ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಸಾಮಾಜಿಕ ನ್ಯಾಯಕ್ಕೆ ಶ್ರಮಿಸಿದ ಶಿವಾಜಿ

ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯಲ್ಲಿ ಹಾನಗಲ್ ಶಾಸಕ ಮಾನೆ ಅಭಿಪ್ರಾಯ
Published 11 ಮಾರ್ಚ್ 2024, 6:01 IST
Last Updated 11 ಮಾರ್ಚ್ 2024, 6:01 IST
ಅಕ್ಷರ ಗಾತ್ರ

ರಾಮನಗರ: ‘ಎಲ್ಲಾ ವರ್ಗಗಳ ಜನರಿಗೂ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮರಾಠ ಸಮುದಾಯಕ್ಕೆ ಸೀಮಿತರಲ್ಲ. ಅವರನ್ನು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲರ ಬಳಿಗೂ ಕೊಂಡೊಯ್ಯುವ ಕೆಲಸವಾಗಬೇಕು’ ಎಂದು ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹೇಳಿದರು.

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‌ ಮತ್ತು ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟ್ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಬಣ್ಣಗಳ ಮೂಲಕ ಭ್ರಾತೃತ್ವ ಮತ್ತು ಸಹೋದರತೆಯನ್ನು ಮರೆಮಾಚಿಸುವ ಕೆಲಸ ನಡೆಯು‌ತ್ತಿದೆ. ಕೇಸರಿ ತ್ಯಾಗದ ಸಂಕೇತವಾದರೆ, ಹಸಿರು ಅಭಿವೃದ್ಧಿಯ ಸಂಕೇತವಾಗಿದೆ. ಬಿಳಿಯು ಶಾಂತಿಯನ್ನು ಸೂಚಿಸುತ್ತದೆ. ಈ ಆಧಾರದ ಮೇಲಿನ ನಮ್ಮ ದೇಶದ ಧ್ವಜವನ್ನು ರೂಪಿಸಲಾಗಿದೆ. ಆದರೆ, ಇತ್ತೀಚೆಗೆ ಬಣ್ಣಗಳು ಧರ್ಮಾಧಾರಿತವಾಗಿ ಕೆಲಸ ನಿರ್ವಹಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಾತ್ರೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮ ದೇವತೆಗಳಿಗೆ ಹಸಿರು ಬಣ್ಣದ ಸೀರೆಯನ್ನು ತೊಡಿಸಲಾಗುತ್ತದೆ. ಅದೇ ರೀತಿ ಬೇರೆ ಸಮುದಾಯದಲ್ಲಿ ಕೇಸರಿ ಬಣ್ಣವನ್ನು ಉಪಯೋಗಿಸುತ್ತಾರೆ. ಕೇಸರಿ ಬಣ್ಣ ತೋರಿಸಿ ದ್ವೇಷ ಬಿತ್ತುವ ಕೆಲಸ ನಿಲ್ಲಿಸಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವಿರುದ್ಧ ಕೆಲವೊಂದು ಸಂಕುಚಿತ ಭಾವನೆ ಹೊಂದಲಾಗಿದೆ. ಈ ಭಾವನೆ ಬದಲಾಗಬೇಕು. ವಿಶ್ವದಲ್ಲಿ ಮೊದಲ ಎರಡು ಸ್ಥಾನ ಹೊಂದಿರುವ ರಾಷ್ಟ್ರಗಳು, ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನ ಗೋಸಾಯಿ ಮಹಾ ಸಂಸ್ಥಾನ ಮಠದ ವೇದಾಂತಾಚಾರ್ಯ ಮಂಜುನಾಥ ಸ್ವಾಮಿ ಮಾತನಾಡಿ, ‘ಛತ್ರಪತಿ ಶಿವಾಜಿ ಮಹಾರಾಜರನ್ನು ವಿವಿಧ ಆಯಾಮಗಲ್ಲಿ ನೋಡುವ ಕೆಲಸ ಮಾಡಲಾಗುತ್ತಿದೆ. ಶಿವಾಜಿ ಮಹಾರಾಜರನ್ನು ಮುಖ್ಯವಾಗಿ ಧಾರ್ಮಿಕ ಹಿನ್ನಲೆಯಲ್ಲಿ ನೋಡಬೇಕಾಗಿದೆ. ಕೆಲವರಿಗೆ ಶಿವಾಜಿ ಮಹಾರಾಜರು ಮರಾಠ ಧರ್ಮದ ಪ್ರತಿಪಾದನೆ, ಹಿಂದೂ ರಾಜ್ಯ ಸ್ಥಾಪನೆ, ಸ್ವರಾಜ್ಯ ಸ್ಥಾಪನೆಯ ಪ್ರತಿಪಾದನೆಯಾಗಿ ಕಾಣಿಸಲಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿರ್ದೇಶಕ ಡಾ. ಪ್ರಕಾಶ್ ಪಾಗೋಜಿ, ‘ಮರಾಠ ಸಮುದಾಯದ ಅಭಿವೃದ್ಧಿಗೆ ನಿಗಮ ಮಂಡಳಿಯಲ್ಲಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಇದನ್ನು ಸಮುದಾಯದವರು ಸದ್ಬಳಕೆ ಮಾಡಿಕೊಳ್ಳಬೇಕು. ಉತನ್ನ ಶಿಕ್ಷಣಕ್ಕಾಗಿ ನಿಗಮದಿಂದ ಶೇ 2ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಶೂನ್ಯ ಬಡ್ಡಿದರದಲ್ಲಿ ₹20 ಲಕ್ಷದ ತನಕ ಸಾಲ ನೀಡಲಾಗುತ್ತಿದೆ’ ಎಂದರು.

ಛತ್ರಪತಿ ಶಿವಾಜಿ ಸೇನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕವಿತಾ ರಾವ್, ‘ರಾಜ್ಯದಲ್ಲಿ ಮರಾಠ ಸಮುದಾಯವನ್ನು ‍ಪ್ರವರ್ಗ 3 ‘ಬಿ’ಯಿಂದ ಪ್ರವರ್ಗ 2 ‘ಎ’ಗೆ ಸೇರಿಸಬೇಕು. ರಾಜ್ಯದಲ್ಲಿ ಮರಾಠ ಸಮುದಾಯ ಭವನಗಳಿಲ್ಲ, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳಿಲ್ಲ. ಇವೆರಡಕ್ಕೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಮುದಾಯದ ಶಾಸಕರಾದ ಮಾನೆ ಅವರು ಸರ್ಕಾರದ ಗಮನ ಸೆಳೆಯಬೇಕು’ ಎಂದು ಮನವಿ ಮಾಡಿದರು.

ಪರಿಷತ್‍ನ ರಾಜ್ಯಾಧ್ಯಕ್ಷ ಸುರೇಶ್ ರಾವ್ ಸಾಠೆ ಮತ್ತು ನಗರಸಭೆ ಸದಸ್ಯ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಮಾಜಿ ಶಾಸಕ ಕೆ. ರಾಜು, ಪರಿಷತ್‍ನ ರಾಜ್ಯ ಖಜಾಂಚಿ ವೆಂಕಟರಾವ್ ಚವ್ಹಾಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಚವ್ಹಾಣ, ಉಪಾಧ್ಯಕ್ಷ ಎಸ್.ಆರ್. ಶಿಂಧೆ, ಜಿಲ್ಲಾಧ್ಯಕ್ಷ ಸೋಮಶೇಖರ ರಾವ್ ಕಾಂಬ್ಳೆ, ವ್ಯವಸ್ಥಾಪಕ ಶ್ರೀನಿವಾಸ್ ಮಗರ್, ಸಮುದಾಯದ ಮುಖಂಡರಾದ ಜನಗ್ನಾಥ್ ರಾವ್ ಶಿಂಧೆ, ವಿಜೇಂದ್ರ ಜಾಧವ್, ಡಾ. ಉಮಾಮೂರ್ತಿ ರಾವ್, ಪ್ರವೀಣ್ ಮಾನೆ, ಸೋನಾಬಾಯಿ ಖಾಂಡೆ, ಅರವಿಂದ್, ಸಿ.ಎನ್.ಆರ್. ವೆಂಕಟೇಶ್ ಹಾಗೂ ಇತರರು ಇದ್ದರು. 

ರಾಮನಗರದಲ್ಲಿ ಭಾನುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಜೂನಿಯರ್ ಕಾಲೇಜು ಮೈದಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಶಿವಾಜಿ ಸ್ತಬ್ಧಚಿತ್ರ ಹಾಗೂ ಜಾನಪದ ಕಲಾತಂಡಗಳ ಮೆರವಣಿಗೆ ಜರುಗಿತು
ರಾಮನಗರದಲ್ಲಿ ಭಾನುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಜೂನಿಯರ್ ಕಾಲೇಜು ಮೈದಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಶಿವಾಜಿ ಸ್ತಬ್ಧಚಿತ್ರ ಹಾಗೂ ಜಾನಪದ ಕಲಾತಂಡಗಳ ಮೆರವಣಿಗೆ ಜರುಗಿತು

'ಜಾತಿ ಗಣತಿ ಆಧರಿಸಿ ಮೀಸಲಾತಿ'

‘ಜಾತಿ ಗಣತಿ ಆಧಾರದ ಮೇಲೆ ರಾಜ್ಯದ ಮರಾಠ ಸಮುದಾಯದವರಿಗೆ ಸರಕಾರ ಮೀಸಲಾತಿ ನೀಡಲಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಜಾತಿ ಗಣತಿ ವರದಿಯು ಸರ್ಕಾರದ ಕೈ ಸೇರಿದೆ. ಈ ವರದಿಯಲ್ಲಿ ಸಮುದಾಯದ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ರಾಜ್ಯದಲ್ಲಿನ ಮರಾಠ ಸಮುದಾಯದವರಿಗೆ ಮೀಸಲಾತಿ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಮರಾಠ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಅದೇ ರೀತಿ ರಾಮನಗರದಲ್ಲೂ ಭವನ ತಲೆ ಎತ್ತಲಿದೆ. ಸಮುದಾಯದ ಅಭಿವೃದ್ಧಿ ಸರ್ಕಾರ ಸದಾ ಬದ್ಧವಾಗಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಗಮನ ಸೆಳೆದ ಮೆರವಣಿಗೆ ಜಯಂತಿ ಅಂಗವಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಐಜೂರು ವೃತ್ತದವರೆಗೆ ಶಿವಾಜಿ ಮಹಾರಾಜರ ಸ್ತಬ್ಧಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ಅಶ್ವಾರೂಢ ಶಿವಾಜಿ ವೇಷಧಾರಿ ಶಿವಾಜಿ ವಂಶಸ್ಥರ ಭಾವಚಿತ್ರಗಳು ಹಾಗೂ ಶಿವಾಜಿ ಪ್ರತಿಮೆ ಗಮನ ಸೆಳೆದವು. ಡೊಳ್ಳು ಕುಣಿತ ಹುಲಿವೇಷ ಸೇರಿದಂತೆ ಜನಪದ ಕಲೆಗಳು ಮೆರವಣಿಗೆಗೆ ಮೆರಗು ತಂದವು. ಯುವಜನರು ಡಿ.ಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು. ವೇದಿಕೆ ಕಾರ್ಯಕ್ರಮದಲ್ಲಿ ಶಾಂತಲಾ ಚಾರಿಟೇಬಲ್ ಟ್ರಸ್ಟಿನ ವಿದ್ಯಾರ್ಥಿನಿಯರು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT