ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕಾಲುವೆ ಆವರಿಸಿದ ಕಸ, ಗಿಡಗಂಟಿ: ಮಳೆ ಬಂದರೆ ರಸ್ತೆ ಮೇಲೆ ಹರಿಯುವ ನೀರು

ಮಳೆಗಾಲ ಬಂದರೂ ಸ್ವಚ್ಛತೆಗೆ ಮುಂದಾಗದ ಗ್ರಾಮ ಪಂಚಾಯಿತಿ
ವಿವೇಕ್ ಕುದೂರು
Published 17 ಜೂನ್ 2024, 6:10 IST
Last Updated 17 ಜೂನ್ 2024, 6:10 IST
ಅಕ್ಷರ ಗಾತ್ರ

ಕುದೂರು: ಪಟ್ಟಣದ ರಾಜಕಾಲುವೆಗಳು ಕಸ ಮತ್ತು ಹೂಳಿನಿಂದ ತುಂಬಿ ಹೋಗಿವೆ. ಸಾಲದ್ದಕ್ಕೆ ಮಾರ್ಗದುದ್ದಕ್ಕೂ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಮಳೆಗಾಲಕ್ಕೆ ಮುಂಚೆಯೇ ರಾಜಕಾಲುವೆಗಳಲ್ಲಿರುವ ಕಸವನ್ನು ತೆರವುಗೊಳಿಸಿ, ಹೂಳು ತೆಗೆಸಬೇಕಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ, ಜವಾಬ್ದಾರಿ ಮರೆತು ಕೈ ಕಟ್ಟಿ ಕುಳಿತಿದೆ. 

ವರ್ಷದಿಂದ ಕಟ್ಟಿಕೊಂಡಿರುವ ಕಸ ಮತ್ತು ಹೂಳಿನಿಂದಾಗಿ ರಾಜಕಾಲುವೆಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದ ಸ್ಥಿತಿ ಇದೆ. ಜೋರಾಗಿ ಮಳೆ ಬಂದರೆ ಕಾಲುವೆ ನೀರು ಮುಂದಕ್ಕೆ ಸಾಗುವ ಬದಲು, ಅಲ್ಲಿಯೇ ಕಟ್ಟಿಕೊಂಡು ರಸ್ತೆ ಮೇಲೆ ಹರಿಯುತ್ತದೆ. ಇತ್ತೀಚೆಗೆ ಸುರಿದ ಮಳೆಯಲ್ಲಿ  ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗುವ ಅಪಾಯ ಎದುರಾಗಿದೆ.

ಬಳಸಿ ಬಿಸಾಡಿದ ಪ್ಲಾಸ್ಟಿಕ್ ಕವರ್, ಬಾಟಲಿಗಳು, ಮೂಟೆಯಲ್ಲಿ ತುಂಬಿದ ತ್ಯಾಜ್ಯವನ್ನು ಚರಂಡಿ ಮತ್ತು ರಾಜಕಾಲುವೆಗಳಿಗೆ ಸ್ಥಳೀಯರೇ ಗೊತ್ತಾಗದಂತೆ ತಂದು ಎಸೆದು ಹೋಗುತ್ತಾರೆ. ಇದರಿಂದಾಗಿ ಇವುಗಳಲ್ಲಿ ಹೂಳು ಸಂಗ್ರಹಗೊಂಡು ಕೊಳಚೆ ನೀರು ಸರಾಗವಾಗಿ ಹರಿದು ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಸಾಂಕ್ರಾಮಿಕ ರೋಗ ಭೀತಿ: ‘ಪಟ್ಟಣದ ಚರಂಡಿಗಳು ಮತ್ತು ರಾಜಕಾಲುವೆಗಳು ಕಸ ಎಸೆಯುವ ತಾಣಗಳಾಗಿವೆ. ಮನೆಗಳು ಹಾಗೂ ಕೆಲ ಅಂಗಡಿಗಳ ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ಲಾಸ್ಟಿಕ್‌ನಲ್ಲಿ ತಂದು ಎಸೆಯುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ, ಸಾಂಕ್ರಾಮಿಕ ರೋಗಗಳ ಆತಂಕದಲ್ಲಿ ಜನರು ಜೀವನ ನಡೆಸುವಂತಾಗಿದೆ’ ಎಂದು ಸ್ಥಳೀಯ ನಿವಾಸಿಯಾದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯತಿರಾಜು ಕೆ.ಆರ್ ದೂರಿದರು.

‘ರಾಜಕಾಲುವೆಯು ದುರ್ನಾತ ಬೀರುತ್ತಿದ್ದು, ರಸ್ತೆಯಲ್ಲಿ ಹೋಗುವಾಗ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ರಾಜಕಾಲುವೆ ಅಕ್ಕಪಕ್ಕ ವಾಸಿಸುವವರಲ್ಲಿ ಜ್ವರ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದೆ. ಸ್ಥಳೀಯ ಆಡಳಿತ ಈಗಲಾದರೂ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ರಾಜಕಾಲುವೆಯನ್ನು ಹಲವೆಡೆ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಕೆಲವರು ಪಂಚಾಯಿತಿ ಸಭೆಯಲ್ಲೂ ಪ್ರಸ್ತಾಪಿಸಿದ್ದುಂಟು. ಆದರೆ, ಇದುವರೆಗೆ ಒತ್ತುವರಿ ತೆರವುಗೊಳಿಸುವ ಕೆಲಸಕ್ಕೆ ಪಂಚಾಯಿತಿ ಅಧಿಕಾರಿಗಳು ಮುಂದಾಗಿಲ್ಲ. ಒತ್ತುವರಿ ಮಾಡಿರುವವರ ಹಿಂದೆ ಪ್ರಭಾವಿಗಳಿದ್ದಾರೆಂಬ ಭಯಕ್ಕೆ ಅಧಿಕಾರಿಗಳು ಒತ್ತುವರಿ ತೆರವಿಗೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ರಸ್ತೆ ಮೇಲೆ ಹರಿಯುವ ನೀರು: ‘ಮಳೆ ಬಂದಾದರೆ ಇಲ್ಲಿನ ಶಿವಗಂಗೆ ಮುಖ್ಯರಸ್ತೆಯ ಮಹಾತ್ಮ ನಗರದ ಪೆಟ್ರೋಲ್ ಬಂಕ್ ಬಳಿಯ ರಾಜಕಾಲುವೆಗಲ್ಲಿ ಹರಿಯಬೇಕಾದ ನೀರು ರಸ್ತೆ ಮೇಲೆ ಹರಿಯಲಾರಂಭಿಸುತ್ತದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ, ಪರಿಹಾರ ಮಾತ್ರ ಸಿಕ್ಕಿಲ್ಲ. ಕಡೆ ಪಕ್ಷ ಮುನ್ನೆಚ್ಚರಿಕೆ ಕ್ರಮವನ್ನು ಸಹ ಸ್ಥಳೀಯ ಆಡಳಿತ ಕೈಗೊಂಡಿಲ್ಲ’ ಎಂದು ಮಹಾತ್ಮ ನಗರ ನಿವಾಸಿ ನಟರಾಜು ಬೇಸರ ವ್ಯಕ್ತಪಡಿಸಿದರು.

‘ಹಿಂದೆ ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿದು ಬರಲು ರಾಜಕಾಲುವೆ ನಿರ್ಮಿಸಲಾಗಿತ್ತು. ಈಗ ಕೆಲವರ ಅತಿಯಾಸೆಯಿಂದ ರಾಜಕಾಲುವೆ ಒತ್ತುವರಿಯಾಗಿದೆ. ಇದರಿಂದಾಗಿ, ಕಾಲುವೆಗಳು ಹೂಳು ಮತ್ತು ಜಡ ಸಸ್ಯರಾಶಿಗಳಿಂದ ತುಂಬಿಕೊಂಡಿದೆ. ನೀರು ರಾಜಕಾಲುವೆ ಸೇರದೆ ರಸ್ತೆಯಲ್ಲೇ ನಿಲ್ಲುವಂತಾಗಿದೆ. ಒತ್ತುವರಿ ತೆರವು ಮತ್ತು ಸ್ವಚ್ಛತೆಗೆ ಒತ್ತಾಯಿಸಿ ಸ್ಥಳೀಯರು ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದರು.

‘ತಿಂಗಳ ಆರಂಭದಲ್ಲಿ ಪಟ್ಟಣದಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಧಾರಾಕಾರವಾಗಿ ಮಳೆ ಸುರಿಯಿತು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಹಾತ್ಮನಗರ ಬಡಾವಣೆಯ ಶನಿ ಮಹಾತ್ಮ ದೇವಾಲಯದಿಂದ ಕೆಳಮುಖವಾಗಿ ಹರಿದು ಬಂದ ಮಳೆ ನೀರು, ಪೆಟ್ರೋಲ್ ಬಂಕ್ ಸಮೀಪದ ಸೇತುವೆಯ ಮೇಲೆ ನಿಂತಿತು. ಇದರಿಂದ ವಾಹನ ಸವಾರರು ಪರದಾಡಿದರು. ಕುದೂರು –ಶಿವಗಂಗೆ ಮುಖ್ಯರಸ್ತೆಯ ಸೇತುವೆ ಸಹ ಶಿಥಿಲಾವಸ್ಥೆ ತಲುಪಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಅದನ್ನು ಸಹ ದುರಸ್ತಿ ಮಾಡಬೇಕಿದೆ’ ಎಂದು ಸ್ಥಳೀಯರಾದ ಪಾನಿಪುರಿ ಶಂಕರ್ ಆಗ್ರಹಿಸಿದರು.

ರಾಜಕಾಲುವೆಗಳು ಹಾಗೂ ಚರಂಡಿಗಳ ಸ್ವಚ್ಛತೆಗೆ ಈಗಲೇ ಕ್ರಮ ಕೈಗೊಳ್ಳದಿದ್ದರೆ, ಮಳೆಗಾಲದಲ್ಲಿ ದೊಡ್ಡ ಆವಾಂತರ ಸಂಭವಿಸುವುದರಲ್ಲಿ ಎರಡು ಮಾತಿಲ್ಲ. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಮುಂದಾಗಬೇಕು. ಇಲ್ಲದಿದ್ದರೆ, ಸ್ಥಳೀಯರ ನೇತೃತ್ವದಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಹಾತ್ಮ ನಗರದ ನಿವಾಸಿಗಳು ಎಚ್ಚರಿಕೆ ನೀಡಿದರು.

ಕುದೂರು ಪಟ್ಟಣದ ಶಿವಗಂಗೆ ಮುಖ್ಯ ರಸ್ತೆಯ ರಾಜಕಾಲುವೆಯನ್ನು ಆವರಿಸಿರುವ ಗಿಡಗಂಟಿಗಳು
ಕುದೂರು ಪಟ್ಟಣದ ಶಿವಗಂಗೆ ಮುಖ್ಯ ರಸ್ತೆಯ ರಾಜಕಾಲುವೆಯನ್ನು ಆವರಿಸಿರುವ ಗಿಡಗಂಟಿಗಳು
ಕುದೂರಿನ ಸಂತೆ ಬೀದಿ ರಸ್ತೆ ಬಡಾವಣೆಯ ಚರಂಡಿಯಲ್ಲಿ ಹೂಳು ಹೆಚ್ಚಾಗಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಿರುವುದು
ಕುದೂರಿನ ಸಂತೆ ಬೀದಿ ರಸ್ತೆ ಬಡಾವಣೆಯ ಚರಂಡಿಯಲ್ಲಿ ಹೂಳು ಹೆಚ್ಚಾಗಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತಿರುವುದು
ಕುದೂರು ಪಟ್ಟಣದ ಮಾರುತಿನಗರದ ಚರಂಡಿಯ ಸ್ಥಿತಿ
ಕುದೂರು ಪಟ್ಟಣದ ಮಾರುತಿನಗರದ ಚರಂಡಿಯ ಸ್ಥಿತಿ
ಮಾರಪ್ಪನಪಾಳ್ಯ ಮುಖ್ಯರಸ್ತೆಯಲ್ಲಿ ಸಾರ್ವಜನಿಕರು ಚರಂಡಿಗಳಿಗೆ ಕಸ ಸುರಿಯುವುದರಿಂದ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಪಂಚಾಯಿತಿಯವರು ಆದಷ್ಟು ಬೇಗ ಚರಂಡಿ ಸ್ವಚ್ಛಗೊಳಿಸಬೇಕು. ಕಸ ಸುರಿಯದಂತೆ ಕ್ರಮ ಕೈಗೊಳ್ಳಬೇಕು
– ಯತಿರಾಜು ಕೆ.ಆರ್ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕುದೂರು
ಪಂಚಾಯಿತಿಯವರು ರಾಜಕಾಲುವೆಗಳ ನಿರ್ವಹಣೆಯನ್ನೇ ಮರೆತಿದ್ದು ಈಗಲಾದರೂ ಎಚ್ಚೆತ್ತುಕೊಂಡು ದುರಸ್ತಿ ಮಾಡಬೇಕು. ಮಹಾತ್ಮ ನಗರದದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯಾಗಬೇಕಿದೆ
– ನಟರಾಜು ಮಹಾತ್ಮ ನಗರ ನಿವಾಸಿ
ಸ್ಥಳೀಯ ಆಡಳಿತವು ಕಾಲಕಾಲಕ್ಕೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿದರೆ ಮಳೆ ಸುರಿದರೂ ಅನಾಹುತ ಸಂಭವಿಸುವುದಿಲ್ಲ. ರಸ್ತೆ ಸುತ್ತಮುತ್ತ ಕಸ ಸುರಿಯುವುದನ್ನು ಸಾರ್ವಜನಿಕರು ನಿಲ್ಲಿಸಬೇಕಿದೆ. ಪರಿಸರ ಸ್ವಚ್ಛವಾಗಿದ್ದರೆ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗಲಿದೆ
– ಪಾನಿಪುರಿ ಶಂಕರ್ ಸ್ಥಳೀಯ ನಿವಾಸಿ ಕುದೂರು
ಸ್ವಚ್ಛತೆಗೆ ಅಗತ್ಯ ಕ್ರಮ: ಪಿಡಿಒ
‘ಮಳೆಗಾಲದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದೇ ರೀತಿಯ ಮಳೆಹಾನಿ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ರಾಜಕಾಲುವೆ ಹಾಗೂ ಚರಂಡಿಗಳ ಹೂಳು ತೆಗೆದು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೆಲವೆಡೆ ಚರಂಡಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಲಾಗಿದೆ’ ಎಂದು ಕುದೂರು ಗ್ರಾಮ ಪಂಚಾಯಿತಿ ಪಿಡಿಒ ಪುರುಷೋತ್ತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT