ: ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಹೀಗಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ವರ್ಷದ ಶುಲ್ಕದಲ್ಲಿ ಅರ್ಧದಷ್ಟು ವಿನಾಯಿತಿ ನೀಡಬೇಕು. ಈ ಬಗ್ಗೆ ಸರ್ಕಾರವೇ ಗಮನ ಹರಿಸಿ ಶುಲ್ಕ ಪರಿಷ್ಕರಣೆ ಮಾಡಬೇಕು. ಹೆಚ್ಚಿನ ಶುಲ್ಕಕ್ಕೆ ಪೋಷಕರನ್ನು ಒತ್ತಾಯಿಸದಂತೆ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಬೇಕು ಎಂಬುದು ಜನರ ಆಗ್ರಹವಾಗಿದೆ.

***

ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡಿರುವುದು ಸ್ವಾಗತಾರ್ಹ. ಮಕ್ಕಳು ಈಗಾಗಲೇ ಶಿಕ್ಷಣದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ವಿಳಂಬ ಮಾಡಿದರೆ ಅವರ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ
-ಶಂಭುಗೌಡ ನಾಗವಾರ, ರಾಜ್ಯ ಉಪಾಧ್ಯಕ್ಷ, ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ

***

ಶಾಲೆಯತ್ತ ಮಕ್ಕಳು ಮರಳುತ್ತಿರುವುದು ಸಂತಸದ ಸಂಗತಿ. ಮನೆಯಲ್ಲೇ ಬಂಧಿಯಾಗಿದ್ದ ಮಕ್ಕಳು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದೆ ಮುದುಡಿದ ತಾವರೆಯಂತಾಗಿದ್ದರು. ಆನ್‌ಲೈನ್‌ ಶಿಕ್ಷಣ ಪರಿಣಾಮಕಾರಿ ಆಗಿಲ್ಲ
-ಬಿ.ಎಲ್‌. ಚಂದ್ರಶೇಖರ್, ಚಿತ್ರಕಲಾ ಶಿಕ್ಷಕ, ಮಾಗಡಿ

***

ಈಗಾಗಲೇ ಅರ್ಧ ವರ್ಷ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಆನ್‌ಲೈನ್‌ ಶಿಕ್ಷಣ ಅವರಿಗೆ ರುಚಿಸಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಂಡು ಶಾಲೆ ತೆರೆಯುವುದು ಒಳಿತು
-ಕಾಳಯ್ಯ, ಪೋಷಕರು

***

ಶಾಲೆಗಳ ಆರಂಭ ಸ್ವಾಗತಾರ್ಹ. ಆದರೆ ಖಾಸಗಿ ಶಾಲೆಗಳು ಪೂರ್ತಿ ವರ್ಷದ ಶುಲ್ಕ ತೆಗೆದುಕೊಳ್ಳಬಾರದು. ಸರ್ಕಾರವೇ ಶುಲ್ಕ ಪರಿಷ್ಕರಿಸಿ ಆದೇಶ ಹೊರಡಿಸುವುದು ಒಳಿತು
-ಅನುಷಾ ಆನಂದಶಿವ, ಪೋಷಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು