ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿ ಉತ್ಪನ್ನ ಮಾರಾಟ ಮಳಿಗೆ ಪ್ರಾರಂಭ

Last Updated 7 ಫೆಬ್ರುವರಿ 2020, 13:25 IST
ಅಕ್ಷರ ಗಾತ್ರ

ಕುದೂರು(ಮಾಗಡಿ): ಬಡತನ ನಿರ್ಮೂಲನೆಗೆ ಸ್ವ ಉದ್ಯೋಗ ದಾರಿದೀಪವಾಗಲಿವೆ ಎಂದು ಧರ್ಮಸ್ಥಳ ಸಿರಿ ಗ್ರಾಮೊದ್ಯೋಗ ಸಂಸ್ಥೆಯ ಸಿರಿ ಮಾರುಕಟ್ಟೆ ಯೋಜನಾಧಿಕಾರಿ ಪವಿತ್ರೇಶ್‌ ತಿಳಿಸಿದರು.

ಗ್ರಾಮದ ಬಸ್‌ ನಿಲ್ದಾಣದಲ್ಲಿ ಸಿರಿ ಗ್ರಾಮೋದ್ಯೋಗ ಮಾರಾಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ದೇಶೀಯ ಕರುಕುಶಲಕರ್ಮಿಗಳು ನಡೆಸುತ್ತಿದ್ದ ಗುಡಿ ಕೈಗಾರಿಗಳನ್ನು ನಾಶ ಮಾಡಿದ ಬಹುರಾಷ್ಟ್ರೀಯ ಕಾರ್ಖಾನೆಗಳು ನಮ್ಮ ಗ್ರಾಮೀಣ ಆರ್ಥಿಕ ಪರಿಸ್ಥಿತಿಯನ್ನು ನಾಶ ಮಾಡಿದವು. ಸಸಿಯ ಬುಡಕ್ಕೆ ನೀರೆರೆದರೆ ಮಾತ್ರ ಸಸಿ ಬೆಳೆದು ಮರವಾಗಿ ಹೂವು ಹಣ್ಣು ಕೊಡಲಿದೆ ಎಂಬುದು ಹಿರಿಯರ ಮಾತಾಗಿತ್ತು. ಗ್ರಾಮೀಣ ಮಹಿಳೆಯರು ಮನೆಯಿಂದ ಹೊರಗೆ ಬಂದು ಸ್ವ ಉದ್ಯೋಗ ಆರಂಭಿಸುವ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು ಎಂದರು.

ಸಬ್‌ ಇನ್‌ಸ್ಪೆಕ್ಟರ್‌ ಟಿ.ಎಚ್‌. ಮಂಜುನಾಥ್ ಮಾತನಾಡಿ, ದೇಶಿಯ ಪೌಷ್ಟಿಕ ಆಹಾರ ಉತ್ಪನ್ನಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವುದೆ ಇನ್ನಿಲ್ಲದ ರೋಗಗಳಿಗೆ ಕಾರಣವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಭಾಗದಲ್ಲಿ ಹೆಚ್ಚಾಗಿ ಕಲಬೆರೆಕೆ ಉತ್ಪನ್ನಗಳನ್ನು ಬಳಕೆ ಮಾಡಬೇಡಿ. ಸಿರಿ ಉತ್ಪನ್ನಗಳಲ್ಲಿ ಯಾವುದೇ ಕಲಬೆರಕೆಯು ಇಲ್ಲದೆ ಆರೋಗ್ಯಕ್ಕೆ ಉತ್ತಮವಾದ ಉತ್ಪನ್ನಗಳು ದೊರೆಯುತ್ತವೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಮಾತನಾಡಿ. ಸಿರಿಧಾನ್ಯಗಳನ್ನು ಬಳಸಿ, ಆರೋಗ್ಯವಂತರಾಗಿ ಎಂದರು.

ಸಿರಿ ಸಂಸ್ಥೆಯ ವ್ಯಾಪಾರ ಮಳಿಗೆಯಲ್ಲಿ ಕೊಬ್ಬರಿ ಎಣ್ಣೆ, ಸಿರಿಧಾನ್ಯಗಳಾದ ನವಣೆ, ಹಾರಕ, ಸಜ್ಜೆ, ಉದುಲು, ಬರುಗು, ಸಾಮೆ, ಕೊರಲೆ, ರಾಗಿ, ಜೋಳ, ಜೇನುತುಪ್ಪ, ಸಿರಿಪುಷ್ಟಿ, ಉಪ್ಪಿನಕಾಯಿ, ಹಪ್ಪಳ, ನಿಂಬೆ, ಹುಣಸೆ, ಮಾವು, ಫಿನಾಯಿಲ್, ಪ್ಲೋರ್ವಾಶ್, ಹ್ಯಾಂಡ್ವಾಶ್, ನೆಲ್ಲಿಕಾಯಿ ಎಣ್ಣೆ, ಪೇನ್ ಎಣ್ಣೆ, ಕೇಷ ತೈಲ, ಅಗರಭತ್ತಿ ವಿಭೂತಿ, ಮೋಗ್ರ, ಶ್ರೀಗಂಧ, ಚಂಪ,ಕೋಕಂ ಜ್ಯೂಸ್, ಉತ್ಪನ್ನಗಳು ದೊರೆಯುತ್ತವೆ ಎಂದು ಸಿರಿ ಪ್ರಾದೇಶಿಕ ಸಮನ್ವಯಾಧಿಕಾರಿ ಹರೀಶ್ ತಿಳಿಸಿದರು.

ಮೇಲ್ವಿಚಾರಕಿ ರಾಜಲಕ್ಷ್ಮಿ, ಸಿರಿ ಜಿಲ್ಲಾ ಸಮನ್ವಯಾಧಿಕಾರಿ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT