ಗುರುವಾರ , ಏಪ್ರಿಲ್ 15, 2021
21 °C
ಕೊಳ್ಳೇಗಾಲ ಭಾಗದಲ್ಲಿ ಕಳ್ಳಬೇಟೆ; ಆರೋಪಿಗಳಿಂದ ತಪ್ಪೊಪ್ಪಿಗೆ

ಗಾಂಜಾ, ಜಿಂಕೆ ಕೊಂಬು ಸಾಗಣೆ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಗಾಂಜಾ ಮತ್ತು ಜಿಂಕೆ ಕೊಂಬು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕನಕಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₨7 ಲಕ್ಷ ಮೌಲ್ಯದ 10 ಕೆ.ಜಿ. ಗಾಂಜಾ ಹಾಗೂ 10 ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ.

‘ಕೊಳ್ಳೇಗಾಲ ತಾಲ್ಲೂಕಿನ ಕೌದಳ್ಳಿ ಸಮೀಪದ ಪುದನಗರ ನಿವಾಸಿಗಳಾದ ವರದಯ್ಯ (55) ಹಾಗೂ ಮುತ್ತುರಾಜು (45) ಬಂಧಿತರು. ಆರೋಪಿಗಳು ಶಿವನಹಳ್ಳಿ–ಟಿ. ಬೇಕುಪ್ಪೆ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಬಂದಿದ್ದರು. ಖಚಿತ ಮಾಹಿತಿ ಆಧರಿಸಿ ಅವರನ್ನು ಬಂಧಿಸಲಾಯಿತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಗಿರೀಶ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಆರೋಪಿಗಳ ಬಳಿ ಐದು ಜೋಡಿ ಕೊಂಬುಗಳು ದೊರೆತಿವೆ. ಐದಾರು ತಿಂಗಳ ಹಿಂದೆಯೇ ಇವುಗಳನ್ನು ಸಂಗ್ರಹಿಸಲಾಗಿದೆ. ಕೊಳ್ಳೇಗಾಲ ಅರಣ್ಯದಲ್ಲಿ ಜಿಂಕೆಗಳನ್ನು ಹತ್ಯೆ ಮಾಡಿ ಇದನ್ನು ಸಂಗ್ರಹಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ. ದೂರವಾಣಿ ಕರೆ ಮೂಲಕ ತಮಗೆ ಬೇಡಿಕೆ ಸಲ್ಲಿಸಿದವರಿಗೆ ಈ ಉತ್ಪನ್ನಗಳನ್ನು ಆರೋಪಿಗಳು ಪೂರೈಸುತ್ತಿದ್ದರು’ ಎಂದು ಅವರು ವಿವರಿಸಿದರು.

ಚನ್ನಪಟ್ಟಣ ಡಿವೈಎಸ್ಪಿ ಕೆ.ಎನ್. ರಮೇಶ್‌ ನೇತೃತ್ವದಲ್ಲಿ ಕನಕಪುರ ಸಿಪಿಐ ಟಿ.ಟಿ. ಕೃಷ್ಣ, ಎಸ್‌ಐ ಅನಂತರಾಮು, ಸಿಬ್ಬಂದಿಯಾದ ಎಎಸ್‌ಐ ಮುನಿರಾಜು, ಪದ್ಮಶಂಕರ್, ಶಿವಶಂಕರ್, ಧನಂಜಯ್‌, ಮನು, ಜಯಣ್ಣ, ಮಹದೇವ ಶೆಟ್ಟಿ, ನವೀನ್‌, ನಿಂಗರಾಜು, ಪುನೀತ್‌, ವೆಂಕಟಅರಸು ಅವರನ್ನು ಎಸ್ಪಿ ಅಭಿನಂದಿಸಿದರು.

‌ಗಣಿಗಳಲ್ಲಿ ಶೋಧ

‘ಕ್ವಾರಿಗಳ ಸಮೀಪ ಸ್ಫೋಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲೆಡೆ ತಪಾಸಣೆ ಮಾಡಲಾಗಿದ್ದು, ಎಲ್ಲಿಯೂ ಅಕ್ರಮ ಕಂಡುಬಂದಿಲ್ಲ. ಲೈಸನ್ಸ್ ಪಡೆದವರ ಸಮ್ಮುಖದಲ್ಲೇ ನಿಯಮಾನುಸಾರ ಬ್ಲಾಸ್ಟಿಂಗ್ ನಡೆಸಬೇಕು. ಉಳಿದ ಸಾಮಗ್ರಿಯನ್ನು ನಿಗದಿತ ಸ್ಥಳದಲ್ಲೇ ಶೇಖರಣೆ ಮಾಡಬೇಕು ಎಂದು ಗಣಿ ಮಾಲೀಕರಿಗೆ ಸೂಚಿಸಲಾಗಿದೆ’ ಎಂದು ಎಸ್ಪಿ ತಿಳಿಸಿದರು. ಜಲ್ಲಿ, ಡಸ್ಟರ್ ಸೇರಿದಂತೆ ಕ್ರಷರ್‌ಗಳಿಂದ ಉತ್ಪನ್ನಗಳನ್ನು ಸಾಗಿಸುವ ಸಂದರ್ಭ ಸಂಪೂರ್ಣ ಮುಚ್ಚಿದ ಸ್ಥಿತಿಯಲ್ಲಿ ಕೊಂಡೊಯ್ಯಬೇಕು. ಇಲ್ಲವಾದಲ್ಲಿ ಸಾಗಣೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದರು.

ರಸ್ತೆ ಸುರಕ್ಷತೆಗೆ ಒತ್ತು

ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತೆ ಸಲುವಾಗಿ ಸೂಚನಾಫಲಕಗಳನ್ನು ಅಳವಡಿಸಬೇಕು. ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಪೊಲೀಸರಿಂದ ಅನುಮತಿ ಪಡೆದಿರಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಒಳ ರಸ್ತೆಗಳಲ್ಲೂ ಅಪಘಾತಗಳು ಹೆಚ್ಚುತ್ತಿದ್ದು, ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಎಸ್ಪಿ ತಿಳಿಸಿದರು.

***

ರಸ್ತೆ ಮಧ್ಯೆ ಏಕಾಏಕಿ ವಾಹನಗಳನ್ನು ತಡೆದು ತಪಾಸಣೆ ನಡೆಸದಂತೆ ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇನೆ. ಸವಾರರಿಗೆ ತೊಂದರೆ ಆಗದಂತೆ ತಪಾಸಣೆ ನಡೆಸಲಾಗುವುದು

-ಗಿರೀಶ್‌, ಎಸ್ಪಿ, ರಾಮನಗರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು