ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ಅನುಷ್ಠಾನಕ್ಕೆ ಯತ್ನ: ಕೋಡಿಹಳ್ಳಿ ಚಂದ್ರಶೇಖರ್

ಅನ್ನದಾತರನ್ನು ಮರೆತ ಸಿದ್ದರಾಮಯ್ಯ: ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ
Published 7 ನವೆಂಬರ್ 2023, 15:13 IST
Last Updated 7 ನವೆಂಬರ್ 2023, 15:13 IST
ಅಕ್ಷರ ಗಾತ್ರ

ರಾಮನಗರ: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನ್ನದಾತರನ್ನು ಮರೆತಿದೆ. ರೈತರ ಪಾಲಿಗೆ ಕರಾಳವಾಗಿರುವ ಎಪಿಎಂಸಿ ಮತ್ತು ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಯಾವುದೇ ರೀತಿಯಲ್ಲೂ ಅವಕಾಶ ನೀಡುವುದಿಲ್ಲ. ರೈತರು ಇದರ ವಿರುದ್ಧ ಬೀದಿಳಿದು ಹೋರಾಟ ಮಾಡಲಿದ್ದಾರೆ’ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

‘ಕಾಂಗ್ರೆಸ್‌ನವರು ತಾವು ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಿವಾದಿತ ಎರಡೂ ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿತ್ತು. ತಾವು ಅಧಿಕಾರಕ್ಕೆ ಬಂದರೆ, ಎರಡೂ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು. ಇದೀಗ, ತಮ್ಮ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದ ಸಚಿವ ಶಿವಾನಂದ ಪಾಟೀಲ ಅವರು, ಪ್ರತಿಪಕ್ಷದವರು ವಿರೋಧಿಸುತ್ತಿದ್ದಂತೆ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. ನಂತರ, ಈ ವಿಷಯದ ಕುರಿತು ಎಲ್ಲಿಯೂ ತುಟಿ ಬಿಚ್ಚುತ್ತಿಲ್ಲ. ಬದಲಿಗೆ, ತಾವು ಪ್ರವಾಸ ಮಾಡಿದ ಕಡೆಯೆಲ್ಲಾ ಎಪಿಎಂಸಿ ಕಾಯ್ದೆ ಪರವಾಗಿ ಅಭಿಪ್ರಾಯ ಮೂಡಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ತನ್ನ ನಡೆಗೆ ಪೂರಕವಾಗಿ ಕೃಷಿ ಮಾರುಕಟ್ಟೆಯ ವ್ಯಾಪಾರಿಗಳಿಗೆ ನೊಟೀಸ್ ನೀಡುತ್ತಿದೆ. ಅವರ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಹೇಳುತ್ತಿದೆ. ಮುಂದೆ ನಮ್ಮ ಮಾರುಕಟ್ಟೆಗಳನ್ನು ಕಾರ್ಪೊರೇಟ್ ಸಂಸ್ಥೆಗೆ ನೀಡುವ ಹುನ್ನಾರ ನಡೆಸುತ್ತಿದೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ಬೆಂಬಲಿಸಿದ್ದ ಇದೇ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಈಗ ರಾಜ್ಯದಲ್ಲಿ ಅಂತಹದ್ದೆ ಕಾಯ್ದೆ ತರಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.

‘ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ತೇಲುತ್ತಿರುವ ಸಿದ್ದರಾಮಯ್ಯ ಅವರು ಸರ್ಕಾರದ ಆದಾಯ ಹೆಚ್ಚಳಕ್ಕೆ ರೈತರ ಕೃಷಿ ಭೂಮಿ ಮಾರಾಟ ವಹಿವಾಟನ್ನು ಪ್ರೋತ್ಸಾಹಿಸುತ್ತಿದ್ದಾರೆ.ನೋಂದಣಿ ಕಚೇರಿಗಳು ರಾತ್ರಿವರೆಗೆ ಕೆಲಸ ಮಾಡುತ್ತಿವೆ. ಮಾರ್ಗಸೂಚಿ ಬೆಲೆ ಹೆಚ್ಚಿಸಿ ₹6 ಸಾವಿರ ಕೋಟಿ ಆದಾಯದ ಗುರಿಯನ್ನು ₹34 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ’ ಎಂದು ದೂರಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೈರೇಗೌಡ ಹಾಗೂ ರೈತ ಮುಖಂಡರು ಇದ್ದರು.

‘ರೈತರು ಬೀದಿಗೆ ಬರಲಿದ್ದಾರೆ’

‘ಸರ್ಕಾರವು ಈಗಾಗಲೇ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ–1961ರ ಪ್ರಕಾರ, ಅನ್ಯ ಉದ್ದೇಶಕ್ಕೆ ಕೃಷಿ ಭೂಮಿ ಬಳಸುವಂತಿಲ್ಲ. ಕೃಷಿಕರಲ್ಲದೆ, ಬೇರೆಯವರು ಖರೀದಿಸುವಂತಿಲ್ಲ. ಇಂತಹ ಕಾಯ್ದೆಗೆ ಬಿಜೆಪಿ ಸರ್ಕಾರ 2020ರಲ್ಲಿ ತಿದ್ದುಪಡಿ ತಂದು, ಬಂಡವಾಳಶಾಹಿಗಳು ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿದೆ. ಇದರಿಂದಾಗಿ, ಜಮೀನು ಕಳೆದುಕೊಂಡು ಬೀದಿಗೆ ಬರಲಿದ್ದಾರೆ. ಮುಂದೆ ದೇಶದಲ್ಲಿ ಆಹಾರ ಕೊರತೆ ಕಾಡಲಿದೆ’ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.

‘ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಮತ್ತು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಕುರಿತು ಪ್ರಸ್ತಾಪಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರೈತರ ಭೂಮಿಗೆ ಅಡಿ ಲೆಕ್ಕದಲ್ಲಿ ಬೆಲೆ ತಂದುಕೊಡುವ ಮಾತುಗಳನ್ನಾಡುತ್ತಿರುವುದು ಅಪಾಯಕಾರಿ. ಅವರ ಮಾತಿನ ಹಿಂದೆ, ರೈತರ ಭೂಮಿಯನ್ನು ಪರೋಕ್ಷವಾಗಿ ಅವರೇ ಖರೀದಿಸಿ, ಕಡೆಗೆ ಅನ್ನದಾತರನ್ನು ಬೀದಿಗೆ ತಳ್ಳುವ ಲೆಕ್ಕಾಚಾರವಿದೆ’ ಎಂದು ಹೇಳಿದರು.

ರಾಹುಲ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ

ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನ. 20ರಂದು ರೈತ ಸಂಘದಿಂದ ಪ್ರಚಾರ ಮಾಡಲಾಗುವುದು. ಕೇಂದ್ರದ ಕಾಯ್ದೆಗಳನ್ನು ವಿರೋಧಿಸಿದ್ದ ರಾಹುಲ್, ರಾಜ್ಯದಲ್ಲಿ ಅಂತಹದ್ದೇ ಕಾಯ್ದೆ ತರುತ್ತಿದ್ದರೂ ಪ್ರಶ್ನಿಸುತ್ತಿಲ್ಲ. ಹಾಗಾಗಿ, ‘ಇವರನ್ನು ನಂಬಬೇಡಿ’ ಎಂದು ರಾಹುಲ್ ಅವರ ವಿರುದ್ಧ ಪ್ರಚಾರ ಮಾಡಲಾಗುವುದು’ ಎಂದು ತಿಳಿಸಿದರು.

ರಾಮನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠೀಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಬೈರೇಗೌಡ ಇದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT